ಗಾಂಧಿ ತತ್ವದ
ಮೂರು ಮಂಗಗಳು ಧೂಳ ಹಿಡಿದು
ಶೋಕೇಸಿನಲಿ ಬಿದ್ದಿವೆ.
‘ಅರಾಫತ್’ ನಮ್ಮ ಮನೆಗೆ ಬಂದಿದ್ದಾನೆ
ಕ್ಷೇಮ ಸಮಾಚಾರದ
ಮಾಮೂಲಿ ಮಾತು ಕಥೆ
ಗಾಂಧಿ ತತ್ವದ ಹೊಗಳಿಕೆ
ಅವನಲ್ಲಿ
ಅವನ (ಆರಾಫತ್) ಹೊಗಳಿಕೆ
ನಮ್ಮಲ್ಲಿ
ಬಿಸಿಲೇರುತ್ತದೆ
ನಾವು ನೆಟ್ಟ ತೆಂಗಿನ ಗಿಡದಡಿ
ಚಾಪೆ ಹಾಸಿ ಊಟಕ್ಕೆಬ್ಬಿಸುತ್ತೇವೆ
ಸಮಯವಿಲ್ಲ
ಟೀ, ಸಾಕು ಅನ್ನುತ್ತಾನೆ
ಬೆಳಗಿನಿಂದ ಸುಸ್ತು ಹೊಡೆದು
ಮಾಡಿದ ಅಡಿಗೆಯ ಕಡೆಗೆ
ಯಾರೊಬ್ಬರಿಗೂ ಲಕ್ಷ್ಯವಿಲ್ಲ;
ಅರಾಫತ್‌ನ
ಸಣ್ಣ ಕಣ್ಣೊಳಗೆ
ನಮ್ಮ ಶೋಕೇಸ್ ಮಂಗಗಳು
ಥ್ರೀ ಡೈಮೆನ್‌ಷನ್ ಆಗಿ
ಕಾಣಿಸಿವೆ
ಧೂಳು ಹಿಡಿದ ಮಂಗಗಳು
ಒರೆಸಿ ಟೇಬಲ್ ಮೇಲಿಡುತ್ತೇನೆ
ರಾಜಕೀಯ ನೂರೆಂಟು
ಮಾತುಗಳು ಮಾತಾಡಿ ಕೊನೆಗೆ
‘ಟೀ’ ಕುಡಿದು ಎದ್ದಾಗ
ಅರಾಫತ್ ಥ್ಯಾಂಕ್ಸ್ ಹೇಳಲಿಲ್ಲ
ಮತ್ತೆ ಮಂಗಗಳದೇ ಮಾತು
ಇರಲೆಂದು ನಾವು
ಮಂಗಗಳನ್ನು ಅವನಿಗೆ
ಕೊಟ್ಟಿದ್ದೇ ತಡ;
ಬಿಡದೇ ನೂರೆಂಟು ಥ್ಯಾಂಕ್ಸ್ ಹೇಳಿ
ತನ್ನ ರುಮಾಲಿನಲ್ಲಿ
ಸುತ್ತಿಕೊಂಡು ನಡದೇ ಬಿಟ್ಟ
ನಮಗೀಗ ಬುದ್ಧಿ ಬರುತ್ತಿದೆ
ಮುಗುಳು ನಗುವ
ದೇವರು ದಿಂಡಿರುಗಳನ್ನಿಟ್ಟು
ದೇವರ ಮನೆಬಾಗಿಲು ಹಾಕಿಕೊಳ್ಳುವುದಕ್ಕಿಂತ
ಮಂಗಗಳನ್ನು ಕೋಣೆ ಕೋಣೆಗಳಲ್ಲಿಟ್ಟು
ಗಾಂಧಿ ಆದರ್ಶದ ತತ್ವಗಳು
ಒಪ್ಪಿಕೊಳ್ಳುವಂತಾಗೋಣವೆಂದು
*****
ಪುಸ್ತಕ: ಗಾಂಜಾ ಡಾಲಿ