ಕೋಲುಕೋಲನ್ನಿರೆ |
ವಡ್ಡಯ್ನ ಕೈಗಲ್ಲ ಕಲೆಯನ್ನಿರೆ ||ಪ||
ಬಮ್ಮ ತನ್ನ ಹಿರಿಮಗ ವಡ್ಡಯ್ಗೆ
ಕಲ್ಕೆಲಸ ಕಲಿಸಿ ಭೂಮಿಗೆ ಕಳುಹಿದ || ಕೋ || ೧
ಗುಡ್ಡದ ಬಿರಿಗಲ್ಲ ಹುಡ ಹುಡುಕುತ ಬಂದ
ಧರೆಗೆ ಶಿವಲಿಂಗ ಪೂಜೆಗೆ ಕೊರೆದ || ಕೋ || ೨
ತಂದೆ ಮಾತ ತಾ ಎದೆಯಲಿ ಇಟ್ಟು
ಮೊದಲು ಕೊರೆದ ಜ್ಯೋತಿರಲಿ೦ಗ || ಕೋ || ೩
ಲಿಂಗ ಮಂಟವ ಲೊಕಯನೆಂದು
ಪಾದಗಟ್ಟಿ ಬಸವನ ಕೊರೆದ ||ಕೋ || ೪
ಉಳಿ ಚಾಣ ಸುತ್ತಿಗೆಯನೆತ್ತಿ
ಕಟಿದು ಇಟ್ಟ ಹಂಪೆಯಲಿಂಗ || ಕೋ || ೫
ಕಲ್ಲುತೇರ ಕಮಲದ ಗುಡಿಯ
ಬಿಲ್ಲುಬಾಣ ರಾಮರ ಗುಡಿಯ || ಕೋ || ೬
ಹಾವಿನ್ಹಾಸಿಗೆ ಹರಿಯನು ಕೊರೆದ
ನಾಭಿ ಕಮಲದ ಬ್ರಹ್ಮನ ಕೆತ್ತಿದ || ಕೋ || ೭
ಲೋಕ ಹುಟ್ಟಿಸಿ ಆಟವ ಮಾಡುವ
ಮೂರುಗಣ್ಣ ಮುಕ್ಕಣ್ಣನ ಕೊರೆದ ||ಕೋ || ೮
ನುಣ್ಣಗೆ ಕೊರೆದ ಹೆಣ್ಣಿನ ರೂಪ
ಹೇಳಲುಬಾರದು ನೋಡಲುಬೇಕು || ಕೋ || ೯
ಮೇಣಬಸ್ತಿ ಮಿಗಿಲಾಗಿ ಕೊರೆದ
ಜಕ್ಕಣ ಗುಡಿಯ ಸುತ್ತಲು ಕಟ್ಟಿದ || ಕೋ || ೧೦
ಕಲ್ಲ ಕೋಳಿಗೆ ಚನಬಸವನ ಧೂಳಿ
ಕೋಳಿ ಕೂಗಿತು ಕಲಿಯುಗ ಮುಗಿಯಿತು || ಕೋ || ೧೧
*****








