ಒಂದೂರಾಗ ಅತ್ತಿಗಿ ನಾದಿನಿ ಇದ್ದು ನಾದಿನಿ ನೀರು ಹೊಯ್ಕೊಂಡಿದ್ದಳು. ಐದರಾಗ ಅಣ್ಣ ತಂಗೀಗಿ ಕರಕೊಂಡು ಬರಲಿಕ್ಕ ಹೋದ. ಕರಕೊಂಡೂ ಬಂದ. ಅಡವ್ಯಾಗ ಒಂದು ಬಾಳೆಗಿಡ ಇತ್ತು. ಅದರ ಬುಡಕ್ಕ ಅಣ್ಣ ತಂಗಿ ಮನಕೊಂಡರು. ತಂಗಿ ನಿದ್ಯಾಗ ಗುರ್ ಹೊಡೆದಳು, ಹೊಟ್ಯಾಗಿನ ಕೂಸು ಗೊರಕಿ ಹೊಡೀತದ ಎಂದು ಅಣ್ಣ ತಂಗೀಗಿ ಲಗೂಮಾಡಿ ಮನೇಗಿ ಕರಕೊಂಡು ಬಂದ.
ಅತಿಗಿ ಎಷ್ಟಾದರೂ ಅತಿಗೀನೆ. ನಾದನಿಗಿ ನವಣಕ್ಕಿ, ಹಾರಕಿನ ಅಕ್ಕಿ ಉಣಿಸಿದಳೇ ಹೊರತು ನೆಲ್ಲಕ್ಕಿಯ ಅನ್ನಮಾಡಿ ನೀಡಲಿಲ್ಲ. ತಂಗೀಗಿ, ಆಕೀ ಮಕ್ಕಳೀಗಿ ಮನೆಮುಟ್ಟಿಸಿ ಅಣ್ಣ ಹೊಲಕ್ಕೆ ಹೋದ. ಗಂಡಗ ಶಾವಿಗಿ, ಬಾನಾ ಮಾಡಿ ನೀಡಿದಾಕಿ ನಾದಿನಿ ಮಕ್ಕಳಿಗಿ, ಮನಸ್ಯಾಗ ಒಂದೊಂದು ಬಿಲ್ಲಿರೊಟ್ಟಿ,
ನವಣಕ್ಕಿ ಬಾನಾಮಾಡಿ ನೀಡಿದಳು. ಕೊಟಗ್ಯಾಗ ಮನಗಿಸಿದಳು. ಹೊಲದಿಂದ ಬಂದ ಗಂಡಗ ಹೇಳಿದೆಳು-ನಾದಿನಿ ಮತ್ತ ಕೂಸುಗಳೆಲ್ಲ ಉಂಡವು. ನಾಲ್ಕೈದುದಿನ ದಿನಾಲು ಉಡುಗಿನ ದಾಣೆ ಉಣಿಸಿ, ಗಂಡ ಬರೂಕಿಂತ ಪಹಲೇನೆ ಉಣಿಸಿ, ಇನ್ನು ಮನಕೋರಿ ಎಂದು ಹೇಳುತ್ತಿದ್ದಳು. ಗಂಡನಿಗಿ ಹೆಂಡತಿಯ ಒಳಗಿನ ತಿಪಲ ಮಾತ್ರ ಖೂನ ಆಗಲಿಲ್ಲ. ಹೀಂಗೇ ಎಂಟುದಿನ ನಡೀತು. “ಇನ್ನ ಹೋಗಾರಿ ಮಗಾ” ಎಂದು ತಂಗಿ ತನ್ನ ಮಕ್ಕಳಿಗೆ ಅಂದಳು, ತವರ್ಮನಿ ಸುಖ ಬಹಳ ಆಯ್ತ – ಅಂದುಕೊಂಡಳು. “ಅಣ್ಣಾ, ನಾ ಇನ್ನ ಹೋಗತೀನು ನಮ್ಮ ಮನೀಗಿ” ಅಂದಾಗ ತಂಗೀಗಿ ಸೀರಿ, ಹುಡುಗರಿಗಿ ಅರಿವೆ ತರಬೇಕು ಎಂದಾಗ, ಅಣ್ಣನ ಹೆಂಡತಿ – ನಾನೇ ತರತೀನಿರೊಕ್ಕಾ ತಾತಾ-ಅಂದಳು. ನೂರುದೀಡಸೆ ಪದರಾಗ ಕಟಕೊಂಡು ದುಕಾನಕ್ಕೆ ಹೊಂಟಳು. ಆಕಡಿ ಈಕಡಿ ಓಡಾಡಿ ತಿಪ್ಪಿಮ್ಯಾಲಿಂದು, ಮೊಸಂಡೀ ಮ್ಯಾಗಿಂದು ಅರಿಬಿ ಜೊಂಡಿಸಿದಳು. ಕತ್ತಲಾಗೂದಕ್ಕೆ ಮೀರಿ ಬಂದಳು. ದೊಡ್ಡ ಗಂಟುಕಟ್ಟಿ ಇಟ್ಟಳು. ನಾಳೀಗಿ ಇದನ್ನು ಒಯ್ಯು ಎಂದು ನಾದಿನಿಗೆ ಹೇಳಿಬಿಟ್ಟಳು. ಬಾನ, ಬ್ಯಾಳಿ ಮಾಡಿ ಗಂಡಗ ಉಣಿಸಿದಳು. ನಾದಿನಿ ಮತ್ತು ಅವಳ ಮಕ್ಕಳಿಗೆ ನವಣಕ್ಕಿ ಬಾನ ತಪ್ಪಲಿಲ್ಲ.
ಅಣ್ಣ ಹಯಾಹೊತ್ತಿಗಿ ಹೊಲಕ್ಕ ಹೋಗುವಾಗ – “ತಂಗಿ ಮಕ್ಕಳೂಂದಗಿತ್ತಿ. ೮-೧೦ ರೊಟ್ಟಿ ಮಾಡಿ ಕಟ್ಟು” ಎಂದ. ಹೂ ಎಂದ ಹೆಂಡತಿ ನಸಕಿನಾಗೆದ್ದು ರೊಟ್ಟಿ ಮಾಡಲಿಲ್ಲ. ದೊಡ್ಡ ದೊಡ್ಡ ಹಲಪಿಕುಲ್ಲು ತಂದು, ಕುಂಚಿಗ್ಯಾಗ ಹಾಕಿ ಕಟ್ಟಿದಳು. ಅಲ್ಲೀ ಹೋಗಿ ಉಟುಗೋರಿ, ಉಟುಗೊಂಡು ಮೆರೀರಿ ಎಂದು ಅರಿಬಿ ಬಿಂಡೆ ತಂದಿಕ್ಕಿದಳು. ಮನಸ್ಯಾಗ ಒಂದೂಂದು ಬಿಲ್ಲೆ ರೊಟ್ಟಿ ಕೊಟ್ಟಳು.
ಹಾದ್ಯಾಗ ಅಣ್ಣನ ಹೊಲ. ಸೌತೀ ಬಳ್ಳಿಯ ಗುಂಟ ಕಾಯೀನೆ ಕಾಯಿ ಹರವಿದ್ದವು. ಪೋರಗೋಳಿಗಿ ಹಸಿವಿ ಆಗಿದ್ದವು. ಅವು ಸವತೀಕಾಯಿ ಕಡಕೊಂಡು ತಿಂದವು. ಹೊಲದೊಳಗಿದ್ದ ಆಳುಮಕ್ಕಳು – “ನೀ ಯಾರವ್ವ ? ಇಲ್ಲಿಯಾಕ ಬಂದೀದಿ” ಎಂದು ಬೆದರಿಸಿದವು. “ಚಂದಪ್ಪಕನ ತಂಗಿ ಆಗಬೇಕು” ಎಂದಳು. ಮುಂದೆ ನಡೆದರು. ಹೊಂಟು ನಿಂತಾಗ ಮನಸು ತುಂಬಿ ಹರಕಿಕೊಟ್ಟಳು – “ಕಂಟಿಕೊತ್ಹಂಗ ಹೊಲದ ಬೆಳೀ ಬೆಳೀಲಿ, ಮುತ್ತು ರತ್ನ ಬೆಳೀಲಿ. ನಮ್ಮಣ್ಣ ಆಶುಳ್ಳವ ಆಗಲಿ. ಶಂಭರವರ್ಷ- ಆಯುಷ್ಯಾಗಲಿ” ಎಂದು.
