“ಹೊನಲಿನ ಗೆಲುವಿಲ್ಲಿದಕೆ
ಕಮರಿಯ ಹಾರುವ ಸಾಹಸವಿಲ್ಲಿದಕೆ
ಕನಿಕರದಿಂದಲಿ ಗಾಳಿ
ತಳ್ಳಲು ಚರಿಸುವುದಲೆ ಹೆಳವನ ಹೋಲಿ
ಹರಿಯದು ತನ್ನಿಂದಾಚೆ
ಇದಕೆದೆಯೊಳು ದಿವಕೆಡೆಗೊಡದಿಹ ಪಾಚೆ
ಚೆಲುವಿದರೀ ಸೋಪಾನ
ಇದಕಾದೊಡೆ ಚಲಿಸುವ ಹಾಡುವ ಶುಚಿಗೊಳ್ಳುವ ಋತ ಊನ.”
ಇಂತೆನ್ನನು ಜರೆಯದಿರು
ಹರಿಸುವ ಋತ ಸಲ್ಲದು ಕಟ್ಟೆಯ ಇದಿರು
ಆದೊಡೆ ಚ್ಯುತಿಯಿಲ್ಲದಕೆ
ಈ ಮುಲುಗುಟ್ಟುವ ಮುಳುವಾಯ್ತಾ ಋತಕೆ
ಮೇಣೀ ಹಾವೀ ಕಪ್ಪೆ
ಇಕೊ, ಈ ತಾವರೆ ಹೂ! ಇದು ನಿನಗೊಪ್ಪೆ?
ಎನೆ ಕೊಳ, ನಾ ಬೆರಗಿಂದ
ಉಡುಗಿದ ನಡೆ ಉಲಿಯದ ಹಾಡೀ ಹೂವಾಯ್ತೆನೆ
ಕೊಂಡೆನು ಬೆರಗಿಂದ.
*****

















