ನುಡಿದು ಬೇಸತ್ತಾಗ! ದುಡಿದುಡಿದು ಸತ್ತಾಗ
ಜನಕ ಹಿಗ್ಗಿನ ಹಾಡು ನೀಡಾಂವಾ
ನಿನ್ಹಾಂಗ ಆಡಾಕ । ನಿನ್ಹಾಂಗ ಹಾಡಾಕ
ಪಡೆದು ಬಂದವ ಬೇಕೊ ಗುರುದೇವಾ
ಮಕ್ಕಳಾಗ್ಯಾಡೀದಿ । ಹಕ್ಕ್ಯಾಗಿ ಹಾಡೀದಿ
ಚಿಕ್ಕ್ಯಾಗಿ ನೋಡೀದಿ ಗುರುದೇವಾ
ಬಳ್ಳ್ಯಾಗ ಕುಣಿದೀದಿ । ಬೆಳಕಿನ್ಯಾಗ ತಣಿದೀದಿ
ಹೂವಾಗಿ ಅರಳೀದಿ ಗುರುದೇವಾ
ಬೆಳಿಯಾಗೀಸಾಡೀದಿ । ಗಾಳ್ಯಾಗ ಬೀಸಾಡೀದಿ
ಮಳಿಯಾಗ ಕೂಸಾಡೀದಿ ಗುರುದೇವಾ
ಬಿಸಿಲ್ಹಣ್ಣು ಉಂಡೀದಿ । ಬೆಳದಿಂಗಳ ಕಂಡೀದಿ
ಚಳಿಮುದ್ದು ಕೊಂಡೀದಿ ಗುರುದೇವಾ
ಮೂಡಲಕ ಮೂಡೀದಿ । ಪಡುವಲಕ ಓಡೀದಿ
ದಿಕ್ಕೆಲ್ಲ ಕೂಡೀದಿ ಗುರುದೇವಾ
ಹಾಡಿ ಹಣ್ಣಾದಿ ನೀ! ಜಗದ ಕಣ್ಣಾದಿ ನೀ
ದುಡಿದು ಸಣ್ಣಾದಿ ನೀ ಗುರುದೇವಾ
*****








