ಅತ್ತೆಯ ಗೊಂಬೆ

ಒಂದೂರಲ್ಲಿ ತಾಯಿಮಗ ಇದ್ದರು. ಮಗನು ದೊಡ್ಡವನಾದ ಬಳಿಕ ಹತ್ತಗಡೆಯವರಲ್ಲಿಯ ಹೆಣ್ಣು ತಂದು ಆತನ ಮದುವೆಮಾಡಿದಳು.

ಗಂಡನ ಮನೆಗೆ ಬಂದ ಬಳಿಕ ಸೊಸೆಯು, ಅತ್ತೆಯ ಸಲಹೆ ಕೇಳದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅಡಿಗೆಮಾಡುವಾಗ ಎಷ್ಟು, ಹೇಗೆ ಎಂದು ಕೇಳುವಳು, ಹಾಗೆ ಕೇಳದಿದ್ದರೆ ಆಕೆಗೆ ಯಾವ ಕೆಲಸವೂ ಬಗೆಹರಿಯುತ್ತಿರಲಿಲ್ಲ. ಹೀಗೆ ಕೆಲವು ವರ್ಷ ಸಾಗುವಷ್ಟರಲ್ಲಿ ಅಕಸ್ಮಾತ್ತಾಗಿ ಅತ್ತೆ ಯಾವುದೋ ಜಡ್ಡಿನಿಂದ ತೀರಿಕೊಂಡಳು.

ಅತ್ತೆಯ ಅಗಲಿಕೆಯಿಂದ ಸೊಸೆಗೆ ತೀರ ಎಡಚಾಯಿತು. ಯಾರನ್ನು ಕೇಳಬೇಕು, ಏನೆಂದು ಕೇಳಬೇಕು?  ಯಾವ ಕೆಲಸವೂ ಸುಗಮವಾಗಿ ಸಾಗದಂತಾಗಲು ಆಕೆ ಗಂಡನಿಗೆ ಹೇಳಿದಳು ತನ್ನ ತೊಂದರೆಯನ್ನು.  ಗಂಡನು ಬಡಿಗನಿಂದ ಕಟ್ಟಿಗೆಯದೊಂದು ದೊಡ್ಡ ಗೊಂಬೆ ಮಾಡಿಸಿ ತಂದು ಹೆಂಡತಿಯ ಮುಂದೆ ಇಳುಹಿಸಿದನು.

ಆ ಗೊಂಬೆಯನ್ನೇ ಅತ್ತೆಯೆಂದು ಬಗೆದು ಪ್ರತಿಯೊಂದು ಕೆಲಸದಲ್ಲಿ ಆಕೆಯ ಸಲಹೆ ಕೇಳತೊಡಗಿದಳು. ಅನ್ನ ಮಾಡಲೋ ರೊಟ್ಟಿ ಮಾಡಲೋ?  ರೊಟ್ಟಿ ಮಾಡುವುದಾದರೆ ಏಸು ಮಾಡಲಿ? ಅದಕ್ಕೆ ಒಣಗಿಮಾಡಲೋ ಹಸಿಗೆ ಮಾಡಲೋ ಹೀಗೆ ಕೇಳುವಳು.

