ಮೂಲ: ವಿಲಿಯಂ ಬಟ್ಲರ್ ಏಟ್ಸ್
೧
ಆತ್ಮ: ಸುತ್ತಿ ಮೇಲೇರುವೀ ಸನಾತನ ಪಾವಟಿಗೆಯತ್ತ ಕರೆಯುವ ನಿನ್ನ:
ನೆಟ್ಟಿರಲಿ ಚಿತ್ತ ಕಡಿದಾದ ಏರುವೆಯತ್ತ
ಬಿರುಕೆದ್ದು ಮಣ್ಣು ಉದುರುವ ಕೋಟೆ ಕೈಪಿಡಿಯತ್ತ,
ಚಿಕ್ಕೆ ಉರಿಯುವ, ಉಸಿರು ಕಟ್ಟಿಸುವ ಗಾಳಿಯತ್ತ,
ಗುಪ್ತಾಕ್ಷ ಬಿಂದುವನ್ನು ಗೊತ್ತುಮಾಡುವ ಆ ನಕ್ಷತ್ರ ಧ್ರುವದತ್ತ;
ಎತ್ತೆತ್ತಲೋ ಜಿಗಿವ ಯೋಚನೆಯನ್ನೊಂದೊಂದೆ
ನೆಟ್ಟುಬಿಡು ಅರಿವೆಲ್ಲ ಬಟ್ಟಬಯಲಾಗಿ ಬಿಡುವಂಥ ಸ್ಥಳದಲ್ಲಿ:
ಕತ್ತಲನ್ನು ಆತ್ಮದಿಂದ ಪ್ರತ್ಯೇಕಿಸುವರಾರು?
ಜೀವ : ನನ್ನ ತೊಡೆಗಳ ಮೇಲೆ ಇರುವ ಮೀಸಲುಗತ್ತಿ
ಸೇಟೋನ ಪ್ರಾಚೀನ ಖಡ್ಗ, ಈಗಲು ಕೂಡ
ಹಾಗೆಯೇ, ಅದೇ ತೀಕ್ಷ್ಣಧಾರೆ, ಶತಶತಮಾನ
ಕಳೆದರೂ ಶುಭ್ರವಾಗಿರುವ ಕನ್ನಡಿಯಂತೆ.
ರೇಷ್ಮೆವಸ್ತ್ರದಲ್ಲಿ ನಯವಾಗಿ ಹೂ ಬಿಡಿಸಿರುವ ಈ ಹಳೆ ಕಸೂತಿ
ಯಾವ ಆಸ್ಥಾನಮಾನ್ಯೆಯ ವಸ್ತ್ರದಿಂದ
ಹರಿದು ಉಳಿದದ್ದೊ ಈಗ ಮರದ ಒರೆಯನ್ನು ಸುತ್ತಿ
ಹರಿದಿದ್ದೂ ರಕ್ಷಿಸಿದೆ, ಕಾಂತಿ ಮಾಸಿದ್ದರೂ ಶೋಭಿಸಿದೆ.
ಆತ್ಮ: ಪ್ರಾಯ ಎಂದೋ ತೀರಿದವನ ಕಲ್ಪನೆ ಈಗ
ಯಾಕೆ ನೆನೆಯುವುದು ಪ್ರೇಮ ಸಮರ ಸಂಕೇತಗಳ?
ಮರ್‍ತ್ಯನ ಕಲ್ಪನೆ ಈ ಮಣ್ಣಿನ ಜಗತ್ತನ್ನು,
ಚಿತ್ತ ಅದಕ್ಕೆ ಇದಕ್ಕೆ ಭ್ರಮಿಸುತ್ತ ಸುತ್ತುವುದನ್ನು
ಬಿಟ್ಟುಕೊಟ್ಟರೆ ಅದಕ್ಕೆ ಹುಟ್ಟು ಸಾವುಗಳಿಂದ
ಮುಕ್ತಿ ನೀಡುವ ಮೂಲದ ಕತ್ತಲನ್ನು ಧ್ಯಾನಿಸು.
