ಗಂಡಹೆಂಡಿರು ಮಾತಾಡಿಕೊಂಡು ಒಂದು ಹಿಂಡುವ ಎಮ್ಮೆಯನ್ನು ಕೊಂಡುತಂದರು. ಹಾಲಿಗೆ ಹೆಪ್ಪು ಹಾಕಿ, ಬೆಣ್ಣೆ ತುಪ್ಪ ಮಾಡಿ ಮಾರಿಕೊಂಡರೆ ಕೈಯಲ್ಲಿ ಹಣವೂ ಆಗುವದೆಂದು ಗಂಡನು ಹೆಂಡತಿಗೆ ಸೂಚನೆಮಾಡಿದನು. ಅದಕೈ ಹೆಂಡತಿ ಸೈ ಎಂದಳು.
ಕೆಂಡದ ಮೇಲಿಟ್ಟು ಹಾಲು ಕಾಸಿದರೆ, ಅಂಗೈಗಡುತರ ಕೆನೆ ಹೊರಡುವದು. ಆದರೆ ಅದನ್ನು ನೋಡಿದರೆ ಹೆಂಡತಿಯ ಜೀವ ಅದನ್ನು ತಿನ್ನುವುದಕ್ಕೆ ಎಳಸುವದು. ಅಲ್ಪಸ್ವಲ್ಪ ತಿಂದರೆ ಸಾಕಾಗುವಂಥವಲ್ಲ ಕೆನೆ. ಅದನ್ನು ಇಡಿಯಾಗಿ ತಿಂದು, ಹಾಲಿಗೆ ಕೆನೆಯೇ ಹೊರಡುವದಿಲ್ಲವೆಂದು ಗಂಡನಿಗೆ ಹೇಳುವಳು. ಎಮ್ಮೆ ಹೆಡಸಿನದಲ್ಲ, ಬರಿ ಹಾಲಿನದು – ಎಂದು ತಪ್ಪು ಎಮ್ಮೆಯ ಮೇಲೆ ಹಾಕುವಳು.
ಗಂಡನು, ತಮಗೆ ಎಮ್ಮೆ ಮಾರಿದವರಲ್ಲಿ ಹೋಗಿ ಕೇಳಿದ – “ಹೆಡಸು ಹಯನಿಗೆ ಮಿಗಿಲಾದ ಎಮ್ಮೆಯೆಂದು ನಮಗೆ ಭರವಸೆ ಹೇಳಿದಿರಿ. ಈಗ ಕೆನೆಯೇ ಹೊರಡುವದಿಲ್ಲವೆಂದು ನನ್ನ ಹೆಂಡತಿ ಹೇಳುತ್ತಿದ್ದಾಳೆ. ನೀವು ಸುಳ್ಳು ಹೇಳಿ ಎಮ್ಮೆ ಕೊಡಬಾರದಿತ್ತು, ನೆರೆಯವರಿಗೆ.”
ಆ ರೈತನ ಹೆಂಡತಿ ಹಯನು ಮಾಡಬಲ್ಲಳು. ಆ ಕೆಲಸದಲ್ಲಿ ಬಲ್ಲಿದಳು. ಮಾರಿದ ಎಮ್ಮೆಯ ಹಯನವನ್ನು ಸಹ ಈ ಮುಂಚೆ ಮಾಡಿದ್ದಳು. ಆಕೆ ಹೇಳಿದಳು – “ತಮ್ಮಾ, ನಿನ್ನ ಹೆಂಡತಿ ಹೇಳುವುದು ಸುಳ್ಳು. ಹಾಲು ಚನ್ನಾಗಿ ಕಾಸಿ ಅಂಗೈಗಡುತರ ಕೆನೆ ತೆಗೆದು ತೋರಿಸಲೇನು ನಿನಗೆ? ನಿಮ್ಮಲ್ಲಿಯೂ ಕೆನೆ ಹೊರಡುತ್ತಿರಬಹುದು. ಆದರೆ ಅದನ್ನು ನಿನ್ನ ಹೆಂಡತಿ ಅದೆಂತು ಇಲ್ಲದಾಗಿಸುತ್ತಾಳೋ ನೋಡು.”
“ಹೇಗೆ ನೋಡಲಿ ?”
