[ಸ್ಪೇನದಲ್ಲಿ ಸರಕಾರದ ಪಕ್ಷವನ್ನು ಹಿಡಿದು
ಯುದ್ಧ ಮಾಡುತ್ತಿದ್ದ ಅಂತರರಾಷ್ಟ್ರೀಯ
ಸೈನ್ಯವನ್ನು ಸೇರಿದ್ದ-ನನ್ನ ಸಹಾದ್ಯಾಯಿ
ಯಾದ-ಬಿಲ್ ಶರ್ವುಡ್ಡನನ್ನು ಕುರಿತು-]
ಬಿಟ್ಟ ಬಾಣದಂತೆ, ಬಿಲ್ಲ! ನೆಟ್ಟಿಗಿಳಿದೆ ಸ್ಪೇನಕೆ:
ತಡೆಯಲಿಲ್ಲ ಗೆಳೆಯ! ನಿನ್ನ, ಸೋಫಿ, ರಂಭೆ, ಮೇನಕೆ!
ನಲ್ಲಳಾನಂದದಿಂದ ‘ಬಿಲ್ಲ! ಹೋಗು!’ ಎಂದಳು:
‘ಕಾಯುತಿರುವೆ ನಿನ್ನ ಗೆಲುವ’ನೆಂಬ ಸೊಲ್ಲ ತಂದಳು.
ಎಳೆಯನಿರಲು ಸಮತೆಗೆಂದು ಮಾರಿಕೊಂಡ ಜೀವವು,
ಗೆಳತಿಯೊಡನೆ ಸಮರಸವನು ಕಂಡುಕೊಂಡ ಭಾವವು,
ಇನಿಯಳಲ್ಲಿ ಕೂಡ ಸಮತೆ ನೆಲೆಸಿತೆಂಬ ಹೇವವು,-
ಯೋದ್ಧ! ವಿಜಯಿಯಾಗು! ನಿನ್ನದೆಲ್ಲವಿರಲಿ ಕ್ಷೇಮವು.
`ಸರ್ವಾರ್ಪಣ ಸತ್ಯ’ಕೆಂದೆ: ಆಹುದಹುದೆದೆಗಾರಿಕೆ!
ಧನ್ಯಳಹುದು ನಿನ್ನ ನಾಡದೇವಿ; ಆ ಅಮೇರಿಕೆ!
ಇನ್ನೆಂದಿಗೆ, ಗೆಳೆಯ! ನನ್ನ ನಿನ್ನ ಒಟ್ಟು ಸೇರಿಕೆ?
ಕ್ಷೇಮವಿರಲಿ ನಿನ್ನದೆಲ್ಲವೆಂಬುದೊಂದೆ ಕೋರಿಕೆ!
*****









