Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶನಿವಾರ, ೧೧ ಜುಲೈ, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶನಿವಾರ, ೧೧ ಜುಲೈ, ೧೯೪೨

ಪ್ರೀತಿಯ ಕಿಟಿ,

ಡ್ಯಾಡಿ, ಮಮ್ಮಿ ಮತ್ತು ಮಾರ್‍ಗೊಟ್ ಪ್ರತಿ ಕಾಲುಗಂಟೆಗೊಮ್ಮೆ ಸಮಯ ತಿಳಿಸಲು ಸದ್ದು ಮಾಡುವ ವೆಸ್ಟರ್‌ಟೋರೆನ್ ಗಡಿಯಾರದ ಸದ್ದನ್ನು ಸಹಿಸುತ್ತಿರಲಿಲ್ಲ. ಆದರೆ ನನಗೆ ಅದು ಮೊದಲಿನಿಂದಲೂ ಬಹಳ ಇಷ್ಟ. ಅದರಲ್ಲೂ ರಾತ್ರಿ ಹೊತ್ತು ನಂಬಿಗಸ್ಥ ಗೆಳೆಯನಂತೆ. ನೀನು ಕೂಡಾ ಆ ಸದ್ದು ಕೇಳಲು ಬಯಸುವಿ ಎಂದೇ ನನಗನ್ನಿಸುತ್ತದೆ. ಅಂದರೆ ಆ ಕ್ಷಣ ಎಲ್ಲ ಮರೆತುಬಿಡುವುದು. ಒಳ್ಳೆಯದು. ನನಗೆ ನಾನ್ಯಾರೆಂದೇ ಸರಿಯಾಗಿ ತಿಳಿದಿಲ್ಲ. ಈ ಕಟ್ಟಡವೂ ನನಗೆ ಮನೆಯಲ್ಲಿದ್ದ ಭಾವನೆಯನ್ನು ತಂದಿದೆ ಎಂದು ನನಗನ್ನಿಸುತ್ತಿಲ್ಲ. ಆದರೆ ಇದರರ್ಥ ನಾನು ಇಲ್ಲಿರಲು ಇಷ್ಟಪಡುತ್ತಿಲ್ಲವೆಂದಲ್ಲ. ಇದು ನನಗೆ ಹೊರ ವಸತಿಗೃಹಗಳಲ್ಲಿ ರಜಾದಿನಗಳನ್ನು ಕಳೆದಂತಿದೆ, ನನ್ನದು ಬಹುಶಃ ಹುಚ್ಚು ಯೋಚನೆ. ಆದರೆ ಇದು ನನಗೆ ಹಾಗೆ ಅನ್ನಿಸುತ್ತಿದೆ. ಗುಪ್ತ ಗೃಹವು ಪ್ರಶಸ್ತ ಅಡಗು ತಾಣ. ಒಂದು ಕಡೆ ಬಾಗಿ ಒರಗಿದಂತಿದ್ದ ಇದು ಹೊರಗಿಂದ ಮುಚ್ಚಿದಂತೆ ಗೋಚರಿಸುತ್ತಿತ್ತು. ಇಂತಹ ಸೂಕ್ತ ಅಡಗು ಜಾಗ ನಿಮಗೆ ಅಮ್ಸ್ಟರಡ್ಯಾಮ್ ಮಾತ್ರವಲ್ಲ ಇಡೀ ಹಾಲಂಡ್‌ನಲ್ಲಿ ಇನ್ನೆಲ್ಲಿಯೂ ಸಿಗದು. ನಮ್ಮ ಚಿಕ್ಕದಾದ ಕೋಣೆ ಮೊದಲಿಗೆ ತೀರಾ ಖಾಲಿಖಾಲಿ ಕಾಣುತ್ತಿತ್ತು. ಆದರೆ ಡ್ಯಾಡಿಗೆ ನಾನು ಥ್ಯಾಂಕ್ಸ್ ಹೇಳಲೇಬೇಕು. ಡ್ಯಾಡಿ ನನ್ನ ನೆಚ್ಚಿನ ಫಿಲ್ಮಸ್ಟಾರ ಸಂಗ್ರಹಗಳನ್ನು, ಪೋಸ್ಟಕಾರ್ಡ ಚಿತ್ರಗಳನ್ನು, ಮತ್ತು ಬ್ರಷ್ ಮತ್ತು ಅಂಟಿಸುವ ಬಣ್ಣದ ಮೂಲಕ ನಾನು ಗೋಡೆಯನ್ನು ದೊಡ್ಡ ಚಿತ್ರಗಳಿಂದ ಅಲಂಕರಿಸಿದೆ. ಇದು ಕೋಣೆಯನ್ನು ಹೆಚ್ಚು ಆಹ್ಲಾದಕರವಾಗಿಸುತ್ತದೆ. ವ್ಯಾನ್ಡ್ಯಾನ್ ಬಂದಾಗ ನಾವು ಅಟ್ಟದಿಂದ ಕೆಲವು ಕಟ್ಟಿಗೆಯನ್ನು ತೆಗೆದುಕೊಳ್ಳಬೇಕು. ಮತ್ತು ಅದರಿಂದ ಕೆಲವು ಸಣ್ಣ ಗೋಡೆ ಕಪಾಟುಗಳನ್ನು ತಯಾರಿಸಿ ಬೇಡದ ವಸ್ತುಗಳನ್ನೆಲ್ಲಾ ಸರಿಹೊಂದಿಸಿ ಕೋಣೆಯನ್ನು ಸುಂದರವಾಗಿಸುವುದು.

ಮಾರ್‍ಗೊಟ್ ಮತ್ತು ಮಮ್ಮಿ ಈಗ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ. ನಿನ್ನೆಯಿಂದ ಇದು ಮೊದಲ ಬಾರಿ ಮಮ್ಮಿ ಸ್ವಲ್ಪ ಸಾರನ್ನಾದರೂ ಮಾಡುವಷ್ಟು ಚೇತರಿಸಿಕೊಂಡಿದ್ದಾರೆ. ಆದರೆ ಕೆಳ ಮೆಟ್ಟಿಲಲ್ಲಿ ಯಾರೊಂದಿಗೋ ಮಾತನಾಡುತ್ತ ಎಲ್ಲವನ್ನೂ ಮರೆತಳು. ಹಾಗಾಗಿ ಬೇಯಲಿಟ್ಟ ಬಟಾಣಿಗಳು ಕರಟಿದ್ದು, ಪಾತ್ರೆಯ ಬುಡಕ್ಕೆ ಬಿಡದಂತೆ ಅಂಟಿಕೊಂಡಿದ್ದವು. ಕೂಫಸ್ ನನಗೆ “Young People’s Annual” ಎಂಬ ಪುಸ್ತಕ ತಂದಿದ್ದಾರೆ. ನಾವು ನಾಲ್ವರೂ ನಿನ್ನೆ ಸಂಜೆ ಪ್ರೈವೇಟ್ ಕಛೇರಿಗೆ ಹೋಗಿ ರೇಡಿಯೋ ಆಲಿಸಿದೆವು. ಅದನ್ನು ಯಾರಾದರೂ ಕೇಳಿಯಾರೆಂಬ ಕಾರಣಕ್ಕೆ ನಾನು ಬಹಳ ಹೆದರಿದ್ದೆ. ಅದಕ್ಕಾಗಿ ನಾನು ಡ್ಯಾಡಿಯಲ್ಲಿ ನನ್ನೊಂದಿಗೆ ಮೇಲ್ಮಡಿಗೆ ಬರುವಂತೆ ಕಾಡಿದೆ. ಮಮ್ಮಿಗೆ ನನ್ನ ಸ್ವಭಾವ ತಿಳಿದಿದೆ. ಹಾಗಾಗಿ ಆಕೆಯೂ ಬಂದಳು. ಇನ್ನೊಂದು ರೀತಿಯಲ್ಲಿ ನಮ್ಮ ನೆರೆಯವರೆಲ್ಲಾದರೂ ನಮ್ಮನ್ನು ಕೇಳಿಸಿಕೊಂಡಿರಬಹುದು. ಇಲ್ಲ ಏನನ್ನಾದರೂ ನೋಡಿರಬಹುದು ಎಂಬ ಸಂಗತಿಗಳಿಂದ ನಾವು ಬಹಳ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇವೆ. ಮೊದಲ ದಿನ ಕಿಟಕಿ ಬಾಗಿಲ ಪರದೆಗಳನ್ನು ನೇರಗೊಳಿಸಿದೆವು. ಅವುಗಳನ್ನು ಸುಮ್ಮನೇ ಕರ್ಟನ್ನಗಳೆಂದು ಕರೆಯಬಹುದಷ್ಟೇ. ಕಸುಬುದಾರರಲ್ಲದ ಡ್ಯಾಡಿ ಮತ್ತು ನನ್ನ ಕೈ ಹೊಲಿಗೆಯಲ್ಲಿ ಹೇಗೆ ಬೇಕೋ ಹಾಗೆ ಹೊಲಿದ ಅವು ಒಂದೇ ನಮೂನೆಯಲ್ಲಿಲ್ಲದ ಭಿನ್ನ ಆಕಾರ, ಗುಣಮಟ್ಟದ ಸವೆದ ಬಳಸಿದ ಬಟ್ಟೆಗಳಾಗಿದ್ದವು. ಇವೆಲ್ಲ ಕಲೆಯ ಕೆಲಸಗಳು. ಒತ್ತು ಸೂಜಿಗಳ ಮೂಲಕ ನಾವು ಆ ಸ್ಥಳ ಬಿಡುವವರೆಗೂ ಕೆಳಗೆ ಬೀಳದಂತೆ ಗಟ್ಟಿಯಾಗಿ ತಮ್ಮ ಸ್ಥಾನದಲ್ಲೆ ಇರುವಂತೆ ಕಟ್ಟಿದ್ದೆವು.

ನಮ್ಮ ವಾಸದ ಬಲಬದಿಗೆ ದೊಡ್ಡ ವ್ಯವಹಾರ ಪ್ರಾಂಗಣಗಳಿವೆ. ಎಡಕ್ಕೆ ಪೀಠೋಪಕರಣದ ಕಾರ್ಖಾನೆ ಇದೆ. ಕೆಲಸ ವೇಳೆಯ ನಂತರ ಅಲ್ಲಿ ಯಾರೂ ಇರುವುದಿಲ್ಲ. ಆದರೂ ಅಲ್ಲಿಯ ಸದ್ದು ಗೋಡೆಯ ಮೂಲಕ ಚಲಿಸುತ್ತಲೇ ಇರಬಲ್ಲದು. ಮಾರ್‍ಗೊಟ್‌ಳಿಗೆ ರಾತ್ರಿ ಹೊತ್ತು ಕೆಮ್ಮಬಾರದೆಂದು ಖಡಾಖಂಡಿತವಾಗಿ ಹೇಳಲಾಗಿದೆ. ಆಕೆಗೆ ಅತಿಯಾದ ಶೀತವಿದ್ದರೂ ಆಕೆ ಕೋಡೈನ್ ಮಾತ್ರೆ ಹೆಚ್ಚಿಗೆ ಸೇವಿಸುವಂತೆ ಮಾಡುತ್ತೇವೆ. ನಾನು ಮಂಗಳವಾರಕ್ಕಾಗಿ ಕಾಯುತ್ತಿದ್ದೇನೆ. ಅದು ವ್ಯಾನ್ಡ್ಯಾನ್ ಬರುತ್ತಾರೆ ಎಂಬುದಕ್ಕೆ, ಅವರು ಬಂದರೆ ಬಹಳ ತಮಾಷೆ ಹಾಗು ಅಂತಹ ನಿಶ್ಯಬ್ದವಿರುವುದಿಲ್ಲ. ಈ ನೀರವತೆ ನನಗೆ ರಾತ್ರಿ ಮತ್ತು ಸಂಜೆಯ ಸಮಯದಲ್ಲಿ ಭಯ ಹುಟ್ಟಿಸುತ್ತದೆ.

ನಮ್ಮನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರಲ್ಲಿ ಒಬ್ಬರಾದರೂ ಇಲ್ಲಿಯೇ ರಾತ್ರಿ ಹೊತ್ತು ಮಲಗುವುದಾದರೆ ಚೆನ್ನಾಗಿತ್ತೆಂದು ನಾನು ಬಯಸುತ್ತೇನೆ. ಹೊರಹೋಗಲಾಗದ ಈ ಸಂಕಟವನ್ನು ವ್ಯಕ್ತಗೊಳಿಸಲು ನನ್ನಿಂದ ಸಾಧ್ಯವಿಲ್ಲ. ಅಲ್ಲದೇ ನಾವೆಲ್ಲಾದರೂ ಗುರುತಿಸಲ್ಪಟ್ಟು ಗುಂಡಿಗೆ ಬಲಿಯಾಗುವಂತಾದರೆ ಎಂಬುದು ನನ್ನ ಹೆದರಿಕೆ. ಇದು ಒಳ್ಳೆಯ ಮುಂದಾಲೋಚನೆಯಲ್ಲ. ದಿನದ ಸಮಯದಲ್ಲಿ ನಾವು ಸಣ್ಣದನಿಯಲ್ಲಿಯೇ ಮಾತನಾಡಬೇಕಿತ್ತು. ಮತ್ತು ಇಲ್ಲದಿದ್ದಲ್ಲಿ ಉಗ್ರಾಣದಲ್ಲಿ ಕೆಲಸ ಮಾಡುವವರು ನಮ್ಮನ್ನು ಕೇಳಿಸಿಕೊಳ್ಳುವ ಸಂಭವವಿತ್ತು.

ನನ್ನನ್ಯಾರೋ ಕರೆಯುತ್ತಿದ್ದಾರೆ.

ನಿನ್ನ
ಆನ್.
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...