ಒಂದೂರಲ್ಲಿ ಒಬ್ಬ ರಾಜ, ಒಬ್ಬ ಪ್ರಧಾನಿ, ಒಬ್ಬ ಸಾಹುಕಾರ ಇದ್ದರು. ಆ ಮೂವರಿಗೂ ಒಬ್ಬೊಬ್ಬರಂತೆ ಗಂಡಸು ಮಕ್ಕಳಿದ್ದರು. ಅವರೆಲ್ಲರೂ ಸಾಲೆ ಬರೆಯುತ್ತಿದ್ದರು. ಮುಂದೆ ದೊಡ್ಡವರಾದರು. “ಬೇಟೆಗಾಗಿ ಎಕ್ಕೀಹಳ್ಳಿಗೆ ಹೋಗಾರಿ” ಎಂದು ಮೂವರೂ ನಿಶ್ಚಯಿಸಿದರು. ಅಷ್ಟರಲ್ಲಿ ಅವರ ತಾಯಿತಂದೆಗಳು ಅವರ ಲಗ್ನ ಮಾಡಲು ತಯಾರಿ ನಡೆಸಿದರು. ಅದರಂತೆ ಒಳ್ಳೆಯ ಮುಹೂರ್ತದಲ್ಲಿ ಲಗ್ನವನ್ನೂ ಮಾಡಿಹಾಕಿದರು. ಅವರು ಬೇಟೆಗೆ ಹೋಗಲು ಗಡಬಿಡಿ ಮಾಡುತ್ತಿರಲು, ಶೋಭಾನ ಮಾಡಿಕೊಂಡುಹೋಗಿರಿ – ಎಂದು ಹೇಳಿದರು. ಅದರಂತೆ ಶೋಭನ ಕಾರ್ಯ ಮುಗಿಸಿಕೊಂಡು ಬೇಟೆಯಾಡಲು ಹೋದರು.
ಮುಂದೆ ಒಂಬತ್ತು ತಿಂಗಳಿಗೆ ಅವರ ಹೆಂಡಂದಿರು ಕೂಸುಗಳಿಗೆ ಜನ್ಮವಿತ್ತರು. ರಾಜ ಮತ್ತು ಪ್ರಧಾನಿಗಳಿಗೆ ಗಂಡು ಕೂಸುಗಳು ಹುಟ್ಟಿದವೆಂದೂ ಸಾಹುಕಾರನಿಗೆ ಹೆಣ್ಣು ಕೂಸು ಹುಟ್ಟಿತೆಂದೂ ಪತ್ರಬಂತು. ಹೆಣ್ಣು ಹುಟ್ಟಿತೆಂದು ಸಾಹುಕಾರನಿಗೆ ಸ್ವಲ್ಪ ಅಸಮಾಧಾನ. ಅದಕ್ಕೇಕೆ ಅಷ್ಟು ಗಿಲಿಗಿಲಿ ಆಗುತ್ತೀ ಎಂದು ರಾಜ ಮತ್ತು ಪ್ರಧಾನಿ ಸಾಹುಕಾರನಿಗೆ ಹ೦ಗಿಸಿದರು. ತೊಟ್ಟಿಲಿಕ್ಕುವ ಸಲುವಾಗಿ ಮೂವರೂ ಮನೆಗೆ ಬಂದು ಮತ್ತೆ ಬೇಟೆಗೆ ಹೋದರು- ವರ್ಷಗಳು ಉರುಳಿದವು.
