Home / ಕಥೆ / ಕಿರು ಕಥೆ / ಎಂಜಲು ಬೋರೆ

ಎಂಜಲು ಬೋರೆ

ಶ್ರೀ ರಾಮಚಂದ್ರ ದೇವರು ಶಬರಿಯು ಕೊಟ್ಟ ಎಂಜಲು ಬೋರೆಯನ್ನು ತಿಂದ ಸುದ್ದಿಯು ಆ ಅರಣ್ಯ ಪ್ರದೇಶದಲ್ಲಿ ಕಾಳಿಚ್ಚಿನಂತೆ ಹಬ್ಬಿತು. ಕೇಳುವದೇನು? ಬುಟ್ಟಿ ತುಂಬ ಎಂಜಲು ಬೋರೆಯನ್ನು ಹೊತ್ತು ಬೇಡತಿಯರ ಹಿಂಡೇ ಅವರ ಪರ್ಣಶಾಲೆಗೆ ಬಂದು ಆ ಹಣ್ಣನ್ನು ತಿನ್ನಲು ಪ್ರಾರ್ಥಿಸಿ ಕೊಂಡಿತು. “ಶಬರಿಯು ಕೊಟ್ಟಿದ್ದನ್ನು ಮಾತ್ರ ತಿನ್ನಬೇಕೇ? ನಾವೇನು ಪಾಪಿಗಳೇ?” ಎಂದು ಕೈಜೋಡಿಸಿ ಬೇಡಿಕೊಂಡರು. ರಾಮಚಂದ್ರನಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಹೇಗಾದರೂ ಅವರನ್ನು ಕಳಿಸುವ ಯತ್ನ ಮಾಡಿದನು.

ಆದರೆ ಬೇಡತಿಯರು ಬಿಡುತ್ತಾರೆಯೇ? “ನೀವು ನಮ್ಮ ಕಾಣಿಕೆಯನ್ನು ಸ್ವೀಕರಿಸದಿದ್ದರೆ ಇಲ್ಲೇ ಸಾಲು ಹಿಡಿದು ಕುಳಿತು ನಿಮ್ಮ ಹೆಸರನ್ನು ಭಜಿಸುತ್ತ ಕಾಲಕಳೆಯುವೆವು” ಎಂದರು.

ಬೋರೆಗಳನ್ನು ಪರ್ಣಶಾಲೆಯೊಳಗೆ ಇಟ್ಟು ಹೋಗುವಂತೆ ಸೀತಾ ಪತಿಯು ಸೂಚಿಸಿದನು.

ಒಬ್ಬೊಬ್ಬರ ಬುಟ್ಟಿಯಿಂದ ಒಂದೊಂದು ಬೋರೆಯನ್ನಾದರೂ ತಿನ್ನಲೇಬೇಕೆಂದು ಬೇಡತಿಯರು ಹಟ ಹಿಡಿದರು.

ಅವರ ಸತ್ಯಾಗ್ರಹಕ್ಕೆ ಸೋತು ದಶರಥ ತನಯನು ಒಂದೊಂದು ಬುಟ್ಟಿಯಿಂದ ಒಂದೊಂದು ಬೋರೆಯನ್ನು ತಿನ್ನಹತ್ತಿದನು.

ಅದನ್ನು ಕಂಡು ಸೀತಾದೇವಿಯು “ಬೇಡ” ಅಂದಳು. ಲಕ್ಷ್ಮಣನೂ ಅದೇ ಅಭಿಪ್ರಾಯ ವ್ಯಕ್ತಪಡಿಸಿದನು. ಆದರೆ ಭಕ್ತವತ್ಸಲನಾದ ರಾಮಚಂದ್ರನು ಕೇಳಲಿಲ್ಲ. ಎಲ್ಲ ಬುಟ್ಟಿಗಳಿಂದಲೂ ಒಂದೊಂದು ಎಂಜಲು ಬೋರೆಯನ್ನು ತಿಂದನು.

ಸಂಜೆಯಹೊತ್ತಿಗೆ ಶ್ರೀ ರಘುಪತಿಯ ಮುಖಕಮಲವು ತುರಿಸಹತ್ತಿತು.

“ನಾವು ಹೇಳಲಿಲ್ಲವೇ?” ಎಂದು ಸೀತಾದೇವಿಯು ಕೇಳಿದಳು.

ಅವುಗಳನ್ನು ತಿಂದುದರಿಂದಲೇ ಹೀಗೆ ತುರಿಸುತ್ತಿವೆಯೆಂದು ನಿಮ್ಮ ಅಭಿಪ್ರಾಯವೇ? ಛೇ! ಆತ್ಮಾರ್ಪಣೆಯ ಭಾವದಿಂದ ನಿರ್ಮಲ ಹೃದಯದ ಬೇಡತಿಯರು ಕೊಟ್ಟ ಹಣ್ಣಿನಿಂದ ಇಂಥ ಅನಿಷ್ಟವಾಗಲು ಸಾಧ್ಯವೇ ಇಲ್ಲ” ಅ೦ದನು ಜಾನಕೀ ವಲ್ಲಭನು.

ಮರುದಿನ ಆತನ ತುಟಿಗಳು ಬಾತು ಅವುಗಳಲ್ಲಿ ಬೊಕ್ಕೆಗಳು ಕಂಡು ಕೊಂಡವು.

ಗಿಡಮೂಲಿಕೆಯೊಂದನ್ನು ಅರೆಯುತ್ತ ಲಕ್ಷ್ಮಣನು ಹೇಳಿದನು “ಬೇಡತಿಯರ ಹೃದಯ ಎಷ್ಟೇ ನಿರ್ಮಲವಿದ್ದರೂ ಅವರ ಎಂಜಲು ಬೋರೆಯು ಮಾತ್ರ…. ಅಂಟುರೋಗವು ಹೃದಯ ನೈರ್ಮಲ್ಯಕ್ಕೆ ಹೆದರುತ್ತದೆಯೇ? ಭಾವನೆಯ ಜತೆಗೆ ಬುದ್ಧಿಯನ್ನೂ…. ”

ಸೀತಾ ಮಾತೆಯು ಈ ಪಾಠವನ್ನು ತನ್ನ ಪತಿದೇವನಿಗೆ ಇರುಳಿನಲ್ಲಿ ‘ಕಾಂತಾ ಸಮ್ಮಿತತಯಾ’ ತಿಳಿಸಿ ಹೇಳಿದಳು. ಅಂದಿನಿಂದ ಶ್ರೀ ರಾಮಚಂದ್ರ ದೇವರು ಭಕ್ತರ ಎಂಜಲು ಗಿಂಜಲು ತಿನ್ನಲಿಲ್ಲ.
*****

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...