ರಾಜನಿಗೆ ನಾಲ್ವರು ಹೆಣ್ಣುಮಕ್ಕಳು. ನಾಲ್ವರನ್ನೂ ಸಾಲೆಗೆ ಹಾಕಿದರು. ದೊಡ್ಡವರಾದಮೇಲೆ ಲಗ್ನಮಾಡಿಕೊಳ್ಳಲು ಅಣಿಗೊಳಿಸಿದರು. ಅವರಲ್ಲಿ ಮೂವರು, ತಾವು ಎಂಥವರನ್ನು ಲಗ್ನವಾಗಬೇಕು ಅನ್ನುವುದನ್ನು ಹೇಳಿದರು. ಆದರೆ ಸಣ್ಣಾಕೆ ಮಾತ್ರ – ನೀ ಹೇಳಿದವರಿಗೆ ಲಗ್ನವಾಗುತ್ತೇನೆ – ಎಂದು ಹೇಳಿಬಿಟ್ಟಳು. ಹಾದಿಗೆ ಹಂದರ ಹಾಕಿ, ಬೀದಿಗೆ ಛಳಿಕೊಟ್ಟು ಮೊದಲಿನ ಮೂವರಿಗೂ ಲಗ್ನ ಮಾಡಿಕೊಟ್ಟರು. ಆದರೆ ನಾಲ್ಕೂ ಮಂದಿ ಹೆಣ್ಣುಮಕ್ಕಳಿಗೂ ಒಂದೊಂದು ಮನೆ ಕಟ್ಟಿಸಿಕೊಟ್ಟರು. ಕಿರಿಯವಳ ಲಗ್ನ ಮಾತ್ರ ಉಳಿಯಿತು.
ಕಲಬುರ್ಗಿ ಜಾತ್ರೆಗೆ ಹೊರಟ ರಾಜನು, ಹೆಣ್ಣುಮಕ್ಕಳಿಗೆ ಜಾತ್ರೆಯಿಂದ ಏನೇನು ಸಾಮಾನು ತರಬೇಕು ಎಂದು ಕೇಳಿದನು. ಗೊಂಬಿ, ತೊಟ್ಟಲು, ಮಿಠಾಯಿ ತರಲಿಕ್ಕೆ ಅವರು ಹೇಳಿದರು. ಸಣ್ಣವಳು ಸಬರು (ತಾಳು) ತಾ ಎಂದು ಹೇಳಿದಳು.
ಜಾತ್ರೆಯಲ್ಲಿ ತಿರುಗಾಡಿ ನೋಡಲು ಎಲ್ಲ ಸಾಮಾನು ಸಿಕ್ಕವು. ಸಬರು ಮಾತ್ರ ಸಿಗಲೇ ಇಲ್ಲ. ತಿರುಗಿ ಬರುವಾಗ ಹಾದಿಯಲ್ಲಿ ಒಬ್ಬನು, ಚಿಪ್ಪಾಟಿಯಿಂದ ಸಿಬರು ತೆಗೆದು ಬೆಂಡಿನ ತೊಟ್ಟಿಲು ಮಾಡಿದ್ದನ್ನು ನೋಡಿದ ರಾಜನು ಸಬರು ಸಿಗಲೇ ಇಲ್ಲ ಎಂದಾಗ ತೊಟ್ಟಿಲು ಮಾಡಿದವನು ತನ್ನ ತೊಟ್ಟಿಲು ತೋರಿಸಿ, ಇದೇ ಸಬರಿನ ತೊಟ್ಟಿಲು ಎಂದು ಹೇಳಿದನು. ಮಕ್ಕಳಿಗೆ ಅರಳು, ಪುರಾಣಿ, ಮಿಠಾಯಿಕೊಟ್ಟು ರಾಜನು ಸಣ್ಣಾಕೆಗೆ, ಸಬರಿನ ತೊಟ್ಟಿಲೆಂದು ಹೇಳಿ ಬೆಂಡಿನ ತೊಟ್ಟಲು ಕೊಟ್ಟನು.