ಮಕ್ಕಳು ದೊಡ್ಡವರಾದರು. ಆಗ ಅವರು ಊರಿಗೆ ಮರಳಿದರು. ಸಾಹುಕಾರನ ಮಗಳ ಹೆಸರು ಮೈನಾವತಿ- ಅವಳು ಮದುವೆಯ ವಯಸ್ಸಿಗೆ ಬಂದಿದ್ದಾಳೆ. ವರಗಳು ಹೆಣ್ಣು ಕೇಳಲು ಬಂದವು. ಅಷ್ಟರಲ್ಲಿ ರಾಜನಮಗ ಹಾಗೂ ಪ್ರಧಾನಿಯ ಮಗ – “ನಾವು ಇನ್ನೂ ಎಷ್ಟುದಿನ ಸಾಲೀ ಬರೀಬೇಕು” ಎಂದು ತಕರಾರು ಮಾಡಿದರು. ರಾಜನ ಮಗನು ಮೈನಾವತಿಯೊಡನೆ ಲಗ್ನವಾಗಬೇಕೆಂದು ಮಾಡಿದ್ದನು. ಆದರೆ ಅವಳ ಲಗ್ನ ಮತ್ತೊಬ್ಬನಕೂಡ ಆಗಿಹೋಯಿತು.
ಮೈನಾವತಿಯನ್ನು ಕರೆಯಲು ಅವರ ಮಾವ ಬಂದನು.
ಒಬ್ಬ ಆಳುಮನುಷ್ಯನು, ರಾಜನ ಮಗನು ಕಳಿಸಿದ ಚೀಟಿಯನ್ನು ಸಾಹುಕಾರನ ಮನೆ ಬಾಗಿಲಿಗೆ ಅಂಟಿಸಿ ಹೋಗುತ್ತಾನೆ.
ಮೈನಾವತಿ ಊರಿಗೆ ಹೋಗುವಾಗ ಆ ಚೀಟಿ ಅವಳ ಕೈಗೆ ಸಿಗುತ್ತದೆ. ತನ್ನ ಮನೆಬಾಗಿಲಿಗೆ ಅವಳೊಂದು ಚೀಟಿ ಅಂಟಿಸಿ ಅತ್ತೆ ಮಾವರ ಮನೆಗೆ ಹೋದಳು.
“ನನ್ನೂರಿಗೆ ನೀವು ಬರಬೇಕು”, ಎಂದು ಆಕೆ ಚೀಟಿಯಲ್ಲಿ ಬರೆದ ಪ್ರಕಾರ, ರಾಜನ ಮಗ ಹಾಗೂ ಪ್ರಧಾನಿಯ ಮಗ ಮೈನಾವತಿಯ ಗಂಡನೂರಿಗೆ ಹೋಗಿ ಅಲ್ಲಿ ಹೂಗಾರ ಮುದುಕಿಯ ಮನೆಗೆ ಹೋಗುತ್ತಾರೆ. ಅಲ್ಲಿ ರಾತ್ರಿ ಮಲಗಲು ಮಾಡುತ್ತಾರೆ. ಅಕ್ಕಿ ತಂದುಕೊಟ್ಟರೆ ಬೋನ ಮಾಡಿಕೊಡುವೆ ಎಂದಳು ಆ ಮುದುಕಿ. ಅಕ್ಕಿ ತರುವುದಕ್ಕೆ ಬುಟ್ಟಿ ಕೇಳಿದರೆ ಆ ಮುದುಕಿ ನೇರವಾಗಿ ಮೈನಾವತಿಯ ಮನೆಗೆ ಹೋಗಿ ಒಂದು ಬುಟ್ಟಿ ಬೇಡುತ್ತಾಳೆ- ಮೈನಾವತಿ ಬುಟ್ಟಿಗೆ ಜಾಜಾ ಹಚ್ಚಿಕೊಡುತ್ತಾಳೆ- ಅಕ್ಕಿ ಕೊಳ್ಳುವುದಕ್ಕೆ ರಾಜನ ಮಗನು ಅಂಗಡಿಗೆ ಹೋದಾಗ ಆತನಿಗೆ ಒಂದು ಚೀಟಿ ಸಿಗುತ್ತದೆ –
“ಈ ಹೊತ್ತಿನ ದಿವಸ ಶಂಭುಮಹಾದೇವನ ಗುಡಿಗೆ ಬರುತ್ತೇನೆ – ನೀವೂ ಅಲ್ಲಿಗೆ ಬರಬೇಕು” ಎಂದು ಮೈನಾವತಿ ಬರೆದಿದ್ದಳು.
