ಬೆಳಕಹೊಳೆಯಲೀಸುತಿದ್ದೆ
ತೀರದೂರಪಾರದಲ್ಲಿ
ಮೇರೆ ಮೀರಿ ಹರಿವ ಹೊಳೆಯ
ನೀರಿನೊಳಗೆ ಧುಮುಕಿಕೊಂಡು
ಮುಳುಗಿ ಒಳಗೆ, ಹಾರಿ ಮೇಲೆ
ಸಾರಿ ತೆರೆಯನೇರಿ ನಿಂತೆ
ಮುಗಿಲಿನಗಲವಾಗಿ ಬೆಳೆದು
ಇಳೆಯನೊಮ್ಮೆ ಅಪ್ಪಿಕೊಂಡೆ
ಹಾಲನೊರೆಯು ಸುರುಳಿಯಾಗಿ
ಬಿಳಿಯ ಆನೆ ಓಳಿಗೊಂಡು
ಕೇಳಿಗಾಗಿ ಧುಮುಕಿ ಎನ್ನ
ಏಳು ಸೊ೦ಡಿಲಿಂದ ಎತ್ತಿ
ಚಂದ್ರಲೋಕಕೊಯ್ದಿತು
ಇಂದ್ರಪಟ್ಟ ಗಟ್ಟಿತು
*****

















