ಉರಿಉರಿಬಿಸಿಲು ನೆತ್ತಿಯಮೇಲೆ
ಸುಡುವ ಮರಳು ಕಾಲ್ಕೆಳಗೆ
ಸುಂಯನೆ ಬೀಸುವ ಬಿಸಿ ಬಿರುಗಾಳಿ
ಕೂತೂಹಲದ ಕಣ್ಣುಮನಸುಗಳ ಮೌನ ಮಾತು
ನೋಡಬೇಕೆನ್ನುವ ತವಕ ಪಡದವರಾರು.
ನೋಡಬೇಕು ನೋಡಲೇಬೇಕು
ಏನೆಲ್ಲ ಮಾತನಾಡಬೇಕು ಪುರಾತನ
ನಗರಿಗಳೊಂದಿಗೆ ತೇಲಬೇಕು ಮುಳುಗೇಳಲೇಬೇಕು
ಜೀವನದಿ ನೈಲದೆದೆಯಾಳಕೆ
ಮತ್ತೆ ಜೀವಬಂದಿದೆ ಪರೋಹಗಳಿಗೆ
ಕಾತರಿಸಿರುವರು ಮಮ್ಮಿಗಳು ಮಾತನಾಡಲು
ನೈಲ್ ನದಿಯ ಕಾಲಗರ್ಭ ಬಿಚ್ಚಿಕೊಳ್ಳುತ
ಅದೇನೋ ಸಡಗರ ಮಂದಗಾಮಿನಿ
ಒಮ್ಮೊಮ್ಮೆ ಮದೋನ್ಮತ್ತ ಗಜಗಾಮಿನಿ.
ಪ್ರಾಚೀನ ಇತಿಹಾಸ ನಾಗರಿಕತೆಯ ಭೂಮಿ
ನೈಲ್ ನೀರಿಗೆ ಹೆಮ್ಮೆ ಪುಲಕ
ರಾಜ ರಾಣಿಯರನು ಪಕ್ಕದಲ್ಲಿಟ್ಟುಕೊಂಡ ಪಟ್ಟ
ಫೆರೋಗಳ ಕಾರ್ಯಕ್ಷೇತ್ರದಿ ಮೆರೆದ ಹೆಗ್ಗಳಿಕೆ
ಪೂರ್ವಕೆ ಕಾರ್ನಾಕ್ ಲುಕ್ಸ್‌ರ್ ದೇವಾಲಯಗಳ
ಪಶ್ಚಿಮಕೆ ರಾಜರಾಣಿಯರ ಕಣಿವೆಗಳ ಅಮೋಘ.
ಅರೆರೆರೆ ! ಕಣ್ಣು ಕಟ್ಟಿಕೊಳ್ಳುತಿವೆ
ಸಂಸ್ಕೃತಿಯ ಸಂಕೇತಿಸುವ ಭವ್ಯ
ಸ್ಪಿಂಕ್ಸ್ ಪಿರಾಮಿಡ್ಡುಗಳು, ರಾಮ್ಸೆಸ್, ಟುಟೆಕಾಮುನ್
ಫೆರೋಗಳ ಬಿಗಿದಿಟ್ಟ ಮಮ್ಮಿಗಳು.
ಕಣ್ಣೆದುರಿಗೆ ಬರುತಿವೆ ಹಳೆಯ ಇತಿಹಾಸಪುಟಗಳು
ದೇವಸ್ಥಾನಗಳಿದ್ದವಿಲ್ಲಿ, ರಾ ಓಸೈರಸ್ ಈಸಿಸ್
ದೇವತೆಗಳು ಬ್ರಹ್ಮ ವಿಷ್ಣು ಶಿವರಂತೆ
ದಿನನಿತ್ಯ ಪೂಜೆ ಪುನಸ್ಕಾರ.
ಸಹಸ್ರಾರು ವರುಷಗಳು ಮೆರೆದ ಪುರೋಹಿತಶಾಹಿ
ರಾಜಶಾಹಿ, ಫೆರೋಗಳ ಅಹಂಕಾರದಬ್ಬರ
ಜಗತ್ಪ್ರಸಿದ್ಧ ಪಿರಮಿಡ್ಡುಗಳ ನಿರ್ಮಾಣ.
