Home / ಕವನ / ಕವಿತೆ / ಸ್ವಾತಂತ್ರ್ಯ ದೇವಿಗೆ

ಸ್ವಾತಂತ್ರ್ಯ ದೇವಿಗೆ

ತುಳಿದ ರಭಸಕೆ ನೆಲವೆ ಬಿರಿವಂತೆ, ಬಿಡುಗಡೆಯೆ,
ಇಳಿತಂದೆಯೌ ಪರಮರೌದ್ರವನು ಮೆರೆದು
ನಿನ್ನ ಭಜಕರ ತಪಕೆ ಒಲಿದರೂ ಈ ಎಡೆಗೆ
ಬರೆ ಬಿಂಕಗೊಂಡಂತೆ ಸೌಮ್ಯತೆಯ ತೊರೆದು
ಭಾರತದ ಸಾಧುಜನರಾತತಾಯಿಗಳಾಗೆ
ದುರ್ಮೋಹ ಧೂಮದಿಂ ಚಿತ್ತವನು ಕವಿದು
ಕಾಂಬವರು ಕಂದೆಗೆಯೆ ವಿಪುಳ ತೇಜದೊಳುರಿದು
ನೀರಸರು ಸಿಡಿದೊಡೆವ ತೆರದಿ ಕಿಡಿಗರೆದು

ನೀ ಬಂದೆಯಂದು ಬಾನುಳಿವ ಸ್ವರ್‌ಗಂಗೆಯಂತೆ
ಶಿವನ ಹೃದಯವ ತುಳಿದು ನರ್ತಿಸುವ ಕಾಳಿಯಂತೆ
ವಿಷದ ಮುಂಗಾವಲಂ ಕೊಂಡು ಬಂದಮೃತದಂತೆ
ನಿನ್ನ ನೆನೆದವರೂಹೆಗೆಟ್ಟಾಸೆ ಹಿಂಗುವಂತೆ.

ಶುಭದ ಶಂಖಧ್ವನಿಯ ಓಂಕಾರದಾಹ್ವಾನ
ಜಯ ಜಯೆಂಬುಗ್ಗಡಣೆ, ಸ್ವಸ್ತಿಸ್ವಸ್ತ್ಯುಕ್ತಿ
ಮರುಚಣವೆ ದುಃಖಾರ್ತಲೋಕದಾಕ್ರಂದನವು
ಲೋಭದುರ್ಮದಮೋಹವೈಷಮ್ಯಮುಕ್ತಿ
ಕೃತಕೃತ್ಯತೆಯ ಸೊಗದ ಸಂಮೋದ ಸಂಭ್ರಮದ
ಜತೆಗೆ ರುಷ್ಟೋದ್ರಿಕ್ತಜನದ ನಿರ್‌ಹ್ರಾದ
ನಿಶ್ಶೃಂಖಲತೆಯೊಡನೆ ಉಚ್ಛೃಂಖಲಾವೃತ್ತಿ
ವಿಶ್ವಮಾನಿತೆಯೊಡನೆ ವಿಶ್ವಾಪವಾದ-

ಇಂತಾತ್ಮ ತ್ರೈಗುಣ್ಯಬಂಧಗಳ ಎಲ್ಲೆ ಮೀರೆ
ಉದ್ರಸೋಜ್ವಲವಾಗಿ ನವರಸಗಳೆಲ್ಲವನು ತೋರೆ
ನಿನ್ನುಸಿರಕೊಂಡೆದ್ದ ಜೀವಬುದ್‌ಬುದಗಳೆಂತು
ಭಾವವಿಸ್ಫುರಣವಂ ಕೊಂಡವವೌ ಸ್ಫುಟಿಸುವಂತು!

ಭಕ್ತ ವಿಶ್ವಾಸದಿಂ ಪಾರ್ಥನಿದಿರೊಳು ನಿಂದ
ವಿಶ್ವರೂಪದ ಅಪ್ರಮೇಯನಂ ಹೋಲಿ
ಮಾತವಸಿಯಿದಿರಿಂತು ನೀ ನಿಲ್ಲೆ ಕಾಣುತ್ತ
ಭೀತಿ ವಿಹ್ವಲನಾದನಾ ಸತ್ವಶಾಲಿ
ತನ್ನಳತೆಗಳವಟ್ಟು ಮಮತೆಯೊಳೆ ನಡೆದಂಥ
ದಿನದ ಬಳಕೆಯ ಕನಸು ಇಂಥ ಕಣಸಾಯ್ತೆ
ತನ್ನ ನಯಸಂಪನ್ನವಾಗಿದ್ದ ಬದ್ಧ ಜನ
ಸ್ವಾಚ್ಛಂದ್ಯದೊಳಗಿಂತು ದುರ್ದಮ್ಯವಾಯ್ತೆ!-

