ಬದುಕಿಸಿದೆ ನೀನೆನ್ನ. ಯಾವ ಬದುಕೇನೆನಗೆ?
ನಿನ್ನಾಣತಿಯೆ ನನ್ನ ಜೀವಿತದ ಗುರಿಯು.
ನೀನಿತ್ತೆ ಕೀರ್ತಿಯನು. ಹೇಗೆ ಬಳಸುವದೆಂಬ
ಅರಿವನೀವುದು. ಅದುವೆ ಜೀವಿತದ ಝರಿಯು.
ಮರಣಶಯ್ಯೆಯಲಿರಲು ಪ್ರಾಣದಾನವನಿತ್ತೆ.
ಉಳಿಸಿರುವ ಹರಣವನು ಬಳಸಿ ನೋಡು:
ನಿನ್ನಾರತಿಗೆ ದೀಪ, ನಿನ್ನ ಕೊರಳಿಗೆ ಹೂವು,
ನಿನ್ನ ಕಿವಿಗಿಂಪುಸೊಂಪಾದ ಹಾಡು.
ನನ್ನ ನಾಡಿನ ಸೇವೆಗೆನ್ನ ನುಳಿಸೆಂದೊರೆಯೆ
“ಹೋಗು. ಕನ್ನಡನಾಡ ಸೇವಿಸೆಂ”ದೆ.
“ನನ್ನನೇ ನಂಬಿರುವ ನನ್ನಿಗರ ಕಾಣ್ವೆನೆನೆ
“ಹೋಗು. ಬಾಳವರೊಡನೆ. ಧಾನಿಸೆಂ”ದೆ!
ಚೆಲುವ ಕನ್ನಡನಾಡಿಗೊಂದು ಮಲ್ಲಿಗೆ ಹೂವ
ತರಲೆಂದು ತೆರಳಿದ್ದ ತರಳ ನಾನು.
ನಿನ್ನ ವರದಾನಕ್ಕೆ ಸರಿಯಾವುದೈ ದೊರೆಯೆ?
ಜೀವಸುಮವನೆ ನಿನಗೆ ಸಲ್ಲಿಸುವೆನು.
ತಿಳಿಯೆ ನಿನ್ನಯ ರೂಹ, ಅಳೆಯೆ ನಿನ್ನಯ ಠಾವ;
ಅರಿಯೆ ನಿನ್ನಯ ಮಾಯೆಯನು ದೇವ ದೇವ.
ಕೋಟಿ ನಕ್ಷತ್ರಗಳ ಕೋಟಿ ಯೋಜನದಾಚೆ
ನೆಲಿಸಿರುವೆ. ನಿಲುಕದಲ್ಲಿಗೆ ನನ್ನ ಭಾವ.
ನೀ ಕಾಣದಿರಲೇನು? ಮನಗಂಡಿಹೆನು ನಿನ್ನ.
ದನಿಯಾಲಿಸದೆ ನಿನ್ನ ಮನವ ತಿಳಿದೆ.
ನಿಗಮಗೋಚರ! ನಿನ್ನ ದಾಸಾನುದಾಸನಿಹೆ.
ನಿನ್ನ ಪದಪದ್ಮದಲಿ ಹುಟ್ಟಿ ಬೆಳೆದೆ.
*****