ಸಮೃದ್ಧನಾಡು ಇಜಿಪ್ತಿನ ಭಾಗ್ಯದ ಬಾಗಿಲಿಗೆ
ಗ್ರೀಕರ ಆಕ್ರಮಣ ನೆಪೊಲಿಯನ್ನನ ವಿಕ್ರಮ
ರಾಜ ರಾಣಿಯರ ಮೆರೆತ
ಗ್ರೀಕ್ ಸುಂದರಿ ಕ್ಲಿಯೋ ಪಾತ್ರಳ ಹೆಸರು ಕೇಳದವರಾರು
ರಾಜವಂಶದ ಕೊನೆಯ ರಾಣಿ, ಜ್ಯೂಲಿಯಸ್ ಸೀಸರನ ಸ್ನೇಹ
ಕಟ್ಟುಮಸ್ತಾದ ಆಳು ರಾಜಕೀಯದಲಿ ಸಹಕಾರ
ಪಾಪ ದುರದೃಷ್ಟೆ ಕ್ಲಿಯೋ ಸೀಸರನ ಕೊಲೆ
~ಆಂತೋನಿಯ ಪ್ರವೇಶ
ರೋಮನ್ ಸಾಮ್ರಾಜ್ಯದ ಕಾಕದೃಷ್ಟಿ ಜೋಡಿ ಕೊಲೆ
ರೋಮಿನ ದರ್ಬಾರು.
ಸಾವಿರ ಸಾವಿರ ವರ್ಷಗಳು ಕಳೆದರೂ
ಹೊರ ಸಾಮ್ರಾಜ್ಯಗಳು ಬಂದು ಉರಳಾಡಿ ಹೋದರೂ
ಉಳಿಸಿಕೊಂಡಿತ್ತು ಇಜಿಪ್ತ ತನ್ನ ನಂಬಿಕೆ
ಪದ್ಧತಿ ಹೆಸರುಗಳನೆಲ್ಲ
ಆರನೆಯ ಶತಮಾನದ ಅರಬ್ಬರ ದಾಳಿ ಆದದ್ದೇ
ಪಿಶಾಚಿಗಳು ಹೊಕ್ಕಂತೆ ಒಂದೊಂದೇ ಉರುಳಿಸಿದವು
ದೇವತಾರಾಧನೆ ನಿಂತು ದೇವಮಂದಿರಗಳು
ಹಾಳು ಬಿದ್ದು ಭಾಷೆ ತುಂಡಾಗಿ
ನುಚ್ಚು ನೂರಾಯಿತು ಸಂಸ್ಕೃತಿ.
ಸುಯೇಜ್ ಕಾಲುವೆಯ ನೂರೈವ್ವತ್ತು ವರ್ಷಗಳಷ್ಟೇ
ಪ್ರೆಂಚ್‌ರ ವಶವಾದದ್ದು ಬ್ರಿಟೀಷರು ಅಧಿಕಾರ ನಡೆಸಿದ್ದು
ಎಲ್ಲವೂ ಒಂದಿಲ್ಲೊಂದು ಆಕ್ರಮಣ ದಬ್ಬಾಳಿಕೆ
ಎದ್ದು ಬಿದ್ದು ಗೆದ್ದು ಸೋತು ಉರುಳಿತಿದೆ ಕಾಲ.
