೧
ಅನ್ನ ದಾತನ ಮೇಲೆ. ಕೈಯೆತ್ತ ಬಾರದೆಂ-
ದೆನ್ನುವಾ ತತ್ವದಲಿ ತಥ್ಯಾಂಶವಿದೆ; ಇರಲಿ!
ಅನ್ನ ಧೊರಕಿಸ ಬಂದ ಮಾನವರು ಕುನ್ನಿಗಳೇ?
ಪಶುಗಳೇ? ಕ್ರಿಮಿಗಳೇನು
ಚೆನ್ನಾಗಿ-ಅರಿಯಿರೈ ಓ! ಅನ್ನ ದಾತೃಗಳೇ!
ನಿನ್ನಿನಂತೆಯೆ ಇಂದು ಮುಂದು ಬಹ ದಿನಗಳಲಿ
ಬೆನ್ನು ಮೂಳೆಯ ಮುರಿವೆನೆಂಬ ಗರುವದನುಡಿಯ
ಗಂಟಲಲಿ ಹಿಡಿಯಿರಿನ್ನು!
೨
ಅಂದಿನಾದಿನಗಳಿಂದೆಲ್ಲೊ ಮರೆಯಾಗಿಹವು
ಇಂದು ಪ್ರತಿಮಾನವನ ಬದ್ಧಿ ಬಲವಾಗಿಹುದು
ಎಂದಿಗಾದರೂ ಅನ್ನ ಧನಕನಕ ಸಂಪತ್ತು
ಬಾಗಲಿಗೆ ಬಂದು ಕುಳಿತು
ಇಂದಿದೋ ಬಂದಿಹೆನು ತೆರೆಯಿರೈ ಬಾಕಿಲವ
ಎಂದೆಂಬ ಹೊತ್ತೊಮ್ಮೆ ಈ ಕಾಲ ಗರ್ಭದಲಿ
ಬಂದೆ ಬರುವುದು ದಿಟಂ ಅಂದಿಗಾವುದು ಗತಿಯು!
ನಿಮಗೆಲೈ ಶ್ರೀಯುತರೆ?
*****
ಬೆಂಗಳೂರು : ೧೯೪೧