“ನಾನು ಎರಡು ಗೊಂಬೆ ಮಾಡಿಕೊಡುತ್ತೇನೆ. ಅವುಗಳಲ್ಲಿ ಒಂದನ್ನು ಹಾಲ ಗಡಿಗೆಯಿಡುವಲ್ಲಿ, ಇನ್ನೊಂದು ಪಾತ್ರೆಪಗಡೆ ಇಡುವಲ್ಲಿ ಗಟ್ಟಿಯಾಗಿ ನೆಡು. ಅದರಿಂದ ತಾನೇ ಹೊರಬೀಳುತ್ತದೆ ಇದ್ದ ಸಂಗತಿ” ಎಂದಳು ಆ ರೈತನ ಹೆಂಡತಿ.
ಅವೆರಡು ಗೊಂಬೆಗಳನ್ನು ತಂದು ಗಂಡನು ಸರಿಯಾದ ಸ್ಥಳಗಳಲ್ಲಿ ಗಟ್ಟಿಯಾಗಿ ನಿಲ್ಲಿಸಿದನು. ಹೆಂಡತಿ ಎಂದಿನಂತೆ ಹಾಲಗಡಿಗೆಯನ್ನು ತೆಗೆದುಕೊಂಡು ಕೆನೆ ತಿನ್ನಬೇಕೆಂದು, ಪಾತ್ರೆ ತೆಗೆದುಕೊಳ್ಳಲು ಕೈ ಚಾಚಿದಾಗ ಅಲ್ಲಿ ನಿಲ್ಲಿಸಿದ ಗೊಂಬೆ – “ಬಟ್ಟಲ್ಯಾತಕ್ಕ” ಎಂದು ಕೇಳಿತು. ಅತ್ತ ಕಡೆಗೆ ಕಿವಿಕೊಡದೆ ಹಾಲಗಡಿಗೆಯ ಬಳಿಗೆ ಬಂದಾಗ – “ಹಾಲು ಕೆನಿ ತಿನ್ಲಕ್ಕ” ಎಂದಿತು ಇನ್ನೊಂದು ಗೊಂಬೆ. ಅಷ್ಟಕ್ಕೆ ಬಿಡಲಿಲ್ಲ ಆ ಗೊಂಬೆಗಳು.
ಒಂದು ಕೇಳುವುದು – “ಬಟ್ಟಲ್ಯಾತಕ್ಕ ?”
ಇನ್ನೊಂದು ಕೇಳುವುದು – “ಕೆನಿತಿನ್ಲಕ್ಕ.”
ಈ ಕ್ರಮ ನಡೆದೇ ನಡೆಯಲು ಹೆಂಡತಿ ಹುಚ್ಚು ಹಿಡಿದಂತೆ ನಿಂತುಬಿಟ್ಟಳು. ಅದೇ ಹೊತ್ತಿಗೆ ಅಕಸ್ಮಾತ್ ಗಂಡ ಬರಲು ಆಕೆ, ಗೊಂಬೆಗಳ ಸಲುವಾಗಿ ದೂರು ಹೇಳಿದಳು – “ನೋಡಿರಿ. ಈ ಗೊಂಬೆಗಳು ಸುಳ್ಳುಸುಳ್ಳೇ ಕೂಗಾಟ ಎಬ್ಬಿಸಿವೆ. ಬಟ್ಟಲ್ಯಾತಕ್ಕ ಅನ್ನುತ್ತದೆ ಒಂದು. ಕೆನಿತಿನ್ಲಕ್ಕ ಅನ್ನುತ್ತದೆ ಇನ್ನೊಂದು, ಅವುಗಳನ್ನು ಕಿತ್ತೊಗೆಯಿರಿ.”
“ಇರಲಿ ಬಿಡು. ಅವೇನು ಮಾಡುತ್ತವೆ ನಿನಗೆ ?”
ತರುವಾಯ ಹಾಲು ಕಾಸಿದರೆ ಕೆನೆ ಬರತೊಡಗಿತು. ಕಡಿದರೆ ಮುದ್ದೆ ಮುದ್ದೆ ಬೆಣ್ಣೆ; ಕಾಸಿದರೆ ತಂಬಿಗೆ ತಂಬಿಗೆ ತುಪ್ಪ. ಅದನ್ನು ಕಂಡು ಗಂಡನು ಹಿಗ್ಗಿ -“ಹೆಂಡತಿ ಚೆನ್ನಾಗಿ ಮಾಡುವಳು ಹಯನ” ಎಂದು ಹೊಗಳತೊಡಗಿದನು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು