Home / ಕವನ / ಕವಿತೆ / ನರಗುಂದ

ನರಗುಂದ

ಹೆಸರೀಗೆ ನರಗುಂದ, ಮೊಸರೀಗೆ ನೀರಿಲ್ಲ
ಕುಸುರದ ಸಿಂಬಿ ಬರಿಗೊಡ | ಇಟಗೊಂಡು
ಉಸರಂತ ಬಾವಿ ಇಳಿದಾರೊ ೧

ನರಗುಂದ ಕಾಳವನ, ಮರಿಗುದರಿ ಸಾಯಽಲಿ
ಚದರಂಗ ಮಾಲ ಮುರಿಯಽಲಿ | ಸೊರಟೂರ
ಸದರೀಗೆ ಸುದ್ದಿ ಹರಿಯಽಲಿ ೨

ನರಗುಂದವೆಂಬೂದು, ಅರಗಿಣಿ ಪಟ್ಟಣ
ಕೆರೆ ಕಡಿಸಿ ನೀರ ಕುಡಿಲಿಲ್ಲ | ಬಾಬಣ್ಣ
ತಿರುಗಿ ನರಗುಂದ ಹೊಗಲಿಲ್ಲ ೩

ಕೆಂಪು ಮಾರಿಯ ದಂಡು, ಗುಂಪಾಗಿ ಮುತ್ತ್ಯಾರೊ
ಕಂಪಿಸಿಹೋತೊ ನರಗುಂದೊ | ಬಾಬಸಾಬ
ಹಂಪಿಹೊಳಿ ಮುಂದ ತಡವ್ಯಾನೊ ೪

ಹಂಡಬಂಡದ ಕುದುರಿ, ಗೊಂಡೆ ಲಾಗಾಮನ್ಹಾಕಿ
ದಂಡು ಇಳದೀತೊ ನರಗುಂದೊ | ಬಾಬಾಸಾಬ
ಗುಂಡಿಲಿಕ್ಕ್ಯಾನೊ ಗುಡಿಯಾಗೊ ೫

ವಿಣ್ಣ್ಯಾ ತಾಂಡದ ಬಂಟ, ಕಣ್ಣಿಟ್ಟ ಸಿರಕೊಯ್ದು
ಮಣ್ಣ ಪಾಲಾದ ಮೆಣಸನ್ನ | ನರಗುಂದ
ಅಣ್ಣ ಕೂಗ್ಯಾನೊ ಕಾಳಗೊ ೬

ಮುಂಡರಗಿ ಭೀಮಣ್ಣ, ಬಂಡಾಯ ಎಬ್ಬಿಸಿದ
ದಂಡ ಕೂಡ್ಯಾನೊ ನರಗುಂದ | ಬಾಬಣ್ಣ
ಕೆಂಡ ಕಾರ್ಯಾನೊ ಕುಂವಣಿಗೊ ೭

ಮಾಲಕಮಸಾಹೇಬ, ಕೇಳಿ ಮೆಣಸನ ಸಾವ
ಗಾಳಿ ಬಂದ್ಹಾಂಗ ಮುತ್ತ್ಯಾನೊ | ನರಗುಂದ
ತಾಳ ಬಾಸ್ವಾತೊ ಚಣದಾಗೊ ೮

ಬಾಪು ವಂತರ ಸಂಚು, ಘಾತ ನರಗುಂದಾತೊ
ಹೋತೊ ಹಾಳಾಗಿ ನಿಪ್ಪತಗಿ| ನರಗುಂದ
ಖ್ಯಾತಿ ಜನದಾಗ ಕಡೆತನಕ ೯

ಹಾರೂರು ಹಾವಾಗಿ ಕೋರ್ಯಾರೊ ಒಳಸಂಚು
ಗಾರಗಾರಾತೊ ನರಗುಂದೊ | ಬಾಬಾಸಾಬ
ಕಾರ ಮಳಿಯಾಗ ಮನಿಬಿಟ್ಟ ೧೦

ಕಾಡೆಲ್ಲ ಕತ್ತರಿಸಿ, ನಾಡೆಲ್ಲ ತತ್ತರಿಸಿ
ಬಾಡುಗಳ್ಳರು ಹಾರೂರ | ತಾ ನಂಬಿ
ಕಾಡಿಗೀಡಾದ ಬಾಬಣ್ಣ ೧೧

ಮಡದಿ ಮಕ್ಕಳ ಬಿಟ್ಟ, ಹಡದ ತಾಯಿಯ ಬಿಟ್ಟ
ಕಡೆಗಾತ ಬಿಟ್ಟ ನಾಡಾಸೆ | ಬಾಬಾಸಾಬ
ಕೇಡಿಗೆ ಬಿಟ್ಟ ನರಗುಂದ ೧೨

ದೇಶಽವ ಕಡೆಮಾಡಿ, ಆಶೆಽಗೆ ಈಡಾಗಿ
ಕಾಸು ಕವಡಿಽಗೆ ಕಡೆಯಾಗಿ | ಹಾರೂರು
ಹಾಸಿ ಬೆಂಕ್ಯಾಗ ಬೂದ್ಯಾಗಿ ೧೩

ನರಗುಂದ ಅರಸನಿಗೆ, ವನವಾಸ ಬಂದೀತೊ
ತಿರುಗ್ಯಾನೊ ಕಾಡ ಪಾಲಾಗಿ | ಸೂಟರಗ
ತೊರಗಲ ಸಿಮ್ಯಾಗ ಕೈಸಿಕ್ಕೊ ೧೪

ಮಾಳಿಮ್ಯಾಗಿನ ಹುಲ್ಲ, ಗಾಳಿಗ್ಹಾರಿದರೇನು
ಗಾಲ ಮೇಲಾತೊ ನರಗುಂದೊ | ಬಾಬಾಸಾಬ
ಗಾಳೀಗಿ ಬಾಯ ಬಿಡತಾನೊ ೧೫

ಹೂಲಿ ಸಾಮಿಯು ಕೊಟ್ಟ, ಕೊಲ ಮಿಂಚಿನ ಸಾಪ
ಗಾಲ ಮೇಲಾತೊ ನರಗುಂದೊ | ಮರುವರುಷ
ಕೂಲಿ ಕುಂಬಳಿಗೆ ಎರುವಾತೊ ೧೬
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...