ಮಾನಸಮರಾಳ! ಮರಳಿ ನೆಗೆದೇಳ
ಕಲುಷಿತ ಕರಾಳ ಕೊಳದಿಂದ ಮೇಲೆ
ಕದಡಿ ಕೊಳೆಯಾದ ಪಕ್ಷಗಳ ಬಿದಿರಿ
ನಿರ್ಮಲನಿರಾಳಸರದಲ್ಲಿ ತೇಲೆ. ೧
ತಿಳಿಬಿಳಿದುಪ್ಪುಳ ನಿನ್ನ ನಯನವುರು
ಮಲಿತ ಜಲವುಂಡು ಮಾಸಿ ಹೋಗಿಹುದು
ಮುಗಿಲನೆ ಮುದ್ದಿಪ ನಿನ್ನಯ ನೋಟವು
ಮೀನದ ಕಣ್ಗಳ ಬಂದಿಯಾಗಿಹುದು. ೨
ಎತ್ತರದ ಗಿರಿಯ ಸರೋವರದಲ್ಲಿ
ಚೆಲುಗೊರಳ ತೂಗಿ ಒಯ್ಯಾರದಿಂದ
ಮಲ್ಲಡಿಯನಿಡುವ ಚೆಲ್ಲವನು ತೊರೆದು
ಜೊಂಡಿನಲಿ ಸಿಲುಕಿ ನೀನಿಹುದೆ ಚೆಂದ? ೩
ಕಾಣದೊಲು ನೀರಿನೊಳು ಬೇರಿಳಿಸಿದ
ಅಂತರಗಂಗೆಯು ಮಾಮಾಯೆಯಾಗಿ
ಹಸುರೆಲೆಯ ಹಾಸಿ ಹಸೆಗೆ ಕರೆದೊಡನೆ
ಒಸೆದು ಬೆರೆತಿರುವೆ ಕೆಳಕೆಳಗೆ ಬಾಗಿ. ೪
ಕೊರಗದಿರು ನೀನು ಕೊರಳೆತ್ತಿ ನೋಡು
ಮರುಗಿ ಮುಂದರಿಯಎ ಕಾಲವನುಕೂಲ
ಆಗಸದ ಹಿರಿಯ ಹಕ್ಕಿಯುಲಿ ಕೇಳು
ಹಾರು ಹಾಕುತ ರೆಕ್ಕೆಗಳ ತಾಲ. ೫
ಹಾರಿ ಹುರಿಗೊಂಡು ಮೇಲೇರಿ ಏರಿ
ಅಪಾರ ನೀಲದಿ ಮೈಯ ನೀ ತೂರು
ಮೋಡಗಳ ಬೆಳಬೆಳಗಿನಲಿ ಮಿಂದು
ಸತ್ವ ಶಿರೋಮಣಿಯಾಗಿ ಮುನ್‌ಸಾರು. ೬
ಧವಳಗಿರಿಶಿರದಿ ಮಾನಸದ ಸರದಿ
ಇಳಿದು ತಿಳಿನೀರಿನೋಳು ಈಜಾಡು
ನಿನ್ನ ಪಡಿನೆಳಲ ನೋಡುತ ನಲಿಯುತ
ಅಮರಸುಖಶಾಂತಿಕಾಂತಿಯ ಕೂಡು. ೭
*****