ಮರುಭೂಮಿಯ ಬಿರುಗಾಳಿಯ
ನೈಲ್‌ದೆದೆಯಾಳವ ಹೊಕ್ಕು ಬಗೆಯಬೇಕಷ್ಟೇ
ಇನ್ನೂ ಏನೆಲ್ಲ ಕಥೆಗಳು
ಕೇಳಲೇಬೇಕೆಂದವರು ಹತ್ತಿರ ಹತ್ತಿರ ಹೋಗಬೇಕಷ್ಟೆ
ನೈಲ್ ಮೌನವಾಗಿ ಹರಿಯುತಿದೆ
ಕಣ್ಣು ಹಾಯಿಸುವವರೆಗೂ ಹಚ್ಚ ಹಸಿರು
ರಾತ್ರಿ ಬೆಳ್ಳಂ ಬೆಳದಿಂಗಳ ಚಂದಿರ
ಸುತ್ತೆಲ್ಲ ಏಕಾಂತ ನಕ್ಷತ್ರಗಳು
ಏನು ಕಾಡುತ್ತವೋ ಏನು ಬೇಡುತ್ತವೊ
ಪ್ರತಿಫಲಿಸುವ ನೈಲ್‌ಗೆ ನಗು.
ಅದೇನು ಹುಚ್ಚೊ ಅದೇನು ಕೊಬ್ಬೊ
ರಾಜರುಗಳಿಗೆ ಇದ್ದಾಗಲೂ ದರ್ಬಾರು ಆಳುಕಾಳು
ಸತ್ತ ನಂತರವೂ ಪುರ್ನಜನ್ಮದ ನಂಬಿಕೆ
ಗೋರಿಗೊಂದೊಂದು ಅರಮನೆ ಐಶಾರಾಮಿ
ಬದುಕಿನ ರೂಪ ಒಳಗೆಲ್ಲ
ಹೇಳಿ ಕೇಳಿಯೇ ಮಾಡಿಸಿಕೊಳ್ಳುವ ಇಚ್ಛೆ.
ಹಾಗಾದರೆ ಹೋಯಿತೆಲ್ಲಿ ಹೋದವೆಲ್ಲಿ
ಸಮಾಧಿಯ ಭಂಡಾರ ಉಸುರಿದ್ದೆ
ನೀಲಾ (ನೈಲ್) ನಕ್ಕಳೋ ವಿಷಾದಿಸಿದಳೋ
ಪುರೋಹಿತ ಒಳಜನರೇ ಕಳ್ಳರಿಗೆ ಶಾಮೀಲಾದದ್ದು
ಕಳ್ಳ ಕಾಕರು ದೋಣಿ ಏರಿ ತನ್ನೆದೆಯ ಮೇಲೆಯೇ
ತೇಲಾಡಿ ಸಮಾಧಿಗಳ ಹೆಕ್ಕಿ ದೋಚಿ
ಬೆಳಗಾಗುವದರೊಳಗೆ ದಾಟಿದ್ದು – ಇನ್ನೂ ಇನ್ನೂ
ಎಷ್ಟೊಂದು ಕಾಲಗರ್ಭದ ಕಥೆಗಳು.
ಪಿರಾಮಿಡ್‌ಗಳೊಳಗೆಲ್ಲ ಬಿಸಿಗಾಳಿ
ಬಿಸಿ ಉಸುರಿನ ಬಳುವಳಿಗಳು
ಇವೆಲ್ಲ ಒಮ್ಮೊಮ್ಮೆ ಬೆವರಿನ ಉಪ್ಪಾಗಿ
ನದಿಯ ಸಿಹಿಯಾಗಿ
ಹಳೇ ಮಾರುಕಟ್ಟೆ ನಡುಬೀದಿಯಲಿ
ಪನ್ನೀರಾಗಿ, ಅಬ್ದುಲ್ಲಾನ ಊದು ಗಂಧಗಳ
ಪರಿಮಳವಾಗಿ, ಅಪರೂಪದ ಚಿತ್ರಣಗಳಾಗಿ
ನಮ್ಮೊಂದಿಗೆ ಮಾತನಾಡುತ್ತವೆ
ಪುನರ್ಜನ್ಮವಾಗಿ ಬಂದಿರುವೆ
ಫೆರೋ ನಗುತ್ತಾನೆ ನೆಪ್ರಿಟಿಟಿ
ಬೆಲ್ಲಿ ಡಾನ್ಸ್‌ದಲಿ ಸೆಳೆಯುತ್ತಾಳೆ.
*****
ಪುಸ್ತಕ: ಇರುವಿಕೆ