ಆಕೆ ನೀರಿನ ಹೌದಿನಲ್ಲಿ ಬೆಂಡಿನ ತೊಟ್ಟಿಲ ಬಿಡಲು ಕೂಡಲೇ, ತೊಟ್ಟಿಲ ಮಾಡಿದ ಹುಡುಗನು ಬಚ್ಚಲಲ್ಲಿ ಬಂದು ನಿಂತನು. ಅವರಿಬ್ಬರೂ ಮಾತಾಡಿಕೊಂಡರು. ತೊಟ್ಟಿಲನ್ನು ನೀರಲ್ಲಿಟ್ಟಾಗೊಮ್ಮೆ ಆ ಹುಡುಗ ಬರತೊಡಗಿದನು. ನೀರೊಳಗಿಂದ ತೊಟ್ಟಿಲು ತೆಗೆಯುತ್ತಲೇ ಅವನು ತನ್ನ ಮನೆಗೆ ಹೋಗುತ್ತಿದ್ದನು. ಹೀಗೆ ನಾಲ್ಕೊಪ್ಪತ್ತು ದಿನ ನಡೆಯಿತು.
ನಾವೆಲ್ಲ ಸರಿಯಾಗಿದ್ದೇವೆ. ತಂಗಿ ಹೇಗಿದ್ದಾಳೋ ನೋಡಿಕೊಂಡು ಬರಬೇಕೆಂದು ಅಕ್ಕಂದಿರೆಲ್ಲ ಮನೆಗೆ ಬಂದರು. “ತಂಗ್ಯಾ ತಂಗ್ಯಾ, ಬಾಗಿಲತೆಗೆ” ಎಂದರು. ತಂಗಿ ಬಾಗಿಲು ತೆಗೆದು ಅವರನ್ನು ಒಳಗೆ ಕರಕೊಂಡು ಹೋದಳು. ಊಟ ಉಪಚಾರ ಮಾಡಿದಳು. ಸುತ್ತಲೆಲ್ಲ ತಿರುಗಾಡಿ ನೋಡಿ, ಉಣ್ಣಲಿಕ್ಕೆ ತಿನ್ನಲಿಕ್ಕೆ ಏನಿದೆ ಇಲ್ಲಿ? ಶಿವನ ಮನೆ! ಅವರಿಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ಅದನ್ನು ತೋರಗೊಡದೆ ಅಕ್ಕಗಳೆಲ್ಲ ಹೋಗಿಬಿಟ್ಟರು.
ಮತ್ತೆ ನಾಲ್ಕು ದಿನ ಬಿಟ್ಟು ಬಂದರು. `ಅವ್ವ ! ಎಂದಿಲ್ಲದ ಅಕ್ಕಗಳು ಬಂದಿದ್ದಾರೆಂದು’ ಹೇಳಿ ಮಂಚದ ಮೇಲೆ ಕುಳ್ಳರಿಸಿದಳು. ಸವತೀಬೀಜ ಹುಗ್ಗಿ ಮಾಡಿದಳು. ಅಕ್ಕಗಳು ಬರುವಾಗ ಬಳೆಚೂರು ಕಲೆಸಿ ಕಾಗದ ಚೂರಿನಲ್ಲಿ ಕಟ್ಟಿಕೊಂಡು ಬಂದಿದ್ದರು. ತ೦ಗಿ ಅಡಿಗೆ ಮನೆಯಲ್ಲಿ ಹೋದಕೂಡಲೇ ಗಾದಿಯಮೇಲೆಲ್ಲ ಖುಸಾಳಿಮುಳ್ಳು ಹರಹಿಬಿಟ್ಟರು. ಊಟವಾದ ಮೇಲೆ ತಂತಮ್ಮ ಮನೆಗೆ ಹೋದರು.
ಅಕ್ಕಗಳು ಹೋದ ಬಳಿಕ ತಂಗಿ ತೊಟ್ಟಿಲನ್ನು ನೀರಲ್ಲಿ ಒಗೆದಳು. ಸಬರ ಕೊಟ್ಟ ಹುಡುಗನು ತಟ್ಟನೆ ಬಂದನು. ಸವತಿಬೀಜ ಹುಗ್ಗಿಯನ್ನು ಉಣಿಸಲು ಆತನನ್ನು ಬರಮಾಡಿಕೊಂಡಿದ್ದಳು. ಪಲ್ಲಂಗದ ಗಾದಿಯ ಮೇಲೆ ಆತನು ಕೂಡುತ್ತಲೆ – “ನನ್ನನ್ನು ಕೊಂದಿ” ಎಂದು ಆಕ್ರೋಶಿಸಿದನು. ಜಲ್ದಿ ತೊಟ್ಟಿಲ ತೆಗೆ. ನಾ ಹೋಗತೀನಿ ಎಂದು ಚೀರಾಡಿದನು. ಆಕೆ ನೀರೊಳಗಿಂದ ತೊಟ್ಟಿಲು ತೆಗೆದಳು. ಅವನು ಹೋಗಿಬಿಟ್ಟನು.
ಬಂದು ನೋಡಿದರೆ ಗಾದಿಯ ಮೇಲೆಲ್ಲ ಬಳೆಚೂರು ಬಿದ್ದಿವೆ; ಖುಸಾಳಿಮುಳ್ಳು ಬಿದ್ದಿವೆ. ಅವನ್ನು ನೋಡಿ ಆಕೆಯ ಮನದಲ್ಲಿ ತಳಮಳವಾಯಿತು.
ತನ್ನ ಮನೆಗೆ ಹೋದ ಆ ಹುಡುಗನು ಬೊಬ್ಬೆಯಿಟ್ಟನು. ಮೈಯೆಲ್ಲ ಉರಿ ಹಚ್ಚಿದಂತೆ ಬೇನೆ ಆಯಿತು. ಯಾವ ಔಷಧಿ ಕೊಟ್ಟರೂ ಬೇನೆ ಕಡಿಮೆ ಆಗಲಿಲ್ಲ.
ಭಿಕ್ಷುಕ ವೇಷ ಹಾಕಿಕೊಂಡು ಕಿರಿಯಮಗಳು ಹೊರಟಳು. ಹಾದಿಯಲ್ಲಿ ನಂದ್ಯಾಲಗಿಡದ ಕೆಳಗೆ ಅಡ್ಡಾದಳು. ನೆಲಕ್ಕೆ ಮೈ ಹತ್ತುವಷ್ಟರಲ್ಲಿ ಆಕೆಯ ಕಿವಿಯಲ್ಲಿ ಒಂದು ಮಾತು ಬಿತ್ತು – “ನಮ್ಮ ಹೇಲು ಕುದಿಸಿ ಮೈಯೆಲ್ಲ ಹಚ್ಚಿದರೆ ಮುಳ್ಳುಕಾಜು ಉದುರಿ ಹೋಗುತ್ತವೆ”. ಗಂಡುಹೆಣ್ಣು ಗರುಡಪಕ್ಷಿಗಳು ತಂತಮ್ಮೊಳಗೆ ಮಾತಾಡುತ್ತಿದ್ದವು. ಗಿಡದ ಕೆಳಗೆ ಬಿದ್ದ ಗರುಡಪಕ್ಷಿಗಳ ಹೇಲನ್ನು ಜೋಳಿಗೆಯಲ್ಲಿ ಹಾಕಿಕೊಂಡು ಆ ಹುಡುಗನ ಮನೆಗೆ ಹೋದಳು. ಅಲ್ಲಿ ಹುಡುಗನು ಹಾಸಿಗೆಯಲ್ಲಿ ಹೊರಳಾಡುತ್ತಿದ್ದನು; ಬೋರಾಡಿ ನರಳುತ್ತಿದ್ದನು. “ಈ ಬೇನೆಯನ್ನು ನಾನು ನೆಟ್ಟಗೆ ಮಾಡತೀನಿ” ಎಂದು ಭಿಕ್ಷುಕಿ ಹೇಳಿದರೂ, ಯಾರೂ ಕಿವಿಮೇಲೆ ಹಾಕಿಕೊಳ್ಳಲಿಲ್ಲ. ಬಹಳ ಹೇಳಿಕೊಂಡ ಮೇಲೆ `ನೀ ಏನು ಮಾಡುತ್ತೀ’ ಎಂದು ಕೇಳಿದರು. “ನನಗೊಂದು ಔಷಧಿ ಗೊತ್ತಿದೆ” ಎನ್ನಲು ಆಕೆಯನ್ನು ಒಳಗೆ ಬಿಟ್ಟರು.
ಮೂರುಕಲ್ಲು ಇಟ್ಟು, ಮೇಲೊಂದು ಬೋಕಿಯಿಕ್ಕಿ ಒಲೆ ಹೂಡಿ ಹೇಲು ಕುದಿಸಿದಳು. ಆ ಬೂದಿ ತೆಗೆದುಕೊಂಡು ಆ ಹುಡುಗನ ಮೈಗೆಲ್ಲ ಒರೆಸಿದಳು. ಕಾಜು, ಮುಳ್ಳು ಎಲ್ಲ ಉದುರಿ ಬಿದ್ದವು. ಹುಡುಗನಿಗೆ ಸಂತೋಷವಾಗಿ ಮೈಮೇಲಿನ ಶಾಲು ಹಾಗೂ ಮುದ್ರೆಯುಂಗುರ ತೆಗೆದುಕೊಟ್ಟನು. ಆಕೆ ಅವುಗಳನ್ನು ತೆಗೆದುಕೊಂಡು ನೆಟ್ಟಗೆ ಮನೆಗೆ ಬಂದಳು.
ಮನೆಗೆ ಬಂದವಳೇ ಹಿಟ್ಟುನಾದಿ ಕಣಕಮಾಡಿ, ಅದರಿಂದ ಮಾಡಿದ ಮೂರ್ತಿಗೆ ಸೀರೆಯುಡಿಸಿ ವಸ್ತ್ರ ತೊಡಿಸಿ, ಪಡಸಾಲೆಯಲ್ಲಿ ಕುಳ್ಳಿರಿಸಿದಳು. ಬಚ್ಚಲಿಗೆ ಹೋಗಿ ಸಬರದ ತೊಟ್ಟಿಲು ಬಿಟ್ಟಳು. ಹುಡುಗನು ಸಿಟ್ಟಿನಲ್ಲಿಯೇ ಬಂದನು. ಮತ್ತೇಕೆ ಈಕೆ ನನ್ನನ್ನು ಕರೆದಳು – ಅನ್ನುತ್ತ, ಪಡಸಾಲೆಯಲ್ಲಿ ಆಕೆಯೇ ಕುಳಿತಿದ್ದಾಳೆಂದು ಮೂರ್ತಿಗೆ ತಲವಾರದಿಂದ ಹೊಡೆಯುತ್ತಾನೆ. ಕಣಕದಲ್ಲಿರುವ ಬೆಲ್ಲದ ಪಾಕವೆಲ್ಲ ಸೋರಾಡುತ್ತದೆ. ಆಗ ಸಣ್ಣಾಕೆ ಶಾಲು ಉಂಗುರ ತೆಗೆದುಕೊಂಡು ಪಡಸಾಲೆಗೆ ಬರುತ್ತಾಳೆ.
“ಇವೆಲ್ಲಿಂದ ಬಂದವು” ಎಂದು ಹುಡುಗನು ಕೇಳಲು, “ನಾನೇ ಭಿಕ್ಷುಕಳಾಗಿ ಬಂದಿದ್ದು; ನಾನೇ ನಿನ್ನನ್ನು ಗುಣಪಡಿಸಿದ್ದು. ನಮ್ಮ ಅಕ್ಕಗಳು ಮಾಡಿದ ಫಲವನ್ನು ನಾನೇ ಭೋಗಿಸಬೇಕಾಯಿತು” ಎ೦ದು ಹೇಳಿದಳು. ಆಗ ಆತನಿಗೆ ಸಮಾಧಾನವಾಯ್ತು.
ಆ ಬಳಿಕ ಆಕೆ ನಿಚ್ಚ ಸಬರದ ತೊಟ್ಟಿಲು ನೀರಲ್ಲಿ ಬಿಡುವಳು; ನಿಚ್ಚ ಆ ಯುವಕ ಬರುವನು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು