ನಾ ಸವೆದು ಸರಿಯುತಿಹೆನಮ್ಮ,
ಬೇಸಗೆಯ ಮಂಜಿನಂತಮ್ಮ,
ನಾ ಸವೆದು ಸರಿವೆನಮ್ಮ
ನೆಮ್ಮುಗೆಯ ನಾಡ ಬಳಿಗೆ;
ಅಲ್ಲಿ ಕೊರಗೆಂಬುದಿಲ್ಲಮ್ಮ,
ಅಲ್ಲಿ ಚಳಿ ಛಿದ್ರವಿಲ್ಲಮ್ಮ,
ಬಾಳು ಬಲ್ಸೊಗಸಮ್ಮ
ನೆಮ್ಮುಗೆಯ ನಾಡಿನೊಳಗೆ,
ನನ್ನಚ್ಚು ಮೆಚ್ಚು ನೀನಮ್ಮ,
ನಿನ್ನ ಶ್ರಮ ತೀರಿತಿನ್ನಮ್ಮ,
ನಿನ್ನನೆದಿರ್ಗೊಳುವೆನಮ್ಮ
ನೆಮ್ಮುಗೆಯ ನಾಡಿನೊಳಗೆ;
ಅಲ್ಲಿಹಳು ನಮ್ಮ ಹೆಣ್ಣಮ್ಮ,
ಒಳ್ಳೆಯವಳೆಷ್ಟು ಚೆಲುವಮ್ಮ,
ಹೇಗೆ ಕಳುಹಿದೆವಮ್ಮ
ನೆಮ್ಮುಗೆಯ ನಾಡ ಬಳಿಗೆ!
ನೋವನುಳಿ, ಕಣ್ಣನೊರಸಮ್ಮ
ಜೀವ ಸೆರೆ ತೆರೆಯುತಿಹುದಮ್ಮ,
ದೇವರಕೊ ಕರೆವನಮ್ಮ
ನೆಮ್ಮುಗೆಯ ನಾಡ ಬಳಿಗೆ;
ಶೋಕಿಸದೆ ನನ್ನ ಕಳುಹಮ್ಮ,
ಲೋಕದೀ ಬದುಕು ಭ್ರಾಂತಮ್ಮ,
ನಲಿವ, ಬಾ, ನನ್ನಮ್ಮ
ನೆಮ್ಮುಗೆಯ ನಾಡಿನೊಳಗೆ.
*****
LADY NAIRNE (1766 – 1845) : The Land of the Leal






