ಸ್ಯಾದಸ್ತಿ ಸ್ಯಾನ್ನಾಸ್ತಿ ಸ್ಯಾದಸ್ತಿ ನಾಸ್ತೀತಿ- !
ಸ್ಯಾದವಕ್ತವ್ಯವೋ? ವಾಚಾಮಗೋಚರವೋ?
ಇಂದ್ರಿಯಾತೀತವೋ? ಖಲು ಜ್ಞಾನ ಬ್ರಹ್ಮವೋ?
ಆದ್ಯಂತ ರಹಿತ ನಾಕಾರ ಶೂನ್ಯಂ ದಿಟಂ
ಎಂಬೀನಿನಾದದಲಿ ತಥ್ಯಾಂಶವಿದೆ; ಸಹಜ!
ನಾ ಬ್ರಹ್ಮ ನೀ ಬ್ರಹ್ಮ; ಕಾಂಬುದೆಲ್ಲವು ಬ್ರಹ್ಮ!
ಬ್ರಹ್ಮನಿಂ ನಾ ಬೇರೆ; ಜೀವಾತ್ಮ ಪರಮಾತ್ಮ
ದ್ವೈತದಲಿ ದೇದೀಪ್ಯಮಾನವಾಗಿದೆ; ಸತ್ಯ;
ಸೊಲ್ಲಿನಲಿ ಶಬ್ದಾರ್ಥ ಬೆರೆದಂತೆ ಶಿವ-ಶಕ್ತಿ
ಒಂದಾಗಿ ಬೆಳಗಿಸಿವೆ ಜಡವ ಚೇತನಗೊಳಿಸಿ;
ಅಪರ ವಸ್ತುವ ನಂಬಿ ನಡೆವರೇ ಬಹಳ ಜನ
ಆದರೂ ನಾಸ್ತಿಕರು ತಲೆಯೆತ್ತಿ ನಿಂತಿಹರು
ಕಾಲ ಪ್ರವಾಹದಲಿ ಕೊಚ್ಚಿ ಹೋಗದೆ ಏಕೆ?
ಬುದ್ಧಿ ಬೆಳವಣಿಗೆಗಿದು ಬೆನ್ನೆಲುಬು; ಶಾಶ್ವತಂ!
ಭಾವನಾ ಸ್ವಾತಂತ್ರಕಿದು ಬೆಲೆಯು; ಇಲ್ಲದೊಡೆ
ಬರಿಕಾಡು, ಮಾನವ್ಯದಂತಸ್ತು ಮುಗಿಲಿನೊಲು
ವೈಶಾಲ್ಯ ಸಾಗರದ ಗಾಂಭೀರ್ಯಮಂ ತಳೆದು
ಚಾಚಿಹುದು ಸಪ್ತ ಸಾಗರದಾಚೆ-ಇದು ಊಹೆ!
ಊಹೆಯನು ಮೀರಿ ನಿಂತಿದೆ ತನ್ನ ಶಕ್ತಿಯನು
ಶೂನ್ಯದಲಿ ನೆರೆತುಂಬಿ; ಘನಘೋರ ಗಂಭೀರ
ನೋಟವಿದ ನೋಡೆ ಮನುಜನ ಚರ್ಮ ಚಕ್ಷುಗಳು
ಚೈತನ್ಯವಳಿದು ನಿಂತಿವೆ; ಧರ್ಮದಾರಿಯನು
ತೋರುವಡೆ ಸಾರ್ಥಕ್ಯ! ಧರ್ಮಹಾಳಾಗಿಹುದು
ಪ್ರೇಮಪ್ರೇತವ ತಬ್ಬಿ ವಿಕಟಾಟ್ಟಹಾಸದಲಿ-
ಕುಣಿಯುತಿದೆ!
ಓ! ಸಾಕು! ಕವಿವರ್ಯ ನಿನ್ನ ಘನ
ಪಾಂಡಿತ್ಯ ದರ್ಶನಂ; ಇದನಾರು ಓದುವರು?
ಕಾಲ ಬದಲಾಯಿಸಿದೆ; ಕೋಟಿಗಟ್ಟಳೆ ಜನರು
ಆನಂದದಿಂದೋದಿ ನಲಿದುಲಿವ ಸಾಹಿತ್ಯ
ನಿರ್ಮಿತಿಗೆ ನೀ ತೊಡಗು; ಇಲ್ಲದಿರೆ ನೀಸತ್ತು
ಸಾಹಿತ್ಯವನು ಕೊಂದು ನಾಡದ್ರೋಹವ ಬಗೆದು
ಮಣ್ಣಾಗಿ ಮಲಗುವೆಯೊ! ಇಂದಿನೀ ಓಘವನು
ದಿಟ್ಟಸೆಲೊ! ಕುರುಡನೊಲು ಹಗ್ಗವನು ಹೊಸೆದೊಡೇಂ
ಸಂದೀತು? ಕಾಲವನ್ನನುಸರಿಸಿ ಕವಿಸಾಗೆ
ಬುವಿ ಸ್ವರ್ಗ ವಿಷವಮೃತವಾದಂತೆ! ಇಲ್ಲದಿರೆ
ಕಾವ್ಯ ಶಬ್ದದ ಕಂತೆ, ಹಾಳೂರ ಬರಿಸಂತೆ!!
*****
ಬೆಂಗಳೂರು : ೧೯೪೪








