೧
ಸುತ್ತಲು ಕಲ್ಲು!
ಸುತ್ತಿದೆ ಹುಲ್ಲು!!
ಕಲ್ಲುಗಳೆಡೆಯಲಿ ತೊರೆಯೊಂದು.
ಮೆಲ್ಲನೆ ಹೊನಲಿಡುವುದು ಮುಂದು.
ಘುಳು-ಘುಳು ನಾದ
ತೊರೆಯ ನಿನಾದ
ಕೇಳಿಸುತಿರುವುದು. – ಬಹು ಮೋದ!
೨
ಕರಿ ಕಲ್ಲಿನಲಿ
ಕುಳ್ಳಿರಲಲ್ಲಿ
ಹಾರುತಲಿಹ ತೆಳು ನೀರ ಹನಿ
ಕಾಲನು ತೊಳೆವುದು, ತೊರೆಯ ದನಿ
ಮೃದು ಸಂಗೀತವ-
ನೊದವಿಸಿ, ಸೊಗವ
ಬೀರುತಲಿರುವುದು! ಈ ತಾಣ
ಮೋನದ ಶಾಂತಿಯ ನಿಲ್ದಾಣ!!
*****
೧೯೩೬

