ಈ ಅಚಿಂತ್ಯಕೆ ಚಿತ್ತ ಕೋರೈಸೆ ಕುರುಡನಾಗಿ
ಉಪವಾಸದಿಂ ತವಿಸಿ ಮುದನೀಗಿ ಮೌನಿಯಾಗಿ
ಓ ರುದ್ರೆ ಭದ್ರಳಾಗೆಂದು ಒಮ್ಮನದೊಳೆರೆದಂ
ಎಲ್ಲ ಮನದೊಳಗಿಂತೆ ಮೊರೆಗೊಡಲು ತನುವ ಮರೆದಂ

ದೇವಿ, ಸ್ವಾತಂತ್ರ್ಯಾಂಬೆ, ಎನಿತು ಶತಶತಮಾನ
ನಾವೆರೆದು ಕಾದಿಹೆವು ನೀ ಬಿಜಯಗೈಯೆ
ಎನಿತು ದೇಹದೊಳೆನಿತು ರೀತಿಯೊಳು ನಿನಗಾಗಿ
ಎನಿತು ಸೊಗದಾಹುತಿಯ ನಿತ್ತೆವೌ, ತಾಯೆ.
ಪರಶಿಶಿರ ಶೈತ್ಯದೊಳು ಋಷಿತೇಜದುಷ್ಣದಿಂ
ನಮ್ಮ ತಾಯ್ನೆಲ ಬದುಕೆ ಕಡುಪಾಡ ಪಡುತ

ಜಾತಿ ಜಾತಿಯ ಗೂಢ ರೂಢಿಗಳ ಮೂಡೆಯೊಳು
ಅವಳ ಸತ್ವದ ಬೀಜಗಳನು ಕಾಪಿಡುತ

ಕೊನೆಗೆ ನೀನೈತಂದೆ, ಶುಭ ಸುಪ್ರಭಾತವೆಂದೆ
ಮುಂಬೆಳಗ ತಂದವಳು ನಂಜ ಮರೆಗೇಕೆ ನಿಂದೆ?
ಅರಿಷಟ್ಕತೊಲಗೆ ಮೊದಲವಕೆ ಈ ರೌದ್ರಬೇಕೆ
ದುರ್‌ಗ್ರಹೋಚ್ಚಾಟನಕೆ ಕೊಟ್ಟಬಲಿ ಇನ್ನು ಸಾಕೆ?

ಎಂತಾದರೂ ಸರಿಯೆ, ಇಲ್ಲೆ ನೀ ನಿಲ್ಲವ್ವ
ಏನಾದರೂ ನಮ್ಮ ನೀ ತೊರೆಯಬೇಡ
ನಿನ್ನ ಅಭಯದ ವರದೊಳೆಲ್ಲ ಭಯಗಳ ನೀಗಿ
ವಿಶ್ವತೋಮುಖವಾಗೆ ನಡೆಸು ಈ ನಾಡ
ಸ್ವಾರ್ಥಿಗಳ ಲೋಭಕ್ಕೆ ಮತವಳರ ಕಾಮಕ್ಕೆ
ಧ್ಯೇಯ ಮೋಹಕು ನಾವು ಸಲ್ಲದಂತಿರಿಸು
ಕ್ಷೇಮಮಿತಿಯುದ್ಯೋಗ ಹೃದಯಮಿತಿ ವಿಜ್ಞಾನ
ವಿಶ್ವಮಿತಿ ನಮ್ಮಾತ್ಮವಾಗಲನುಗೊಳಿಸು.

ಸಂತನಸುವೇ ನಿನಗೆ ನಾವಿಡುವ ರಾಮರಕ್ಷೆ
ನಿರ್ಬಾಧ ಪೌರುಷೋತ್ತಮ್ಯವೇ ಬಯಪ ಭಿಕ್ಷೆ
ಇಂದು ಉದಯದ ಮಂಜುಹರಿದು ಹಗಲಾಯಿತೆಂಬೆ
ದೇವಿ, ಜಯಜಯ, ಶರಣು, ಹರಸು ಕೈಮುಗಿವೆನಂಬೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...