ಪೋಲಿಟ್ರಿಕ್ಟ್ ಸೀರಿಯಸ್ ಆಗಿ ತಗಾತೀನಿ ಅಂದ ರೆಬಲ್‌ಸ್ಟಾರು

ವರಲ್ಡ್‍ನಾಗೆ ಅದೇಟೋ ಅಚ್ಚರಿಗಳು ನೆಡಿತಾ ಇತಾವಂತ್ರಿ. ಸಂಸದನಾಗೆ ಎಂದೂ ಪಾರ್ಲಿಮೆಂಟಿಗೆ ನೆಟ್ಟಗೆ ಹೋಗದ ನಮ್ಮ ಅಂಬರೀಸು ತಟ್ಟಂತೆ ಕೇಂದ್ರದಾಗೆ ಮಿನಿಟ್ರು ಆಗಿಬಿಡೋದು ಅಂದ್ರೆ ವಂಡರ್ಮೆ ಥಂಡರ್ ಬಿಡ್ರಿ. ಆಯಪ್ಪ ಯಾವತ್ತೂ ಅಟೆ ಸಿನಿಮಾ ಬದುಕನ್ನೂ ಸೀರಿಯಸ್ ಆಗಿ ತಗಂಡಿದ್ದಿಲ್ಲ. ನಿರ್ದೇಶಕ ಕಣಗಾಲ್ ಪುಟ್ಟಣ್ಣ ‘ಜಲೀಲ’ ಅಂತ ಕರೆದ್ರು ಮತ್ತಾರೋ ವಿಲನ್ ಪಾರ್ಟು ಕೊಟ್ಟರು. ರೇಪ್ ಮಾಡು ಅಂದ್ರು. ನಿರ್ದೇಶಕ ರಾಜೇಂದ್ರಸಿಂಗ್ ಬಾಬು  ‘ಅಂತ’ ಅಂಬೋ ಸಿನಿಮಾ ತೆಗಿವಾಗ ಇನ್ನು ಮ್ಯಾಗೆ ನೀನು ಸಣ್ಣಪುಟ್ಟ ಪಾತ್ರ ಬಿಟ್ಟಾಕು. ಈವತ್ತಿಂದ ‘ಹೀರೊ’ ಆದೆ ಅಂತ ಜೈಕಾರ ಹಾಕಿದರು.

ಆಮೇಲೆ ಅಂಬರೀಸು ಕನ್ನಡ ಸಿಲಿಮಾದಾಗೆ ಆಕಾಸದ ಎತ್ತರಕ್ಕೆ ಬೆಳೆದಾಗ್ಲೂ ಆಯಪ್ಪಂಗೆ ಪಾತ್ರಕಿಂತ ಹೆಚ್ಚಿನ ಖುಷಿ ಕೊಡ್ತಾ ಇದ್ದದ್ದು ಮೂರೆಲೆ, ಮೂಗಿನ ಮಟ್ಟ ಕುಡಿತ. ಪಾತ್ರಗಳ ಆಳಕ್ಕಿಳೇದೆ ಅಮಲಿನ ಆಳಕ್ಕಿಳಿದರೂ ಯಾವೊಬ್ಬ ನಿರ್ಮಾಪಕ ನಿರ್ದೇಶಕನೂ ಉಸಿರೆತ್ತಲಿಲ್ಲ. ಇನ್ಸಲ್ಟ್ ಮಾಡ್ಲಿಲ್ಲ. ಸಿನಿಮಾ ಸೋತರೂ ಅಂಬರೀಸ್ನೂ ಎಂದೂ ಚಿಂತೆ ಮಾಡ್ಲಿಲ್ಲ. ಆದರೆ ನಿರ್ಮಾಪಕನ ಬಗೆ ಚಿಂತೆ ಮಾಡೋದು. ಇನ್ನೊಂದು ಸಿಲಿಮಾ ತೆಗಿ ಕಚ್ಕತದೆ ಅಂತ ಕಾಲ್‌ಶೀಟ್ ಕೊಡೋದು. ‘ಅಭಿಮಾನಿಗಳು, ಸಿನಿಮಾ ಮಂದಿ ತಕಲೀಫ್‌ನಾಗಿರೋ ಅಂಬಿ’ ಅಂತ ಯಾರಾನ ಹೇಳಿದ್ರೆ ಕೈಬಿಚ್ಚಿ ಕಾಸು ಕೊಡೋನು. ಅದ್ಕೆ ಕಲಿಯುಗದ ಕರ್ಣ ಅಂತು ಮಂದಿ.

ಇದನ್ನ ನೊಡಿದ್ದ ದ್ಯಾವೇಗೋಡ್ರು ಅಂಬರೀಸ್ನ ರಾಜಕೀಯಕ್ಕೆ ಎಳ್ಕಂಬಂದ್ರು. ಏಟುದಿನ ಅಂತ ಹುಡ್ಗೀರ ಸೊಂಟ ಹಿಡ್ಕೊಂಡು ಕುಣೀತಿ ಸಿಕ್ಕು ಸಿಕ್ಕೋರ್ನೆಲ್ಲಾ ಬಡೀತಿ. ಸಿನಿಮಾದಾಗೆ ರಾಜಕಾರಣಿಗಳಿಗೆ ಗುಂಡಿಕ್ಕಿ ಸಾಯಿಸಿದ್ದು ಸಾಕು. ಧಂ ಇದ್ದರೆ ಬಾ. ಇಲ್ಲಿರೋ ಭ್ರಷ್ಟಚಾರಿಗಳ ಎದೆಗೆ ಗುಂಡಿಕ್ಕು. ಹೆಂಗೂ ನಿಂಗೂ ಏಜ್ ಆತು. ಈ ನಿನ ಏಜ್ಗೆ ಈಗ ಸಿಲಿಮಾಕ್ಕಿಂತ ರಾಜಕೀಯವೇ ಸುಖತ್ ಸೂಟ್ ಆಗೋದು ಎಂದೆಲ್ಲಾ ಅಡ್ವೈಜ್ ಮಾಡಿದಾಗ ಅಂಬರೀಸೂ ರಾಜಕೀಯಕ್ಕೆ ಜಂಪ್ ಮಾಡ್ದ. ಸೋತ, ಮೂರು ಪಟ್ಟು ಗೆದ್ದ. ದ್ಯಾವೇಗೋಡ್ರು ಅವರ ಸನಿಸಂತಾನದ ಮತ್ತು ಅಂಡರ್‌ಸ್ಟಾಂಡ್ ಆಗುತ್ಲು ಕಾಂಗ್ರೆಸ್ಗೆ ಜಂಪ್‌ಮಾಡ್ದ. ಇಲ್ಲಿವಗೂ ಮೂರುಪಟ್ಟು ಗೆದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನಂಗಿದ್ದ ಈವಯ್ಯನಿಗೆ ಖದರ್ ಬಂದದ್ದೇ ಮಾಜಿ ಸಿ‌ಎಂ ವಿಗ್ ಕಿಸ್ಣ ಎಗೇನ್ ಕರ್ನಾಟಕಗ್ದಾಗೆ ಬೇರು ಬಿಡ್ತೀನಿ ಅಂತ ಸುದ್ದಿ ಹಬ್ಬಿಸಿದಾಗ್ಲೆ.
ಕಿಸ್ಣ ಡಿಕೆಸಿನ ಮುಂದಿಟ್ಕಂಡು ಎಗೇನ್ ಇಲ್ಲಿಗೆ ಬಂದ್ರೆ ನಮ್ಮ ಬಡ್ಡೇಗೆ ನೀರು ಬತ್ತದೆ ಅಂತ ಥಿಂಕ್ ಮಾಡಿದ ಹಿರೇ ಮನುಸ್ಯ ಖರ್ಗೆ, ದಬರಿ ಧರ್ಮು ಡೆಲ್ಲಿಯಾತ್ರೆ ಶುರು ಮಾಡಿದರು. ಸಿದ್ರಾಮು ಒಬ್ಬನಿಂದ ವರ್ಕ್‌ಔಟ್ ಆಗೋಲ್ಲ ಸೋನಿ ಮೇಡಮ್ಮು, ಚಾಮುಂಡೇಶ್ವರಿ ಕ್ಷೇತ್ರದಾಗೆ ‘ವಿನ್’ ಆಗಬೇಕಂದ್ರೆ ಒಂದು ಆನೆಬಲ ಸಾಲ್ದು. ನೂರಾನೆ ಬಲ ಬೇಕ್ರಿ. ಅದ್ಕೆ ಒಬ್ಬ ಬಲಿಷ್ಟ ಒಕ್ಕಲಿಗನ್ನ ಮುಂದೆ ತರಬೇಕು ಅಂತ ಮೇಡಂ ಹಿಂದೆ ಬಿದ್ದು ವಿಲಿವಿಲಿ ಒದ್ದಾಡ್ತಾ ಈಗ ಇರೋದು ಒಂದೇ ದಾರಿ. ಅಂಬರೀಸ್ನ ಮಿನೀಟ್ರು ಮಾಡಿ ಅಂತ ಅಲವತ್ತುಕೊಂಡರು.

ಸೋನಿಯಾ ಆಂಟೋನಿ ಆಹ್ಮದ್ ಎಲ್ಲಾ ಬ್ರೇನ್ಗೆ ಕೆಲಸ ಕೊಟ್ಟರು. ವಿಗ್‌ಕ್ರಿಸ್ಣ ಅವನ ಪಟಾಲಮ್ಮುಗಳಿಗೆ ಪಟ್ಟ ಕಟ್ಟಿದರೆ ಈ ಸಲ ಕಾಂಗ್ರೆಸ್ನೇ ಪೂರಾ ಚಟ್ಟ ಕಟ್ಟೇ ಬಿಡ್ತಾರೆ ಅಂಬೋ ಒಪಿನಿಯನ್ಗೆ ಬಂದ್ರು. ಅಂಬರೀಸ್ಗೆ ಹೊಡೀತು ಲಕ್ಕು ಮಂತ್ರಿಯಾಗೇ ಹೋದ್ರಪಾ! ಆವಯ್ಯ ಸಿನಿಮಾ ಬದುಕ್ಕೆ ಆಗ್ಲಿ ರಾಜಕೀಯ ಬದುಕ್ನೆ ಆಗ್ಲಿ ನಮ್ಮಪ್ಪನಾಣೆ ಎಂದೆಂದೂ ಸೀರಿಯಸ್ ಆಗಿ ತಗಂಡ ಇಸ್ಮ ಅಲ್ಲ. ಅಷ್ಟು ಯಾಕ್ರಿ ಬದುಕನ್ನೇ ಸೀರಿಯಸ್ ಆಗಿ ತಗಳ್ಳದ ಪೋರ್ಕಿ ಬಡ್ಡೆತ್ತೋದು. ಲೈಫ್ ಈಸು ಟು ಎಂಜಾಯ್ ಅಂಬೋ ಪಾಲಿಸಿಯ ದಿಲ್‌ದಾರ್ ಮನುಸ್ಯ ಧರ್ಮು, ಖರ್ಗೆ ಒಂದು ಕಲ್ಲಿನಾಗೆ ಎಲ್ಡು ಹಕ್ಕಿ ಹೊಡೆದು ಕಿಲ ಕಿಲ ನಕ್ಕಿದ್ದೇ ನಕ್ಕಿದ್ದು. ವಿಗ್‌ಕಿಸ್ಣ ಕರ್ನಾಟಕದಾಗೆ ಕಾಲು ಇಕ್ಕದಂಗಾತು. ಗೋಡ್ರಾ ಸ್ಪೀಡ್ಗೆ ಬ್ರೇಕ್ ಬಿದ್ದಂಗೆ ಆತು.

ಗೊಡ್ರಿಗೆ ತಿಕ ಉರಿದೋತು. ಕಾಂಗ್ರೆಸ್ಗೆ ಆನೆ ಬಲ ಬಂತು ಅಂತ ಖರ್ಗೆ ಅಂದಿದ್ನೆ ಎಗದಿಗ ಗೇಲಿಮಾಡಿದ ಗೋಡ್ರು ಮೊದಲೇನು ಇಲಿ ಬಲ ಇತ್ತೆ? ನರಿಬಲ ಇತ್ತೆ? ಅಂತ ಸ್ವಾಟೆ ಓರೆ ಮಾಡಿ ನಗುತ್ತಾ ಬೋಳು ತಲೆ ಕೆರೆದರು. ಆದರೆ ಮೊನ್ನೆ ಅರಮನೆನಾಗ ಅಂಬರೀಸ್ಗೆ ಸನ್ಮಾನ ಮಾಡೋವಾಗ ಸಾವಿರಾರು ಜನ ಸೇರಿದ್ದು ನೋಡಿ ಕಾಂಗ್ರೆಸ್ನೋಗೆ ಖುಸಿ. ಕೋ-ಜಾ ಸರ್ಕಾರಕ್ಕೋ ಕಸಿವಿಸಿ. ಎಲ್ಲರೂ ಅಂಬರೀಸ್ಗೆ ಹೇಳಿದ್ದು ಒಂದೇ ಢೈಲಾಗು. “ಅಯ್ಯಾ ಇಗ್ಲಾರ ಫೋಲಿಟ್ರಿಕ್ಸ್‌ನ ‘ಟ್ರಿಕ್ಸ್’ ಅಂಡರ್‌ಸ್ಟಾಂಡಿಂಗ್ ಮಾಡ್ಕೊಂಡು ಸೀರಿಯಸ್ ಆಗಿ ವರ್ಕ್ ಮಾಡು” ಅಂದರು. ದೇನೆವಾಲೆ ದೇನೆ ಕಾ ಸಮಯ್ ತಪ್ಪಡ್ ಮಾರ್ಕೆ ದೇತಾ ಹೈ ಅಂತಾರೆ ನೆಕ್ಸ್ಟು ನೀನೇ ಸಿ‌ಎಂ ಆದಿಯಾ ಬಿ ಸಿರಿಯಸ್ ಅಂತೆಲ್ಲಾ ಸಿಲಿಮಾ ಫ್ರೆಂಡ್ಸು ಇಸ್ಣು ರವಿಸಂದ್ರ ರಾ.ಸಿ.ಬಾಬು ರಾಕುಲೇನು ಪೇಡಿದರು.

ಖರ್ಗೆ ತಮ್ಮ ಎಂದಿನ ಸುಮಧುರ ಕಂಠದಲ್ಲಿ ಕರ್ಕಶವಾಗಿ ಗೋಡ್ರ ಮಕ್ಕೆ ನಿವಾಳಿ ಬೀಸಿ ತೆಗೆದಿದ್ದು ಹಿಂಗೆ. ೧೨೦ ವರ್ಷದ ಓಲ್ಡ್ ಏಜ್‌ನಾಗಿರೋ ಕಾಂಗ್ರಸ್ನೇ ಇದ್ಕಿಂತ ಮಂಚೆ ಬಲ ಇದ್ದಿದ್ಕೆ ನಿಮ್ಮನ್ನ ಡಿಫೀಟ್ ಮಾಡ್ತಾ ಬಂದಿದ್ದಯ್ಯಾ ಗೌಡ. ಈಗ ಹೇಳ್ತೀನಿ ಕೇಳು ಬಿಜೆಪಿ- ಜೆಡಿ‌ಎಸ್ಗೆ ಇಲಿ ಬಲ ಇದ್ದಾಗ ಕಾಂಗ್ರೆಸ್ಗೆ ಬೆಕ್ಕಿನ ಬಲ ಬತ್ತದೆ. ನಿಮ್ಗೆ ಬೆಕ್ಕಿನ ಬಲ ಬಂದಾಗ ನಮ್ಗೆ ನರಿ ಬಲ. ನಿಮ್ಗೆ ನರಿ ಬಲ ಬಂದಾಗ ನಮ್ಗೆ ಹುಲಿಬಲ. ನಿಮ್ಗೆ ಹುಲಿಬಲ ಬಂತೋ ನಮ್ಗೆ ಆನೆಬಲ ಬತ್ತದೆ ಅಂತ್ಹೇಳಿದಾಗ ಎಲ್ಲೆಡೆ ಚಪ್ಪಾಳೆ.

