ಮೂಲ: ವಿಲಿಯಂ ಬಟ್ಲರ್ ಏಟ್ಸ್
ದಾರಿಯಲ್ಲಿ ಎದುರಾದರು ಪಾದ್ರಿ
ಮಾತ ಮಧ್ಯೆ ಎಚ್ಚರಿಸಿದರು.
‘ಚಪ್ಪಟೆ ಮೊಲೆಗಳು ಜೋತಿವೆ ಕೆಳಗೆ,
ಬತ್ತಿ ಹೋಗುತಿವೆ ನಾಳಗಳು;
ವಾಸಿಸು ಹೆಣ್ಣೆ ದೇವಸೌಧದಲಿ,
ತಕ್ಕುವಲ್ಲ ಕೊಳೆರೊಪ್ಪಗಳು’.
ಕೂಗಿ ಹೇಳಿದೆನು ಪಾದ್ರಿಗೆ ನಾನು
‘ಸೊಗಸಿಗು ಹೊಲಸಿಗು ನಂಟು ಇದೆ
ಬೇಕೇ ಬೇಕು ಸೊಗಸಿಗೆ ಹೊಲಸು.
ಗೆಳೆಯರಿಲ್ಲ ನಿಜ, ಆದರದು
ದೇಹದ ದೈನ್ಯದ, ಹೃದಯದ ಹೆಮ್ಮೆಯ ಗರಡಿಯಲ್ಲಿ ಕಲಿತಂಥದ್ದು
ಗೋರಿಯಂತೆಯೇ ಹಾಸಿಗೆ ಕೂಡ ಅಲ್ಲಗಳೆಯದ ಸತ್ಯವದು.
ಎಷ್ಟೆ ಹಮ್ಮಿರಲಿ ಒಲಿದ ಹೆಣ್ಣಿಗೆ
ಎಷ್ಟೇ ಸೆಟೆದಿರಲಿ;
ಪ್ರೇಮ ನಿಲ್ಲಿಸಿದೆ ತನ್ನ ಮಹಲನ್ನ
ಉಚ್ಚೆಯ ಬಚ್ಚಲಲಿ;
ಹರಿಯದೆ ಯಾವುದು ಹೇಗಾದೀತು ತನಗೆ ತಾನೆ ಪೂರ್‍ಣ?
ಹರಿಯದೆ ಹೇಗೆ ಇಡಿಯಾದೀತು ಕರೆಯದೆ ಇನ್ನೊಂದನ್ನ?
*****
ಭೋಗ ಮತ್ತು ವಿರಾಗಪರವಾದ ಎರಡೂ ನಿಲುವುಗಳ ಢಿಕ್ಕಿಯನ್ನು ಕವಿ ಈ ಪದ್ಯದಲ್ಲಿ ಚಿತ್ರಿಸುತ್ತಾನೆ. ತಾನು ಕಂಡಿದ್ದ ಮೇರಿ ಎಂಬ ಹುಚ್ಚಿ ಹೆಣ್ಣೊಬ್ಬಳನ್ನು ಒಂದು ಪಾತ್ರವಾಗಿ ಹೊರಳಿಸಿಕೊಂಡು ಏಟ್ಸ್ ಎಂಟು ಪದ್ಯಗಳನ್ನು ಬರೆದಿದ್ದಾನೆ. ಇದು ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದದ್ದು. ‘ಜ್ಞಾನಿ’ಯಾದ ಬಿಷಪ್ಪನಿಗೆ ‘ಹುಚ್ಚಿ’ಯಾದ ಜೇನ್ ಕೊಡುವ ಉತ್ತರ ಮಾರ್‍ಮಿಕವಾಗಿದೆ.