ಸೊಸೆ ಒಮ್ಮೆ ನೆರೆಹಳ್ಳಿಯ ಸಂತೆಗೆ ಹೊರಟು ನಿಂತು . “ಸಂತೆಗೆ ಬರುವಿಯೇನು ಅತ್ತೇ?” ಎಂದು ಕೇಳಿದಳು. ಅದಕ್ಕೆ ಉತ್ತರ ಬರದಿರಲು.  “ನಡೆಯಲಿಕ್ಕಾಗುವುದಿಲ್ಲ. ಏನು ಬರಲಿ ಅನ್ನುವಿಯಾ?  ನಾನು ನಿನ್ನನ್ನು ಬುಟ್ಟಿಯಲ್ಲಿ ಕುಳ್ಳರಿಸಿಕೊಂಡು ಹೋಗುವೆನು ಬರುವೆಯಾ? ಹಾಗಾದರೆ ನಡೆ” ಎಂದು ಬುಟ್ಟಿಯನ್ನು ಹೊತ್ತುಕೊಂಡು ಸಂತೆಯೂರಿಗೆ ಹೋದಳು. ಗೊಂಬೆಯ ಬುಟ್ಟಿಯನ್ನು ಹೊತ್ತುಕೊಂಡು ಸಂತೆಮಾಡಲಿಕ್ಕಾಗದು ಎಂದು ಅದನ್ನು ಹನುಮಂತ ದೇವರ ಗುಡಿಯಲ್ಲಿಳುಹಿ ತಾನು ಸಂತೆಯೊಳಗೆ ಹೋದಳು.  ಹನುಮಂತ ದೇವರ ಗುಡಿಗೆ ಬಂದ ಭಕ್ತರು ಬುಟ್ಟಿಯೊಳಗಿನ ಗೊಂಬೆಯನ್ನು ಕಂಡು, ಇದೂ ಒಂದು ದೇವರೆಂದು ತಾವು ತಂದ ಅಕ್ಕಿ, ಬೇಳೆ ಮುಂತಾದವುಗಳನ್ನು ಅದರ ಮುಂದೆಯೂ ಹಾಕಿ ಹಾಕಿ ಹೋದರು. ಸಂಜೆ ಇಳಿಹೊತ್ತಿಗೆ ಸೊಸೆ ಸಂತೆಮಾಡಿಕೊಂಡು ಗುಡಿಗೆ ಬಂದು ನೋಡುತ್ತಾಳೆ.  ಅಕ್ಕಿ ಬೇಳೆಗಳು ಎರಡೆರಡು ಸೇರಿನಷ್ಟು ಸುರಿದಿವೆ. “ಅಕ್ಕಿ ಬೇಳೆಯ ಸಂತೆ ಮಾಡಿದೆಯಾ ಅತ್ತೇ?” ಎನ್ನುತ್ತ ಅವನ್ನೆಲ್ಲ ಒಂದು ಅರಿವೆಯಲ್ಲಿ ಕಟ್ಟಿಕೊಂಡು, ಅತ್ತೆಗೊಂಬೆಯ ಬುಟ್ಟಿ ಹೊತ್ತು ಊರಹಾದಿ ಹಿಡಿದಳು.

ಮರುದಿನ ಊರಲ್ಲೆಲ್ಲ ಸುದ್ದಿ. ಸತ್ತ ಅತ್ತೆಯಗೊಂಬೆ ಸೊಸೆಗೆ ಅಕ್ಕಿಬೇಳೆಯ ಸಂತೆಮಾಡಿಕೊಟ್ಟಿತಂತೆ. ಆಶ್ಚರ್ಯವಲ್ಲವೇ ?

ಮುಂದಿನ ಸಂತೆಗೂ ಅತ್ತೆಯನ್ನು ಕರೆದೊಯ್ದಳು ಸೊಸೆ. ಸಂತೆಯೊಳಗಿನ ಕೆಲಸ ತೀರಿಸಿಕೊಂಡು ಊರಿಗೆ ಹೊರಡಬೇಕೆನ್ನುವಷ್ಟರಲ್ಲಿ ಹೊತ್ತು ಮುಳುಗಿತು. ಆದ್ದರಿಂದ ಸೊಸೆ ಅಂದಿನ ರಾತ್ರಿಯನ್ನು ಹನುಮಂತದೇವರ ಗುಡಿಯಲ್ಲಿಯೇ ಕಳೆದು, ಬೆಳಗಿಗೆ ತನ್ನೂರಿಗೆ ಹೊರಡಬೇಕೆಂದು ಯೋಚಿಸಿದಳು.

ಸರಿರಾತ್ರಿಯ ಹೊತ್ತಿಗೆ ಊರೊಳಗೆ ಯಾರ ಮನೆಯಲ್ಲಿಯೋ ಕಳವು ಮಾಡಿಕೊಂಡು ನಾಲ್ವರು ಕಳ್ಳರು ದ್ರವ್ಯವನ್ನು ಹಂಚುಪಾಲು ಮಾಡಿಕೊಳ್ಳಬೇಕೆಂದು ಹನುಮಂತದೇವರ ಗುಡಿಯನ್ನು ಹೊಕ್ಕರು. ಆ ಸುಳುಹಿಗೆ ಸೊಸೆ ಎಚ್ಚೆತ್ತು.  “ಅಯ್ಯೋ ಅತ್ತೇ” ಎನ್ನುತ್ತ  ಓಡಿಹೋದಳು. ಕಳ್ಳರು ಮುಂದೆ ಹೋಗಿ ನೋಡುವಷ್ಟರಲ್ಲಿ ಕಟ್ಟಿಗೆಯ ಗೊಂಬೆ. ಇದು ಚೇಡಿಯ ಗೊಂಬೆಯಾದ್ದರಿಂದ ನಮ್ಮ ಕಳ್ಳತನ ಹೊರಗೆಡವುತ್ತದೆ. ಆದ್ದರಿಂದ ಸಮಾಧಾನಪಡಿಸಬೇಕು   ಮೊದಲು ಎಂದು ಅದರ ಮುಂದೆ, ಪ್ರತಿಯೊಬ್ಬರು ಬೊಗಸೆಬೊಗಸೆ ರೂಪಾಯಿ ಸುರಿದು ಓಡಿಹೋದರು.

ತನ್ನತ್ತೆಯನ್ನು ಮರೆತುಹೋದೆನೆಂದು ಅರಿವಾಗಿ ಸೊಸೆ ಹೊರಳಿ ಗುಡಿಗೆ ಬಂದು ನೋಡುತ್ತಾಳೆ. ಅತ್ತೆಯ ಗೊಂಬೆಯ ಮುಂದೆ ರೂಪಾಯಿಗಳ ಡಿಗ್ಗೆ.  ಅವನ್ನೆಲ್ಲ ಜೋಕೆಯಿಂದ ಕಟ್ಟಿಕೊಂಡು ಬೆಳಗು ಮುಂಜಾನೆ ತನ್ನೂರಿಗೆ ಹೊರಟು ಹೋದಳು.

ನಾಲ್ಕಾರು ದಿನ ಕಳೆಯುವಷ್ಟರಲ್ಲಿ ಅತ್ತೆಯ ಗೊಂಬೆಯ ಪುಣ್ಯದಿಂದ ಅವರು ಸ್ಥಿತಿವಂತರಾದರೆಂದು ಕೇರಿಯವರಿಗೆಲ್ಲ ಗೊತ್ತಾಯಿತು. ಬಂದುಬಂದು ಕೇಳತೊಡಗಿದರು – ಸತ್ಯಸಂಗತಿ ಏನೆಂದು. ಸೊಸೆಯು ಹೇಳಿಬಿಟ್ಟಳು ಘಟಿಸಿದ ಸಂಗತಿಯನ್ನೆಲ್ಲ.

ಅದನ್ನೆಲ್ಲ ಕೇಳಿಕೊಂಡು ಇನ್ನೊಂದು ಮನೆಯ ಸೊಸೆಯು ತನ್ನ ಗಂಡನಿಗೆ ದುಂಬಾಲಬಿದ್ದು, ಅತ್ತೆಯ ಗೊಂಬೆಯನ್ನು ಮಾಡಿಸಿ ತರಿಸಿದಳು.  ಅಡಿಗೆಮನೆಯಲ್ಲಿರಿಸಿದಳು. ಕ್ಷಣಕ್ಷಣಕ್ಕೂ ಸಲಹೆ ಕೇಳುವಳು. ಕೊನೆಗೆ ಗೊಂಬೆಯನ್ನೆತ್ತಿಕೊಂಡು ನೆರೆಹಳ್ಳಿಯ ಸಂತೆಗೂ. ಹೊರಟಳು. ಸಂತೆಯಲ್ಲಿ ಅಷ್ಟೊಂದು ಕೆಲಸವಿಲ್ಲದಿದ್ದರೂ ಹೊತ್ತು ಮುಳುಗಿಸಿದಳು. ಅಂದಿನ ರಾತ್ರಿ ಅದೇ ಊರಲ್ಲಿ ಕಳೆಯಬೇಕಲ್ಲವೆ?

ಹಾದಿಬಿಟ್ಟು ತುಸು ಒಳಗಿರುವ ಗಿಡವನ್ನೇರಿ ಕುಳಿತು ರಾತ್ರಿ ಕಳೆಯುವದಕ್ಕೆ ನಿಶ್ಚಯಿಸಿದಳು. ಸರಿರಾತ್ರಿಯ ಹೊತ್ತಿಗೆ ಆ ಗಿಡದ ಕೆಳಗೆ ಅದೇ ಕಳ್ಳರು ಬಂದು ತಮ್ಮ ಹಂಚುಪಾಲಿನ ಕೆಲಸದಲ್ಲಿ ತೊಡಗಿದರು. ಅದನ್ನು ಕಂಡು ಗಿಡವೇರಿ ಕುಳಿತವಳ ಕೈಕಾಲು ಥರಥರಿಸತೊಡಗಿದವು. ಕೈಯೊಳಗಿನ ಗೊಂಬೆಯನ್ನು ಬಿಟ್ಟು ಬಿಟ್ಟಳು. ಅದು ಕೆಳಗೆ ಆ ಕಳ್ಳರ ಮುಂದೆಯೇ ಬಿತ್ತು. ಏನೆಂದು ನೋಡುವಷ್ಟರಲ್ಲಿ ಗೊಂಬೆ. ಕಳೆದವಾರವೂ ಇಂಥದೇ ಗೊಂಬೆ ತಮ್ಮನ್ನು ಹೆದರಿಸಿತೆಂದು ನೆನೆಸಿದರು. ಈ ಸಾರೆಯೂ ಗೊಂಬೆ ಬೆನ್ನಹತ್ತಬೇಕೇ ಕೈ ತೊಳಕೊಂಡು ಎನ್ನುತ್ತ, ಅದು ಎಲ್ಲಿಂದ ಬಿತ್ತೆಂದು ಶೋಧಮಾಡಲು ಗಿಡದ ಮೇಲೆ ದೃಷ್ಟಿಹಾಯಿಸುವಷ್ಟರಲ್ಲಿ ಅವರ ಕಣ್ಣಿಗೆ ಒಬ್ಬ ಹೆಂಗಸು ಕಾಣಿಸಿದಳು. “ಮರ್ಯದೆಯಿಂದ ಕೆಳಗಿಳಿದು ಬಾ” ಎಂದು ಹೇಳಲು ಆಕೆ ನಡುಗುತ್ತ ಗಿಡದಿಂದ ಕೆಳಗಿಳಿದು ಬಂದಳು. ಕಳ್ಳರು ಆಕೆಯ ಬಳಿಯಲ್ಲಿರುವ ಸಂತೆಯ ಗಂಟುಗಳನ್ನೆಲ್ಲ ಕಸುಗೊಂಡು, ಗೆಬ್ಬೆಗೆರಡು ಏಟುಕೊಟ್ಟು “ಹೋಗಿನ್ನು” ಎಂದರು.

ಆಕೆ ತಾನು ಆಶೆಪಟ್ಟು ಮಾಡಿದ ತಗಲು ಪರಾಮರಿಕೆಗಾಗಿ ಪಶ್ಚಾತ್ತಾಪಪಟ್ಟು ಗಲ್ಲಗಲ್ಲ ಬಡಿದುಕೊಳ್ಳುತ್ತ ತನ್ನೂರಿಗೆ ಹೋಗಿ ಯಾವ ಸುದ್ದಿಯನ್ನೂ ಹೊರಹಾಕದೆ ಮಿಡುಕುತ್ತ ಕುಳಿತಳು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೪೦
Next post ಐಸುರ ಮೊದಲೋ ಮೋರುಮ ಮೊದಲೋ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…