Home / ಕಥೆ / ಕಿರು ಕಥೆ / ಹನುಮನ ಶಾಪ

ಹನುಮನ ಶಾಪ

ಸೀತಾದೇವಿಗೆ ಲವಕುಶರನಂತರ ಮಕ್ಕಳಾಗಲೇ ಇಲ್ಲವೆ? ಪುರಾಣದಲ್ಲಿ ಅವಳಿಗೆ ತದನಂತರ ಪತಿಯ ಸಮಾಗಮ ಲಭಿಸಲಿಲ್ಲವೆಂದೇನೋ ಹೇಳಿದೆ. ನನ್ನ ಕತೆ ಮಾತ್ರ ಹೀಗಿದೆ.

“ಹಿಂದಕ್ಕೆ ನಾವು ವನವಾಸದಲ್ಲಿದ್ದಾಗ ನಮ್ಮ ಕುಟೀರದ ಎದುರಿಗೆ ಒಂದು ಮಲ್ಲಿಗೆ ಬಳ್ಳಿಯನ್ನು ಬೆಳೆಯಿಸಿದ್ದೆ, ನೆನಪಿದೆಯೇ ನಿಮಗೆ?”

“ಈಗ ಅದರ ನೆನಪೇಕಾಯಿತೋ ದೇವಿಗೆ!”

“ಆ ಬಳ್ಳಿಯ ಹೂವಿನ ಕಂಪಿನ ಸಮಾನವಾದುದು ಅಯೋಧ್ಯೆಯಲ್ಲಿ ನನಗೆ ಯಾವುದೂ ಸಿಗಲಿಲ್ಲ. ಅದೇ ಬಳ್ಳಿಯ ಹೂಗಳನ್ನು ತರಿಸಿಕೊಳ್ಳ ಬೇಕೆಂದು ಮನಸ್ಸಾಗಿದೆ.”

“ವ್ಹ! ಒಳ್ಳೆಯ ಬಯಕೆ. ಆ ಬಳ್ಳಿ ಈಗ ಅದೆಯೋ ಒಣಗಿದೆಯೋ ಯಾರು ಬಲ್ಲರು?”

“ಒಣಗಿರಲಾರದು”

“ಒಣಗಿರದಿದ್ದರೂ ತರುವದು ಸುಲಭವಲ್ಲ. ಕಾಂಚನಮೃಗ ಬೇಕೆಂದು ನೀನು ಹಟ ಹಿಡಿದಾಗ ಎಷ್ಟು ಫಜೀತಿಯಾಯಿತು ನೋಡು! ಮತ್ತೆ ನೀನು ಇಂತಹ ಬಯಕೆಯನ್ನು ಮಾಡುವದನ್ನು ನೋಡಿದರೆ…….. ”

ಸೀತಾದೇವಿಯು ನಾಚಿಕೆಯಿಂದ ತಲೆವಾಗಿದಳು. ಶ್ರೀ ರಾಮಚಂದ್ರ ದೇವನು ದಿವ್ಯ ಚಕ್ಷುವಿನಿಂದ ತನ್ನ ಪತ್ನಿಯು ಗರ್ಭವತಿಯೆಂಬುದನ್ನು ಕೂಡಲೆ ತಿಳಿದುಕೊಂಡುಬಿಟ್ಟನು!

“ಹಾಗಿದ್ದರೆ ನಿನ್ನ ಬಯಕೆಯನ್ನು ಈಡೇರಿಸಿ ಕೊಡಲೇಬೇಕಾಯಿತು.” ಅಂದವನೇ ಹನುಮಂತನನ್ನು ಕರೆದು ಪಂಚವಟಿಯ ಕುಟೀರದ ಎದುರಿನ ಮಲ್ಲಿಗೆ ಬಳ್ಳಿಯಿಂದ ಒಂದು ಬೊಗಸೆ ಹೂ ತರಲು ಆಜ್ಞಾಪಿಸಿದನು. ಸೀತಾ ದೇವಿಯು ಪತಿದೇವನ ಈ ಪತ್ನಿ ಭಕ್ತಿಗೆ ಹಿಗ್ಗಿದಳು.
X X X x

ಹನುಮಂತನು ಎಷ್ಟು ಹುಡುಕಿದರೂ ಆ ಮಲ್ಲಿಗೆಯ ಬಳ್ಳಿ ಕಾಣಲಿಲ್ಲ. ತಾನೇ ಎಷ್ಟೋಸಲ ನೀರೆರೆದ ಬಳ್ಳಿ ತನಗೇ ಕಾಣುವದಿಲ್ಲವಲ್ಲ ಎಂದು ಅವನು ಮಿಡುಕಿದನು. ಕಟ್ಟ ಕಡೆಗೆ ಅದು ಬತ್ತಿರಲು ಸಾಕೆಂದು ಅವನಿಗೆನಿಸಿತು. ಈ ವಿಚಾರ ದೇವದೇವಿಯರಿಗೆ ಹೊಳೆದಿರಲಿಕ್ಕಿಲ್ಲವೇ ಎಂದು ಅವನು ಪ್ರಶ್ನಿಸಿಕೊಂಡನು.

ಕೊನೆಗೆ ಬರಿಗೈಯಲ್ಲಿ ಮರಳಬೇಕಾಯಿತು.

ಮಲ್ಲಿಗೆ ಬಾರದುದನ್ನು ಕಂಡು ಸೀತಾದೇವಿಯು ಕಣ್ಣೀರು ಹಾಕಿದಳು. ಪತ್ನಿಯ ಕಂಬನಿಯನ್ನು ಕಂಡು ಶ್ರೀರಾಮಚಂದ್ರ ದೇವನು ತನ್ನ ಕಣ್ಣಿನಿಂದ ಹನುಮಂತನ ಮೇಲೆ ಕೆಂಡಕಾರಿದನು. “ಸರಿಯಾಗಿ ಹುಡುಕಲೇ ಇಲ್ಲ ನೀನು. ಇನ್ನೊಮ್ಮೆ ಹೋಗಿ ಸಂಶೋಧಿಸಿಕೊಂಡು ಬಾ” ಎಂದು ಆಜ್ಞೆಯಾಯಿತು.

“ಸ್ವಾಮಿಯಾಜ್ಞೆಯನಾಂತು ಹನುಮ ನಿಜಶಿರದೆ” ಮತ್ತೊಮ್ಮೆ ಪಂಚವಟಿಗೆ ಜಿಗಿದನು. ಪುನಃ ಗಿಡಗಿಡ, ಬಳ್ಳಿ ಬಳ್ಳಿಗಳನ್ನೆಲ್ಲ ಮುಟ್ಟಿ ಮುಟ್ಟಿ ಮೂಸಿ ಮೂಸಿ ನೋಡಿದನು. ಆದರೆ ಆ ಮಲ್ಲಿಗೆಯ ಬಳ್ಳಿ ಸಿಗಲಿಲ್ಲ.

ಕೆಟ್ಟ ಮೋರೆಮಾಡಿಕೊಂಡು ಬಂದು ದೇವದೇವಿಯರಿಗೆರಗಿ ಕುಳಿತನು. ಎರಡು ಸಲ ಹಾರಿದ ಶ್ರಮದಿಂದ ಆತನು ನಿರ್ವಿಣ್ಣನಾಗಿದ್ದನು.

ಈ ಸಲವೂ ಖಾಲಿಯಾದುದನ್ನು ತಿಳಿದು ಸೀತಮ್ಮನವರು ಮೂರ್ಚ್ಛೆ ಹೋದರು. ಅದನ್ನು ನೋಡಿ ಶ್ರೀರಾಮಚಂದ್ರ ದೇವನು ಎದುರು ಕುಳಿತ ಮಾರುತಿಯು ರಾವಣನೆಂಬಂತೆ ವರ್ತಿಸಿದನು.

“ಆ ಮಲ್ಲಿಗೆ ಸಿಗದಿದ್ದರೆ ಬೇರೆ ಯಾವದಾದರೊಂದು ಮಲ್ಲಿಗೆಯನ್ನು, ಮಲ್ಲಿಗೆಯೇ ಸಿಗದಿದ್ದರೆ ಮತ್ತಾವದಾದರೊಂದು ಹೂವನ್ನು ತರಬಾರದಿತ್ತೇ ಕಪಿಯೇ?” ಎಂದು ಗುಡುಗಿದನು ಸೀತಾಪತಿ.

ಹನುಮಂತನಿಗೆ ಬಹಳ ಅಪಮಾನವಾಯಿತು. “ಹಾಗೆಯೇ ಆಗಲಿ” ಎಂದು ಮೂರನೆಯಸಲ ಪಂಚವಟಿಗೆ ಹಾರಿದನು. ಹಸಿವೆ, ಶ್ರಮಗಳಿಂದ ಬಳಲಿದ ಆತನಲ್ಲಿ ಆ ಮಲ್ಲಿಗೆ ಬಳ್ಳಿಯು ಸತ್ತಿದ್ದರೂ ಚಿಗುರಿಸಿ ಅದರ ಹೂವನ್ನೇ ತರಬೇಕೆಂಬ ಹಟಮೂಡಿತು.

ಬತ್ತಿ ಬೆಂಡಾದ ಆ ಬಳ್ಳಿಯ ಅವಶೇಷ ಸಿಗುವುದರೊಳಗಾಗಿ ಆತನಿಗೆ ಬವಳಿ ಬರುವಂತಾಯಿತು. “ಇಂಥ ಬಯಕೆ ಯಾಗುವುದಕ್ಕಿಂತ ಬಸಿರೇ….” ಎಂದು ಅವನ ಬಾಯಿಯಿಂದ ಹೊರಟುಬಿಟ್ಟಿತು.

ಕಂಬನಿಯಿಂದ ಆ ಬಳ್ಳಿಯನ್ನು ಚಿಗುರಿಸಿ ಅದರ ಮೊಗ್ಗೆಯನ್ನು ಹಿಡಿದು ಮಾರುತಿಯು ಬಂದನು. ಅವನು ಬರುವುದರೊಳಗಾಗಿ ಅವನು ನೊಂದು ನುಡಿದಂತೆ ಗರ್ಭಪಾತವಾಗಿ ಬಿಟ್ಟಿತ್ತು.

ಸೀತೆ ಮತ್ತೆ ಬಸುರಿಯಾಗಲೇ ಇಲ್ಲ.
*****

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...