ಅಕ್ಕಿ ತೆಗೆದುಕೊಂಡು ಸೈರ ಮನೆಗೆ ಬಂದರು.
ಹೊತ್ತು ಮುಳುಗುವ ಸಮಯಕ್ಕೆ ರಾಜನ ಮಗನು ಮಹಾದೇವನ ಗುಡಿಗೆ ಹೋಗುತ್ತಾನೆ. ಜರದ ಸೀರೆಯುಟ್ಟು ಕೈಯಲ್ಲಿ ಆರತಿ ಹಿಡಕೊಂಡು ಮೈನಾವತಿ ಗುಡಿಗೆ ಹೋಗುತ್ತಾಳೆ- ಅವಳು ಹೋಗುವುದನ್ನು ನೋಡಿದ ಓಲೆಕಾರನೊಬ್ಬನು ಅವಳ ಬೆನ್ನ ಹಿಂದೆ ತಾನೂ ಗುಡಿಗೆ ಹೋಗುತ್ತಾನೆ. ರಾಜನ ಮಗನೂ ಗುಡಿಯೊಳಕ್ಕೆ ಹೋಗುವುದನ್ನು ಕಂಡ ಓಲೆಕಾರನು – ಹೆಂಗಸೊಬ್ಬಳು ಗಂಡಸರಿದ್ದ ಗುಡಿಯೊಳಕ್ಕೆ ಹೋಗಿದ್ದಾಳೆಂದು ಬೊಬ್ಬಾಟ ಮಾಡುತ್ತಾನೆ. ಗಸ್ತಿಯಾಳುಗಳು ನಾಲ್ವರು ಅಲ್ಲಿ ಕಾವಲು ಕುಳಿತುಕೊಳ್ಳುತ್ತಾರೆ.
ಅದೆಷ್ಟು ಹೊತ್ತಾದರೂ ಮೈನಾವತಿ ಹೊರಗೆ ಬರಲಿಲ್ಲ. ಗಸ್ತಿಯಾಳುಗಳೆಲ್ಲ ತಿರುಗಿ ಹೋದರು.
“ಹೂವಿನ ಬನದಾಗ ಸೈರೇ ದನ ಬಂದಾದ. ಅದನ್ನು ಬಿಡಿಸಿಕೊಂಡು ಬಾ” ಎಂದು ಪ್ರಧಾನಿಯ ಮಗ ಹೂಗಾರ ಮುದುಕಿಗೆ ಬೆನ್ನು ಬೀಳುತ್ತಾನೆ. ಮುದುಕಿ ಹೊರಗೆ ಹೋದಕೂಡಲೇ ಪ್ರಧಾನಿಯ ಮಗನು ಅವಳದೊಂದು ಸೀರೆ ಉಟ್ಟುಕೊಂಡು ಗುಡಿಗೆ ಹೋಗುತ್ತಾನೆ. ಅಲ್ಲಿ ಕುಳಿತವರು ಅವನನ್ನು ಒಳಗೆ ಬಿಡುವುದಿಲ್ಲ.
“ಪೂಜೆಮಾಡಿ ಐದು ತಿಂಗಳಾದವು. ದೇವರಿಗೆ ಹರಕೆ ಹೊತ್ತಿದ್ದೇನೆ. ನನ್ನನ್ನು ಒಳಗೆ ಬಿಡಿರಿ”, ಎಂದು ದುಂಬಾಲ ಬೀಳುತ್ತಾನೆ- ಆದ್ದರಿಂದ ಒಳಗೆ
ಹೋಗಲು ಅಪ್ಪಣೆ ಸಿಕ್ಕಿತು.
ರಾಜನ ಮಗ ಒಳಗೆ ಕುಳಿತಿದ್ದನು. ಈಗ ಪ್ರಧಾನಿಯ ಮಗನೂ ಒಳಗೆ ಹೋಗಿ ಅವನಿಗೆ ಜತೆಯಾದನು. ಪ್ರಧಾನಿಯ ಮಗನು ಉಟ್ಟುಕೊಂಡ ಸೀರೆಯನ್ನೇ ತಾನುಟ್ಟುಕೊಂಡು ಮೈನಾವತಿ ಅಲ್ಲಿಂದ ಹೊರಬಿದ್ದಳು. ಅವರಿಬ್ಬರೂ ಜೊತೆಗಾರರು ಗುಡಿಯಲ್ಲಿ ಸ್ವಸ್ಥವಾಗಿ ನಿದ್ದೆ ಮಾಡಿದರು.
ಬೆಳಗಾಗುತ್ತಲೆ ಅವರೆದ್ದು ಹೊರಹೊರಟರು. ಓಲೆಕಾರ ಹಾಗೂ ಉಳಿದಜನ ಅವರನ್ನು ಕಣ್ಣುತೆರೆದು ನೋಡಿದರು. ಒಳಗೆ ಹೋಗಿ ತಪಾಸು ಮಾಡಿದರೆ ಅಲ್ಲಿ ಯಾವ ಹೆಣ್ಣುಮಗಳೂ ಇರಲಿಲ್ಲ. ಎಲ್ಲರೂ ಓಲೆಕಾರನಿಗೆ ಸಿಟ್ಟುಮಾಡಿ ಹೋಗಿಬಿಟ್ಟರು. .
ಆ ಉಭಯಕುಮಾರರು ಹೂಗಾರ ಮುದುಕಿಯ ಮನೆಗೆ ಹೋಗಿ ಜಳಕ ಊಟ ಮುಗಿಸಿ ವಿಶ್ರಾಂತಿ ಮಾಡಿದರು.
ಪ್ರಧಾನಿಯ ಮಗನು ರಾಜನ ಮಗನಿಗೆ ಒಂದು ಒಳ್ಳೆಯ ಸೀರೆ ಉಡಿಸಿ ಮೈನಾವತಿಯ ಗಂಡನಮನೆಗೆ ಕರಕೊಂಡು ಹೋದನು. ಆ ಸಂದರ್ಭದಲ್ಲಿ ಮೈನಾವತಿಯ ಗಂಡನು ಊರಲ್ಲಿರಿಲಿಲ್ಲ. ಮುತ್ತುರತ್ನಗಳ ವ್ಯಾಪಾರಕ್ಕಾಗಿ ದೇಶ ಸಂಚಾರ ಹೋಗಿದ್ದನು- ಪ್ರಧಾನಿಯ ಮಗನು, ಮೈನಾವತಿಯ ಮಾವನಿಗೆ ಹೇಳಿದನು – “ನನ್ನ ಸೊಸೆಯನ್ನು ನಿಮ್ಮ ಮನೆಯಲ್ಲಿ ಬಿಡುತ್ತೇನೆ. ಯಾಕೆಂದರೆ, ನನ್ನ ಸಾಮಾನುಗಳನ್ನೆಲ್ಲ ಕಳ್ಳರು ದೋಚಿಕೊಂಡು ಒಯ್ದಿದ್ದಾರೆ. ಈಗ ಸಹ ಅವರು ನನ್ನ ಬೆನ್ನು ಹತ್ತಿದ್ದಾರೆ. ದಯಮಾಡಿ ಕೆಲದಿನದ ಮಟ್ಟಗೆ ಈಕೆಯನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳಿರಿ.”
ಈ ಪ್ರಕಾರ ವೇಷದ ಸೊಸೆಯನ್ನು ಬಿಟ್ಟುಕೊಟ್ಟು ಪ್ರಧಾನಿಯ ಮಗನು ಹೋಗಿಬಿಡುತ್ತಾನೆ.
ರಾಜನಮಗ ಹಾಗೂ ಮೈನಾವತಿಯರ ಭೇಟಿ ಹೀಗೆ ಆಗುತ್ತದೆ. ಎಂಟು ಹತ್ತು ದಿನಗಳು ಕಳೆದ ಬಳಿಕ ಮೈನಾವತಿಯ ಗಂಡನು, ವ್ಯಾಪಾರ ತೀರಿಸಿಕೊಂಡು ಮನೆಗೆ ಬರುತ್ತಾನೆ. ಮನೆಯಲ್ಲಿರುವ ಹೊಸ ಹೆಣ್ಣು ಮಗಳನ್ನು ಕಂಡು ಅವಳ ಮೇಲೆ ಮನಸ್ಸು ಮಾಡುತ್ತಾನೆ. “ನಿನ್ನದು ಯಾವ ಊರು” ಎಂದು, ಆಕೆಯ ಹತ್ತಿರಕ್ಕೆ ಹೋಗಿ ಕೇಳುತ್ತಾನೆ.
ಹೆಂಡತಿ ನಡುವೆ ಬಾಯಿಹಾಕಿ ಏನೋ ಹೇಳತೊಡಗಲು – “ನೀನು ಸುಮ್ಮನಿರೇ” ಎಂದು ತನ್ನ ಹೆಂಡತಿಯನ್ನು ಬೆದರಿಸುತ್ತಾನೆ.
ಅಂದು ರಾತ್ರಿಯೇ ಮೈನಾವತಿಯ ಗಂಡನು ಸ್ತ್ರೀವೇಷದಲ್ಲಿರುವ ರಾಜ ಕುಮಾರನ ಕೋಣೆಗೆ ಹೋದನು. ಅಲ್ಲಿ ಬನಿಯನ್, ಅಂಡರವೇರ್ ಧರಿಸಿ ಮಲಗಿದ್ದ ರಾಜಕುಮಾರನು ಎಚ್ಚತ್ತವನೇ ಚಾಕುವಿನಿಂದ ಆತನ ಮೂಗನ್ನೇ ಬಿಡಿಸಿದನು- ಮೊದಲೇ ಒಕ್ಕಣ್ಣ, ಈಗ ಮೂಗುಬೇರೆ ಕಳಕೊಂಡು ಅವಲಕ್ಷಣವಾದನು-
ರಾಜಕುಮಾರನು ಸೈರ ಮುದುಕಿಯ ಮನೆಗೆ ತೆರಳಿದನು. ಆಗ ಪ್ರಧಾನಿಯ ಮಗನು ಕುದುರೆ ಹಿಡಕೊಂಡು ಮೈನಾವತಿಯ ಮನೆಗೆ ಹೋಗಿ – “ನನ್ನ ಸೊಸೆಯನ್ನು ಕಳಿಸಿರಿ” ಎಂದು ಕೇಳುತ್ತಾನೆ. “ನಿನ್ನ ಮಗನೇ ಕರಕೊಂಡು ಹೋಗಿದ್ದಾನೆ” ಎಂದು ಮೈನಾವತಿಯ ಮಾವನು ಮರುನುಡಿಯುತ್ತಾನೆ.
“ಸೊಸೆಯನ್ನು ತಂದಿಟ್ಟರೆ ಹೀಗೆ ಮಾಡಬೇಕೆ ? ನನ್ನ ಸೊಸೆಯಿಲ್ಲದಿದ್ದರೆ ನಿನ್ನ ಸೊಸೆಯನ್ನು ಕಳಿಸಿಕೊಡಿರಿ. ಯಾರಿಗೆ ಹೇಳುವಿರಿ” ಎಂದು ಮೈನಾವತಿಯನ್ನು ಬಲವಂತದಿಂದ ಕರಕೊಂಡು ಹೋದನು.
ರಾಜಕುಮಾರನು ಮೈನಾವತಿಯ ಸಂಗಡ ಲಗ್ನ ಮಾಡಿಕೊಂಡನು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು