ಬೆಳೆಯುತ್ತಿರುವ ಬಾಳಿನೆಳೆಯ ಬಾಳೆಯೆಲೆಯ ಸುಳಿಯನು
ಕೊರತೆಯೆಂಬ ಕೊಯ್ತದಲಗು ಕೊರೆಯುತಿಹುದನರಿವೆನು.
ಬೇರಿನಿಂದ ಚಿಮ್ಮಿಬರುವ ಜೀವರಸದ ಝರಿಯನು
ಮರೆವೆನೆಂತು ಮರಳಿ ಸುಳಿಯ ಬೆಳೆಸುವದರ ಪರಿಯನು. ೧
ಮೈಯು ಮನವು ಸೋತು ಸುರಳಿಯಾಗಿ ಹುಳದ ಹಾಗಿರೆ
ಅಯ್ಯೋ ಎಂದು ಕೊರಗಿ ಕುಸಿವೆ ಬಾಳದೆಂತೊ ಸಾಗಿರೆ
ಮತ್ತೆ ಹರುಷ ಚಿತ್ತದಂತರಾಳದಿಂದ ನೂಗಿರೆ
ಸುರುಳಿ ತೊರೆದು ಹಿಗ್ಗು ತಿರುವೆ ಬಾನವರೆಗೆ ತೂಗಿರೆ. ೨
ಮನೆಯ ಹಸುಳೆ ಬೆಳೆಯದಾಗೆ ನೆಲವ ಹೊಸೆದು ಸರಿಯಲು
ಬಾಳಿನೊಂದು ಸುಖದ ಸುಗ್ಗಿ ಹೋಯಿತೆಂದು ಜರಿಯಲು
ಜಗದ ಮನೆಯ ಮಗುಗಳಾಟ ಕಣ್ಣಿನೆಡೆಗೆ ಹರಿಯಲು
ತಣಿಯೆ ಕಂಡು ಜೀವ ಕುಣಿವುದೆಲ್ಲ ನೋವು ಮರೆಯಲು. ೩
ಒಲಿದ ಮಡದಿ ಗೋಳೆ ತೀವಿದಂಥ ಬಾಳ ಶಪಿಸುತ
ಇರಲು ಮೊರೆವೆ ಜನ್ಮವೆಂಥ ಶಾಪವೆಂದು ತಪಿಸುತ
ಒಲವು, ಆಶೆ, ಬಲವು ಮೈಯ ಮುತ್ತಿ ಸುತ್ತುವರಿಯುತ
ನಿಲಲು ನಲಿವೆ ತುಂಬುಹೊಳೆಯ ಹಾಗೆ ಸೂಸಿ ಹರಿಯುತ ೪
*****