ಹಾದ್ಯಾಗ ಹಳ್ಳ ಹರೀತಿತ್ತು. ಕೂಸುಗಳು ಹಸಿದು ಕಂಗಾಲಾಗಿದ್ದವು. “ಮಗಾ, ನಿಮ್ಮತ್ತಿ ಬುತ್ತಿ ಕೊಟ್ಯಾಳ ಬಿಚ್ಚಿರೋ” ಅಂದಳು. ಬಿಚ್ಚಿನೋಡುತನ ಬುತ್ಯಾಗ ಕುಳ್ಳ ಅದೆ, ಹೆಂಡಿ ಅದೆ. ಅರಬೀಗಂಟನ್ನೂ ಬಿಚ್ಚಿನೋಡಿದರೆ ಅಲ್ಲಿ ಮಶಾಂಡದನ ಅರಬಿ ಅದ. ಅರಿಬಿ, ಕುಳ್ಳು ಎಲ್ಲಾ ಹರಿಯೂ ಗಂಗೆಯೊಳಗ ಒಗದು ಬಿಟ್ಟಳು. “ಶಿವ ನಮಗೆ ಹೆಂಥಾ ವೇಳೆ ತಂದೆಪಾ” ಎಂದು ಅವ್ವ- ಮಕ್ಕಳು ಗೋಳೋ ಎಂದು ಅತ್ತರು.
ಶಿವಪಾರ್ವತಿ ಆಕಡೆಯಿಂದ ಬಂದರು- “ಯಾಕವ್ವ, ಯಾಕಳತೀ” ಎಂದು ಕೇಳಿದರು. “ದೈವುಳ್ಳ ಅಣ್ಣನ ಮನೇಗಿ ಹೋದ್ರ ಅತ್ತಿಗಿ ಬಿಲ್ಲೆರೊಟ್ಟಿ ಮಕ್ಕಳ ಕೈಯಾಗ ಕೊಟ್ಟಳು. ಬುತ್ತಿ ಅಂತಹೇಳಿ ಕುಳಬಾನದಾಗಿನ ಕುಳ್ಳ ಕಟ್ಯಾಳ. ನಂದು ಖೊಟ್ಟಿ ನಸೀಬ” ಎಂದಳು.
ಶಿವಾ ಅಂದ “ತಂಗೀ ಮನೇಗಿ ಹೋಗು. ಶಿವಪೂಜಿ ಮಾಡು. ನೀ ಬಯಸಿದ್ದು ಸಿಗತಾದ.”
ಆಕಿ ಮನೆಗೆ ಹೋದಳು. ಮೈತಕೊಂಡು, ದೀಪ ಹಚ್ಚಿ ದೇವರ ಮುಂದೆ ಅಡ್ಡಬಿದ್ದಳು. ಮನೆಸೀಗಿ ಬಂದದ್ದಲ್ಲ ಬೇಡಿದಳು. ಮನೇತುಂಬ ತುಂಬಿತು. ಯಾತಕ್ಕೂ ಯಾನೂ ಕೊರತಿ ಬೀಳಲಿಲ್ಲ.
ಜಬರದಸ್ತ ಒಕ್ಕಲುತನ ಮಾಡಿದಳು, ಒಂದು ಜೋಡು ಎತ್ತು ಬೇಕಾದವು. ರೊಕ್ಕ ಪದರಾಗ ಕಟಗೊಂಡು ತಂಗಿ ಸಂತೀಗಿ ಹೋದಳು. ಅತಿಗೀನೂ ಸಂತಿಗಿ ಬಂದಿದ್ದಳು. ನಾದಿನಿಯ ಸೀರೇನು, ತೆನಿತಿರುವಿದ ಕುಬಸೇನು, ಮೈಮೇಲಿನ ಡಾಗೀಣೇನು – ಝೋಕು ಆಗ್ಯಾಳೆಂದು ಮನಸಿನಾಗೆ ಹಲ್ಲು ಕಡೆದಳು. ಹೊಟ್ಯಾಗ ಬೆಂಕಿ ಬಿದ್ದಂಗಾಯ್ತ ಅವಳಿಗಿ. ಸರ್ರನೆ ಮನೇಗಿ ಹೋಗಿಬಿಟ್ಟಳು.
