ಕ್ಷಣ ಕ್ಷಣಕೂ ಏರುಬ್ಬರವಾಗಿ
ಭಗ್ನವಾಗುವ ಕನಸುಗಳ ಎಸೆಯದಿರಿ
ತುಂಬು ಕತ್ತಲೆಯ ಹೆಜ್ಜೆಗಳಿಗೆ
ಚುಕ್ಕೆಗಳ ಭರವಸೆಯ ಮಾತುಗಳು
ಗಜಿಬಿಜಿ ಹಾದಿಯಲ್ಲೂ
ಕುರುಡನಿಗೆ ಕೋಲು, ನಿರಾಳ ಉಸಿರು
ಅಂತರಂಗದ ಮಾತುಗಳು
ಮೂಕ ಕುರುಡು ಹೆಳವುಗಳೆಂದು
ನಿರಾಶರಾದರೆ ಹೇಗೆ?
ಮೌನ ಮುರಿದು ಮಾತು ಚಿಗಿತು
ಕಣ್ಣಂಚಿನ ಹನಿಗಳು
ಗಲ್ಲ ಸ್ಪರ್ಶಿಸಿ ಮುಂಗೈಗೆ ಬಿದ್ದದ್ದೇ
ಹೃದಯ ಹಗುರು ಸಂತೃಪ್ತ ಉಸಿರು
ವರ್ತಮಾನ ಭವಿಷ್ಯವೆಲ್ಲಾ
ಅರ್ಥವಿಲ್ಲದ್ದು ಎಂದಿರಾ !
ಹುಷಾರು, ಕಸಕಡ್ಡಿ ಬೆಳೆದು
ಬರಡಾದೀತು ಮನಸು
ಸುಟ್ಟು ಸುಣ್ಣವಾದಾವು ಕನಸುಗಳು,
ಮೇಲೆ ಕಟ್ಟಿಬಿಟ್ಟಾರು ಸಮಾಧಿ-
ನೋಡಿ ಆಕಾಶದಂಗಳ
ತೆರ ತೆರನಾದ ಬೆಳ್ಳಿಮೋಡಗಳ
ಕ್ಷಣ ಕ್ಷಣದ ಸಂತಸ
ಇದ್ದರೆ ಇರಲಿ ಏನಂತೆ ನಡುವೆ
ಕಪ್ಪು ಹಳದಿ ಮೋಡಗಳೂ-
ಕೆನ್ನೆ ಮೇಲಿನ ಗುಳಿಯಂತೆ.
ಬಿಸಿಲು ಬೇಗೆ
ಎಲ್ಲೆಲ್ಲೂ ದಾವಾನಲ, ನೀರಡಿಕೆ
ಎದುರಿಗೆ ಸಮುದ್ರದ ಭೋರ್ಗರೆತ
ಸಮುದ್ರಕ್ಕೆ ಬಾಯಿಹಚ್ಚಿ
ತಣಿಯುವ ತವಕ
ಆದರೆ, ಉಪ್ಪುಪ್ಪು ಜಿಗುಟು ಎಂದರೆ ಹೇಗೆ?
ಇರಲಿ, ಮುಖದ ಮೇಲಾದರೂ
ನೀರು ಚಿಮುಕಿಸಿಕೊಳ್ಳಿ
ಕಡಲಿನಲಿ ಕಾಲಾದರೂ ಎದ್ದಿ
ತಂಪಡರೀತು ಮೈಮನ.
ಬಿಡಿ ಆತ್ಮ ನಿಂದನೆ
ಮನದಾಳದ ಮೌನ, ನಿರಾಶೆ
ಒಂದೊಂದೆ ಒಡಲಾಳಕ್ಕೆ (ಕಲೀಡೋಸ್ಕೋಪ್) ಇಳಿಸಿ.
ಆಹಾ !!
ಎಷ್ಟೊಂದು ಮಾತುಗಳು
ಎಷ್ಟೊಂದು ಚಿತ್ರಗಳು
ಎಷ್ಟೊಂದು ಅರ್ಥಗಳು
ಈ ಮಗ್ಗಲು ಆ ಮಗ್ಗಲು
ಮತ್ತೊಂದು ಮಗ್ಗಲು ಇನ್ನೊಂದು ಮಗ್ಗಲು
ಹಾಗೇ ಮತ್ತೆ ಮತ್ತೆ
ತಡಕಾಟ ಹುಡುಕಾಟ
ಏನಿದು ಸಂಭ್ರಮ
ಬಿರಿದ ನೆಲಕೆ ಮಳೆ ಹನಿಯ ಸ್ಪರ್ಶ
ಮೊಗ್ಗೊಡೆದು ಘಮ್ಮೆನ್ನುವ ಸಮಯ.
*****
ಪುಸ್ತಕ: ಇರುವಿಕೆ