ಅಂಬರೀಸ್ನು ಎದ್ದು ನಿಂತು ಸುರಿಯೋ ಮಳೆ ಮ್ಯಾಗೆ ಆಣೆ ಮಡಗಿ ಇನ್ನುಮ್ಯಾಲೆ ಪೋಲಿಟ್ರಿಕ್ಸ್‌ನ ಸಖತ್ ಸೀರಿಯಸ್ ಆಗಿ ತಗಂತಿನೇಳ್ರಿ. ಯಾವನಾನ ಬಾಲಬಿಚ್ಚಿದ್ರೆ ಲಂಚ ಮುಟ್ಟಿದ್ರೆ ಬಡ ಜನರಿಗೇನಾರ ದ್ರೋಹ ಬಗೆದ್ರೆ ಅಂತ, ಚಕ್ರವ್ಯೂಹ ಸಿನಿಮಾದಾಗೆ ಗುಂಡು ಹೊಡ್ದು ಸಾಯಿಸಿದಂಗೆ ಸಾಯಿಸಿಬಿಡ್ತೀನಿ ಅಂತ ರೆಬಲ್ ಸ್ಟೈಲ್ನಾಗೆ ಗುಡುಗುತ್ತಾ ಸುತ್ತಮುತ್ತ ಇರೋ ಖಾದಿಗಳ ಮ್ಯಾಗೆ ಕೆಂಗಣ್ಣು ಬಿಟ್ಟಾಗ ಹಳೆ ಖಾದಿಖದೀಮರು ನಡುಗಿದ್ದು ಚಳಿಗೋ ಅಂಬರೀಸ ಗುಡುಗಿಗೋ ತಿಳೀನಿಲ್ಲ. ಬರಿ ಮಂಡ್ಯದ ಗಂಡೇಕೆ ಕರ್ನಾಟಕದ ಗಂಡಾಗು ಅಂತ ಡಿಕೆಶಿ ಎಚ್ಚರಿಸಿದಾಗ ಅಂಬರೀಸು. ‘ಕುಂತ್ಕಳಯ್ಯ ಕಂಡಿದೀನಿ. ಬರಿ ಕರ್ನಾಟಕದ ಗಂಡೇಕೆ ಭಾರತ ಗಂಡಾಗ್ತೀನಿ’ ಅಂತ ರೋಪ್ ಡೈಲಾಗ್ ಹೊಡ್ದಾಗ ಸುರಿಯೋ ಮಳೆ ಜೊತೆನಾಗೆ ಚಪ್ಪಾಳೆಯ ಸುರಿಮಳೆ.

ಯಾವಾಗ ಸಿದ್ರಾಮು ಅಂಬರೀಸರೆಂಬ ಜೋಡೆತ್ತುಗುಳ್ನ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ನೊಗಕ್ಕೆ ಹೊಡೋಕೆ ರೆಡಿಯಾದ್ರೋ, ಗೋಡ್ರು ಫ್ಯಾಮಿಲಿ ಸಮೇತ ಸೃಂಗೇರಿಗೆ ಓಡಿಹೋಗಿ ಹೋಮ ಹವನ ಮಹಾರುದ್ರಯಾಗ ಸುಡುಗಾಡು ಸಿದ್ದರ ಮಠ ಎಲ್ಲಾ ಮಾಡಿದ್ರಾ ವಟುಗಳಿಗೆ ದಾನಧರ್ಮ ಕೊಡ್ತಾ ‘ಸಿದ್ರಾಮ ಸೋಲಂಗೇನಾರ ಶಾಪ ಕೊಡಿ’ ಅಂತ ಬಾಂಬ್ರು ಕಾಲಿಗೆ ಡೈ ಹೊಡೆದದ್ದೇ ಹೊಡೆದದ್ದೂ.

ನಾವು ಮಾತ್ರವೇ ಕ್ಯಾಂಡಿಡೇಟ್ ಹಾಕ್ತೀವಿ ತೆಪ್ಪಗಿರಿ ಅಂತ ಗೋಡ್ರು ಗದರಿದರೂ ಬಿಜೆಪಿಗಳು ಜಗ್ಗಂಗಿಲ್ಲ. ಗೋಡ್ರು ಪಾಲಿಗೆ ಬಿಜೆಪಿ ಬಿಜೆಪಿಯೋರ ಪಾಲಿಗೆ ಗೋಡ್ರೆ ಬಗಲ್ಮೆ ದುಸ್ಮನ್ ಆಗವರೆ! ಚುನಾವಣೆ ಡಿಸೆಂಬರ್ ನಾಕಕ್ಕೆ ಅಂತ ಅನೌನ್ಸೂ ಆಗೇತಿ. ಚಾಮುಂಡೇಸ್ವರಿ ಕ್ಷೇತ್ರ ಈಗ ಕುರುಕ್ಷೇತ್ರವಾಗೇತ್ರಿ. ಕೌರವರು ಯಾರೋ ಪಾಂಡವರು ಯಾರೋ ಅಂಬೋದು ತಿಳಿಯಾಕೆ ಡಿಸೆಂಬರ್ ಎಳರ ತನಕ ಕಾಯಬೇಕಾಗೇತಿ. ನಾವಾರ ಮಾಡೋದೇನೈತಿ. ಅಲ್ಲಿಂಗಟ ಕಾಯೋಣೇಳ್ರಿ.
*****
( ದಿ. ೨೩-೧೧-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂತರಾಗದವರು
Next post ಇಜಿಪ್ತಿನೆದೆಯಾಳ

ಸಣ್ಣ ಕತೆ

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…