ತೀರ ಇತ್ತೀಚಿಗೆ ಸಂಜೆಹೊತ್ತಿನ
ಜನನಿಬಿಡ ವಾಹನ ದಟ್ಟನೆಯ ರಸ್ತೆಯಲಿ
ಸಣ್ಣ ~ಆಕ್ಸಿಡೆಂಟ್ ನನ್ನ ಕಾರಿಗೆ ಆಗಿಯೇ ಹೋಯಿತು
ಅದು ~ಆಕ್ಸಿಡೆಂಟೇ ಅಲ್ಲ
ಹಾಗೆ ನೋಡಿದರೆ ತಕ್ಷಣದ ಬ್ರೆಕ್ಕು
ಕಿರುಗುಟ್ಟಿದ ಗಾಲಿ –
ಮುಂದಿನ ಕಾರು ಚಾಲಕ ಅರ್ಧಬೋಳು ತಲೆಯ
ಕರಿಯ ಹೊಟ್ಟಡುಮ್ಮ ಹೈದಗಳು
‘ಏನು ಗುಂಡಹಾಕಿ
ಕಾರು ಹೊಡೆತಾ ಇದ್ದಿಯಾ ಅಮ್ಮಣ್ಣಿ
ಕೆಳಗಿಳಿದು ದಂಡಕೊಟ್ಟು ಹೋಗು
ಕಾಸಿಲ್ಲದೆ ಕಾರು ಬಿಡುವುದಿಲ್ಲ’ ಕಿರುಚಾಟ ಕೂಗಾಟ
ಕೈಗೆ ಸಿಕ್ಕ ಶಾಪಿಂಗ್ ಬ್ಯಾಗ್ ಕಿತ್ತು
ದುರುಗುಟ್ಟುತ್ತ ಹೋದವು.
ಮರೆತು ಬಿಡಬಹುದಾದಂತಹುದೇ ವಿಷಯ
ನಾಲ್ಕಾರು ದಿನ ಕಳೆದರೂ ಪದೇ ಪದೇ
~ಆಕ್ಸಿಡೆಂಟ್ ಅಲ್ಲದ ~ಆಕ್ಸಿಡೆಂಟದ್ದೆ ಚಿತ್ರ
ಮನೆಯಲ್ಲಿ ಹೇಳಿ ಹಗುರಾಗಿದ್ದರೂ
ಮತ್ತದೇ ರಸ್ತೆ, ಕಾರು ಗಲಾಟೆ ಗಜಿಬಿಜಿ ಚಿತ್ರ.
ಮೊನ್ನೆ ಇದ್ದಕ್ಕಿದ್ದಂತೆ ಬಂತು
ಅದೇ ಹೈದಗಳ ಕಾರು ಮನೆಮುಂದಿನ
ರಸ್ತೆಯ ಆಚೆಗೆ
ತಬ್ಬಿಬ್ಬಾದೆ
ಒಳಗಡೆಯ ಮುಖಗಳೆಲ್ಲಾ ಅವೇ
ಭಯ ನಡುಕ ಸಣ್ಣಗೆ ಬೆವರು
ಹಾಗಾಗಬಾರದಿತ್ತು ನನಗೆ
ಐದು ಹತ್ತು ನಿಮಿಷ ಅರ್ಧಗಂಟೆ
ಇಳಿಯಲೊಲ್ಲವು ಹೋಗಲೊಲ್ಲವು ಪಾಪಿಗಳು
ಇಳಿಯತೊಡಗಿದವು ಒಂದೊಂದಾಗಿ.
ಅದೇನೇನೋ ಹುಡುಕತೊಡಗಿದವು
ಇಳಿಬಿಟ್ಟ ಬಗಲ ಚೀಲದಲಿ
ಇರಬಹುದೆ ಬಾಂಬು ಬಂದೂಕು ಚಾಕು ಚೂರಿ
(ಪೇಪರ ಸುದ್ದಿಗಳು ಒಬ್ಬೊಂಟಿಮಹಿಳೆಯ ಕೊಲೆ, ಹತ್ಯ)
ಒತ್ತಿದವು ಕರೆಗಂಟೆ ನೆತ್ತಿಗೆ ಬಂತು ಜೀವ
ಕಿಟಕಿ ಈಚೆಯಿಂದಲೇ ಯಾರು? ಎಂದೆ
ಏನೇನೂ ಗೊತ್ತಿಲ್ಲದವರಂತೆ.
ನಾವು ನಾವು ಅದೇs…….
ಕ್ಷಮಿಸಿ ಮೇಡಂ ನೀವು….
ನಿಮ್ಮ ಬ್ಯಾಗಿನಲ್ಲಿ ಸಿಕ್ಕ ಪುಸ್ತಕಗಳು….
ಕ್ಷಮಿಸಿ ಮೇಡಂ…..
ನಿಮ್ಮೊಂದಿಗೆ ಮಾತನಾಡಬೇಕು…..
ಸಾವರಿಸಿಕೊಂಡು
ಒಳಗೆ ಕರೆಯದೆ ಗೇಟಿನವರೆಗೆ ನಾನೇ ಹೋದೆ
’ನಮಸ್ಕಾರ ಮೇಡಂ ನೀವು ಅಂತಾ ಗೊತ್ತಾಗ್ಲಿಲ್ಲ
ಹೊರರಾಜ್ಯದವರ ಐಟಿ ಬಿಟಿ ಯವರ ಹಾವಳಿ
ಜಾಸ್ತಿ ನೋಡಿ ನಾವು ಕನ್ನಡಾಭಿಮಾನಿಗಳು’
‘ಮಾತನಾಡಿದಿರಲ್ಲ ಕನ್ನಡದಲ್ಲಿ’ ಅಂದೆ
ಮತ್ತೆ ಮತ್ತೆ ಬಗಲಚೀಲದಲಿ
ಕೈಯಾಡಿಸುವುದ ನೋಡಿ ಇದೇನೋ
ಆಪತ್ಕಾಲ ಬಂತೆಂದೆ
ದೊಡ್ಡಮಾಲೆ ತೆಗೆದು ಕೈಗಿಟ್ಟು
’ಕ್ಷಮಿಸಿಮೆಡಂ’ ಎಲ್ಲಾ ಒಟ್ಟಾಗಿ ಅಂದವು
ಬೆವೆತು ಕಂಪಿಸಿದೆ ಮಂಪರು ಏನಾದರು ಇದ್ದರೆ –
‘ನಮ್ಮ ಸಂಘದ ರಾಜ್ಯೋತ್ಸವ ಅಧ್ಯಕ್ಷತೆಗೆ
ನೀವು ಬರಲೇಬೇಕು
ನಿಮ್ಮ ಒಪ್ಪಿಗೆ ಬೇಕು ಮೆಡಂ’
ನಾನು ಮರೆತೂ ಒಳಗಡೆ ಕರೆಯಲಿಲ್ಲ
ಯಾರಿಗೆಗೊತ್ತು ಯಾವಯಾವ ರೂಪಿನವರೆಂದು
ಫೋನ್‌ದಲ್ಲಿ ಹೇಳುವುದಾಗಿ ಕಳಿಸಿ
ಅದು ಬರದೇ ಇದ್ದರೆ ಸಾಕಪ್ಪ ದೇವರೆ
ಎಂದೆನ್ನುತ್ತ ಒಳಗೆ ಬಂದು
ಸೋಫಾದಲ್ಲಿ ದೊಪ್ಪನೆ ಬಿದ್ದುಕೊಂಡೆ.
*****
ಪುಸ್ತಕ: ಇರುವಿಕೆ