Home / ಕವನ / ಕವಿತೆ / ನೋವು-ಸೊಳ್ಳೆ

ನೋವು-ಸೊಳ್ಳೆ

ಹೇಳಲಾಗದಾವುದೋ ಒಂದು ನೋವದೊಂದೆ ಸಮನೆ
ಎದೆಯ ಕೊರೆವುದು.
ಹಣೆಯೊಳಿಲ್ಲವಯ್ಯ ಸುಕ್ಕು;
ಹುಬ್ಬೊಳಿಲ್ಲ ಗಂಟು, ಸಿಕ್ಕು;
ಇದ್ದ ಕಡೆಯೆ ಇಹುದು ಕಣ್ಣು!-
ಎಲುಬುಗುಳಿಯ ಆಳಕೆ
ಇಳಿದೆ ಇಲ್ಲ-
ಕೆನ್ನೆಯಲ್ಲಿ ಗುಳಿಗಳಿಲ್ಲ!
ತುಟಿಗು ನಗೆಗು ದ್ವೇಷವಿಲ್ಲ!
ಬಿದ್ದಿಲ್ಲವು ಜೋತು ಮೊಗವು!-
ಒಟ್ಟಿನಲ್ಲಿ ದೇಹೆ ಭದ್ರ-
ಆದರೂನು,
ಎಷ್ಟೊ ದಿನದ ಬಳಿಕ ಗಂಟು ಬಿಚ್ಚಿ ತೆರೆದ ಪುಸ್ತಕದಲಿ
ಮೇಲ ಗಟ್ಟಿ ರಟ್ಟು ಭದ್ರ! ಒಳಗೆ ಹಾಳೆ ಗೆದ್ದಲುಣಿಸು!-
ಅಂತೆಯೇ,
ಸರಿಯಿದ್ದರು ದೇಹ ಮಾತ್ರ
ಹೇಳಲಾಗದಾವುದೋ ಒಂದು ನೋವದೊಂದೆ ಸಮನೆ
ಎದೆಯ ಕೊರೆವುದು.
ಭೋಂಕನೆದ್ದು ಮೈಯ ನೆಕ್ಕಿ ಬಾಳ ಸುಡುವ ತ್ರಾಣವಿಲ್ಲ
ಅದಕೆ; ಆ ಪುಣ್ಯ ಕೂಡ
ಇಲ್ಲವೆನಗೆ!
ಕೊಂಚ ಕೊಂಚ-
ವಾಗಿ ತಿಂದು
ಮತ್ತೆ ಚಿಗುರಲನುವುಗೊಟ್ಟು
ಎಂದೆಂದಿಗು ಕೊರೆಯುತಿರುವ ಆಸೆಯದಕೆ!
“ಇದೋ! ಇಲ್ಲಿ!
ಅಲ್ಲ, ಅಲ್ಲಿ!
ಎಲ್ಲಿ ನನ್ನ ಹಿಡಿಯೊ ನೋಡುವ!”
ಎಂದೆನ್ನನು ಒಂದೆ ಸಮನೆ

ಆಡಿಸಾಡಿ,
ಚುಚ್ಚಿ ಚುಚ್ಚಿ
ನಗುತಲಿರುವುದು!
ಅದನು ಹಿಡಿಯೆ ನಾನು ಹೋಗಿ
ವಿಫಲನಾಗಿ ನನ್ನ ಪಾಡ ನಾನೆ ನೋಡಿ ನಗುವೆನು!
ಚಿತ್ರವೊಂದ ನೆನೆದು ಅದನು ಹಿಡಿಯುವಾಸೆ ಮರೆವೆನು:

ಸುತ್ತಲೆಲ್ಲ ಮಸಕು ಮಸಕು ಕತ್ತಲು!
ನಿದ್ದೆ ಮೆಲ್ಲನಿಳಿಯುತಿಹುದು ಮುತ್ತನೊತ್ತಲು!
ಅರ್ಧ ನಿದ್ರೆ
ಆಗ………….
ಕಿವಿಯ ಬಳಿಯೆ ಗುಂಯ್ಯೆಂದು
ಗಾನಲಹರಿ ಕೇಳ್ವುದೊಂದು!
ಅದೇ ಘನಿಸಿದಂತೆ ಕಿವಿಗೆ ಸೊಳ್ಳೆಯೊಂದು ಸೋಂಕಲು,
ಅದ ತಪ್ಪಿಸೆ ಯುದ್ಧ ಮೊದಲು!
ಓಹೊ! ನನ್ನ ಎಚ್ಚರವನು ಅರಿತು
ತನ್ನ ಕುರಿತ ನನ್ನ ಭಾವಗಳನು ಗ್ರಹಿಸಿ
ತನ್ನ ತಲೆಯ ಬಾಲಕಿಟ್ಟು
ವಕ್ರನೋಟವನ್ನು ಬೀರಿ
ಮಾಯ!
ಮಾಯ?
ಒಂದು ಚಣನೆ, ಅಷ್ಟೆ!
ಮತ್ತೆ ಧಾಳಿ ಮೊದಲು!
ಗಾಳಿಗಿಂತ ಹಗುರವಾಗಿ
ಮೆಲ್ಲನಿಳಿದು ಕೆನ್ನೆ ಮೇಲೆ
ಚುಚ್ಚಿ ಮುಳ್ಳ ರಕುತ ಹೀರಿ
ಹಾರಿ, ಜಾರಿ, ಮಾಯವು!
ಬಳಿಕ ನನ್ನ ಕೈಯ ಏಟು
ನನ್ನ ಕೆನ್ನೆಗೇ!
ಇದಕುತ್ತರ ನಗುವೊ ಅಳುವೊ?
ನೀವೆ ಹೇಳಿ!
ಮೊದಲು ಅಳು,
ಕಡೆಗೆ ನಗು!
*****

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...