ಜೀವ : ಮೊಂಟಶೀಗಿ, ವಂಶದಲ್ಲಿ ಮೂರನೆಯಾತ
ನಿರ್‍ಮಿಸಿದ್ದಿದು ಐದುನೂರು ವರ್‍ಷದ ಹಿಂದೆ;
ಕತ್ತಿಹಿಡಿ ಸುತ್ತಿರುವ ಹೂವು ಯಾವ ಕಸೂತಿ
ವಸ್ತ್ರದ್ದೊ ನಾ ತಿಳಿಯೆ, ಬಣ್ಣ ಹೃದಯದ ರೀತಿ,
ಹಗಲ ಸಂಕೇತಿಸುವ ಈ ಎಲ್ಲ ವಸ್ತುವೂ
ಇರುಳ ಸಂಕೇತಿಸುವ ಗೋಪುರಕ್ಕೆ ವಿರೋಧ,
ಯೋಧನೊಬ್ಬನ ಹಕ್ಕಿನಿಂದ ಕೇಳುತ್ತೇನೆ
ಮತ್ತೊಮ್ಮೆ ಅಂಥ ಅಪರಾಧಕ್ಕೆ ಅಧಿಕಾರ ಪತ್ರವನ್ನ.
ಆತ್ಮ : ತುಂಬಿ ಸೂಸುವುದು ಆ ಸ್ಥಲದಲ್ಲಿ ಪೂರ್‍ಣತೆ
ತುಳುಕಿ ಬೀಳುವುದು ಚಿತ್ರದ ಕೆಳತಳಕ್ಕೆ,
ಅದರ ಶಕ್ತಿಗೆ ಮರ್‍ತ್ಯ ಕಿವುಡನೂ ಮೂಕನೂ
ಕುರುಡನೂ ಆಗಿ ಗರ ಬಡಿಯುವುದು ಚಿತ್ತಕ್ಕೆ.
ಬುದ್ದಿಗೆ ತಿಳಿಯದು ಆಗ ಜ್ಞಾತ್ರಜ್ಞೇಯದ ಭೇದ,
ಇರುವುದಕ್ಕೂ ಆಗಬೇಕಾದ್ದಕ್ಕೂ ವಿರೋಧ –
ಇದರರ್‍ಥ ಮೇಲಕ್ಕೇರುವುದು ಅದು ಸ್ವರ್‍ಗಕ್ಕೆ;
ಸತ್ತವರು ಮಾತ್ರವೇ ತಕ್ಕವರು ಕ್ಷಮೆಗೆ;
ಆದರೆ ಅದನ್ನು ನಾ ನೆನೆವಾಗ ಕಲ್ಲಾಗಿಬಿಡುವುದೇ ನಾಲಿಗೆ
೨
ಜೀವ : ಬಾಳುವ ವ್ಯಕ್ತಿ ಕುರುಡ, ತನ್ನ ಪಾಲಿನ ಜಲವ
ಕುಡಿದೇ ಬಿಡುವ, ಹೊಂಡ ಹೊಲ, ಬಿಡು ಏನಂತೆ?
ಒಮ್ಮೆ ಬಾಳಿದ್ದನ್ನೆ ಬಾಳಬೇಕೇ ಮತ್ತೆ? ಇರಲಿ ಬಿಡು ಏನಂತೆ?
ಬೆಳೆಯುವಾಗಿನ ಗೋಳನ್ನೆಲ್ಲ ತಾಳುವುದೆ ಸರಿ.
ಬಾಲ್ಯಾವಸ್ಥೆಯ ದೈನ್ಯ, ಆ ಬಾಲ್ಯ ಹರೆಯಕ್ಕೆ
ಹೊರಳುವಾಗಿನ ಕರ್‍ಮ, ಪೂರ್‍ತಿ ಬೆಳೆಯದ ಮರ್‍ತ್ಯ
ತನ್ನ ವಿಕಾರಸಹಿತ ಢಿಕ್ಕಿಯಾಗುವ ಅನರ್‍ಥ
ಇರಲಿ ಬಿಡು ಏನಂತೆ?
ಪೂರ್‍ಣ ಬೆಳೆದ ಮನುಷ್ಯನೋ? ಸುತ್ತ ಶತ್ರುಗಳು,
ದೇವರಾಣೆಗೂ ಎಂದೂ ತಪ್ಪಿಸಲಾರ ಅವನು
ಕುಹಕಿಗಳ ಕಣ್ಣುಗನ್ನಡಿ ಅವನ ಕಣ್ಣುಗಳ
ಮೇಲೆ ಬಿಂಬಿಸುವ ಹುಸಿ ವಿಕೃತ ರೂಪವನು;
ನೋಡಿ ನೋಡೀ ಕಡೆಗೆ ಅದೆ ತನ್ನ ನಿಜವೆಂದು
ತಿಳಿವ ಆಭಾಸ. ಅದರಿಂದ ಪಾರಾಗಿಯೂ
ಬಂದ ಫಲವೇನು, ಸಂಜೆಗೆ ಸತ್ಯ ತಿಳಿದೇನು?
ಇರಲಿ ಮತ್ತೆ ಅದನ್ನು ಬಾಳುವವನೇ ನಾನು
ಇನ್ನೊಮ್ಮೆ ಮತ್ತೊಮ್ಮೆ ಅದೆಂಥ ಕೊಚ್ಚೆಯೆ ಇರಲಿ.
ಕಪ್ಪೆಮರಿ ಗಿಜಿಗಿಡುವ, ಕುರುಡ ಕುರುಡರನ್ನಿರಿವ
ಅಂಧನ ಚರಂಡಿ ಇರಲಿ, ಇಲ್ಲವೆ ಎಲ್ಲಕ್ಕಿಂತ
ಬಹಳ ಫಲವತ್ತಾದ, ತನ್ನಾತ್ಮಕ್ಕೊಗ್ಗದ
ಹೆಮ್ಮೆಯ ಹಣ್ಣಿಗೆದೆತ್ತೆತ್ತ ಮೂರ್‍ಖನಿಗೆ ಹೇಳಿಸಿದ
ಕೊಳೆಗಟಾರವೆ ಇರಲಿ, ಧುಮುಕುವೆನು ಅದರಲ್ಲಿ.
ಪ್ರತಿ ಘಟನೆಯನ್ನು ಕ್ರಿಯೆಯಲ್ಲಿ ಚಿಂತನೆಯಲ್ಲಿ
ಬಗೆದುನೋಡುತ್ತ ಹೋಗುವೆನು, ನನಗದೆ ಸಾಕು;
ನನ್ನ ವಿಧಿಯನ್ನೆಲ್ಲ ಅಳೆದು ನನ್ನಷ್ಟಕ್ಕೆ ಬಿಟ್ಟುಬಿಡು ನನ್ನನ್ನು!
ಎಲ್ಲ ಪರಿತಾಪ ಕಿತ್ತೆಸೆದಾಗ ನನ್ನೆದೆಯೊಳಗೆ
ಎಂಥ ಜೇನಿನಧಾರೆ ಹರಿಯುವುದು ಎಂದರೆ
ಕೇಕೆ ಹಾಕಿ ನಗುತ್ತ ಕುಣಿಯಬೇಕೆನಿಸುವುದು,
ಇಡೀ ಸೃಷ್ಟಿಯೇ ನಮ್ಮ ಬಾಳನ್ನು ಹರಸಿದೆ
ನಾವು ಕಾಣುವುದೆಲ್ಲ ಹರಸಿದ್ದೆ ಆಗಿವೆ.
*****
(೧೦) ಸೇಟೋ ಏಟ್ಸನ ಒಬ್ಬ ಜಪಾನೀ ಸ್ನೇಹಿತ. ಏಟ್ಸನಿಗೆ ಐದುನೂರು ವರ್‍ಷಗಳ ಹಿಂದಿನ ಖಡ್ಗವೊಂದನ್ನು ಸ್ನೇಹದ ಗುರುತಾಗಿ ಕೊಟ್ಟವನು.
(೨೩) ಮೊಂಟಶೀಗಿ: ಮೇಲೆ ಹೇಳಿದ ಖಡ್ಗ ಈತನದು. ಸಮರದ ಸಂಕೇತವಾದ ಆ ಖಡ್ಗದ ಕೈಪಿಡಿಗೆ ಪ್ರೇಮದ ಸಂಕೇತದಂತಿರುವ ಕಸೂತಿ ವಸ್ತ್ರವೊಂದನ್ನು ಸುತ್ತಿದೆ.