ತಂಗೀನೂ ತನ್ನ ಮನೇಗಿ ಬಂದಳು. ರಾತ್ರಿ ದೀಪ ಮಾತಾಡಿತು – “ಎಲ್ಲಾರು ಬಂದು ಹೋದರು. ನಾನೂಬಿ ಯಾವಾಗ ಹೋಗಲಿ” ಎಂದು ಕೇಳೇ ಕೇಳಿತು. ತಂಗಿ ತನ್ನ ತಾಪ ಎಲ್ಲ ದೀಪದ ಮುಂದೆ ಒಡೆದು ಹೇಳಿದೆಳು.- “ನನ್ನ ಮಕ್ಕಳು ಮರಿ ಬಹಾಳ ವನವಾಸ ಕಳೆದಾವ. ನನ್ನ ಅತ್ತಿಗಿ ಬಿಲ್ಲಿರೊಟ್ಟಿ ಕೊಟ್ಟಾಳ. ಕುಳ್ಳಿನ ಬುತ್ತಿ ಕಟ್ಯಾಳ. ನೀನೇ ನನ್ನ ಸಾಥೀ. ನೀ ಬಿಟ್ಟುಹೋದರ ನಾ ಹ್ಯಾಂಗ್ ಇರಲಿ ?”
ಇಕಡಿ ಅತಿಗಿ ಮನೇಗಿ ಹೋಗಿ ಗಂಡಗಹೇಳ್ತಾಳ – “ನಿನ್ನ ತಂಗಿಯ ಗುಣಾನೇ ಚಂದಿಲ್ಲ. ಅಕಾ ಅವಳ ಸೀರೇನು, ಅವಳ ಥಾಟೇನು. ಹೆಂಗೋ ಏನೋ…” ಕೊಡಲಿ ತಗೊಂಡು ತಂಗೀಗಿ ಕಡಿಲಿಕ್ಕೆ ಹೊಂಟಾನ. ತಂಗಿ ಜ್ಯೋತಿ ಸುತ್ತ ಮಾತಾಡಿದ್ದು ಕೇಳಿಸಗೋತಾನ. ದೇವರಽ ನೀನೇ ಕಾಯಿ – ಎಂದು ದೇವರ ಮುಂದೆ ಅಡ್ಡಿ ಬೀಳೂದು ನೋಡ್ತಾನ. ಮನಸಿನಾಗ ಅಂತಾನ
“ನನ್ನ ತಂಗಿ ತಾಪ ನನಗ ಇಂದ ಖುನ ಆಯ್ತ. ಎಲಾ ಇವಳ ನನ್ನ ಖಾಸಾ ಒಡಹುಟ್ಟದ ತಂಗೀಗಿ ಮೂಲ್ಯಾಗೀನ ದಾಣಿ ಉಣಿಸಿದಳಲ್ಲಾ.”
ತಂಗೀ ಮುಂದೆ ಅಣ್ಣ ಬಂದು – “ನಂದುಕಡೆ ತಪ್ಪಾತು. ಕ್ಷಮಾ ಇರಲಿ” ಎಂದನು ತಂಗಿಗೆ.
ಅಣ್ಣನಿಗೆ ತಂಗಿ ಶಾವಿಗಿ, ಬಾನಾ ಮಾಡಿ ನೀಡಿದಳು.
ತನ್ನ ಮನೆಗೆ ಹೋಗಿ ಇಂಥಾ ಕೆಟ್ಟ ಇಚಾರ ಮಾಡಿದ್ದಕ್ಕೆ ಹೆಂಡತಿಗಿ ಅದೇ ಕೊಡಲಿಯಿಂದ ಕಡೆದು ಹಾಕಿದ.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು