ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ವಿತರಿಸುವ ಲಡ್ಡಿನ ಮಹಿಮೆ ಅಪಾರ. ನಾನು ೧೯೯೧ರಿಂದ ಈತನಕ ಹತ್ತಾರು ಸಲ ಹೋಗಿ ಬಂದಿದ್ದೇನೆ.
ಒಮ್ಮೆ- ಬರಿಗಾಲಲ್ಲಿ ಬೆಟ್ಟ ಹತ್ತಿ ಇಳಿದಿದ್ದುಂಟು. ಪ್ರಕೃತಿ ಸೌಂದರ್ಯ ಆಸ್ವಾದಿಸಿದ್ದುಂಟು.
ನನ್ನ ಕಣ್ಣ ಮುಂದೆ ನಿತ್ಯ ಸುತ್ತ ಸುಳಿಯುವುದೆಂದರೆ… ಇಲ್ಲಿನ ಲಡ್ಡು, ಈ ಲಡ್ಡಿನ ಮಹಿಮೆ ಅಪಾರ. ಒಮ್ಮೆ ತಿಂದರೆ ಇನ್ನೊಮ್ಮೆ, ಮತ್ತೊಮ್ಮೆ, ತಿನ್ನಬೇಕೆನಿಸುವುದು!
ವಿದೇಶಿಯರೂ ಇಲ್ಲಿಗೆ ಬಂದು ಹೋಗುವರು…
ನಾನು ಈ ಐದು ದಶಕಗಳಲ್ಲಿ ನೂರಾರು ಕಡೆಗಳಲ್ಲಿ ಲಡ್ಡು ಸವಿದಿದ್ದೇನೆ. ಆದರೆ ತಿರುಪತಿಯ ಲಡ್ಡು ಇದ್ದಂತೇ ಇಲ್ಲವೇ ಇಲ್ಲ! “ಇದೇಕೆ ಇಷ್ಟು ರುಚಿ ಶುಚಿ? ಈ ಲಡ್ಡಿನ ಮಹಿಮೆಯಾದರೂ ಏನು? ಇದರ ಹಿಂದಿರುವ ರಹಸ್ಯವಾದರೂ ಏನು? ಸ್ಥಳ ಮಹಿಮೆಯೇ? ಪಾಕ ಶಾಸ್ತ್ರವೇ?” ಅಧ್ಯಯನ ಯೋಗ್ಯವಾದ ವಸ್ತು ವಿಶೇಷವಾಗಿದೆ.
ಇಲ್ಲಿನ ಲಡ್ಡು ಆಕರ್‍ಷಣೆಯೇ ಸೋಜಿಗವೆನಿಸುವುದು. ಒಂದು ಲಡ್ಡು ಕೈಯಲ್ಲಿಡಿದರೆ ಕೈತುಂಬಾ ೩೦೦ ಗ್ರಾಂ ತೂಕದ್ದು! ಒಂದು ತಿನ್ನಲು ಮುಖ ಉಜ್ಜಿ… ಆಹಾ.. ಸಾಕುಸಾಕಾಗಿ ಬಿಡುವುದು. ಕೈಬಾಯೆಲ್ಲ ಸುವಾಸನೆ ಘಮ-ಘಮ ಪರಿಮಳ ಬೀರುವುದು! ಒಂದೇ ಸಾರಿ ಎರಡು ಲಡ್ಡುಗಳನ್ನು ಬಿಡದೆ ಪ್ರತಿ ಸಾರಿ ಸವಿದಿದ್ದೇನೆ. ಯಾವುದೇ ರೀತಿಯ ಅಡ್ಡ ಪರಿಣಾಮ ಕಂಡು ಬಂದಿಲ್ಲ! ಸಕ್ಕರೆ ರೋಗವನ್ನು ಹತೋಟಿಗೆ ತಂದಿದೆ. ರಕ್ತದೊತ್ತಡವನ್ನು ಸರಿದೂಗಿಸಿದೆ. ಹಸಿವು ಹೆಚ್ಚಿಸಿದೆ. ಉಲ್ಲಾಸ ಉತ್ಸಾಹ ಹೆಚ್ಚಿಸಿದೆ. ಇನ್ನೊಂದು ಲಡ್ಡು ತಿನ್ನಬೇಕೆಂಬಾಸೆ ಮೂಡಿದೆ.
ಲಡ್ಡಿನ ವಾಸನೆ ಕಿಲೋಮೀಟರ್‌ವರೆಗೂ ವ್ಯಾಪಿಸಿದೆ. ಅದರಲ್ಲಿ ರಾಶಿರಾಶಿ ಕಲ್ಲುಸಕ್ಕರೆ, ಬಾದಾಮಿ, ಉತ್ತೂತ್ತಿ, ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಬೆಲ್ಲ, ತುಪ್ಪ, ಲವಂಗ ಒಣಕೊಬ್ಬರಿ.. ಗುಲ್ಕನ್… ಅಬ್ಬಾಬ್ಬಾ… ಏನೆಲ್ಲ ಹಾಕಿ ತಯಾರಿಸಿದ ಲಡ್ಡು ವಾರವಿಟ್ಟರೂ ಕೆಡದಂತೆ ಉಳಿಯುವ ಮಹಿಮೆ ಬಣ್ಣಿಸಲು ಅಸಾಧ್ಯ! ತಿನ್ನಬೇಕು ತಿಂದು ಅದರ ಸವಿ ಸವಿಯಬೇಕು. ಒಮ್ಮೆ ಶ್ರೀಮಹಾವಿಷ್ಣುವೇ ಭಕ್ತನ ವೇಷದಲ್ಲಿ ಬಂದು ಲಡ್ಡು ಸವಿದನೆಂಬ ಕಥೆಯೇ ಉಂಟು! ಅಷ್ಟು ವಿಶ್ವವಿಖ್ಯಾತಿ….
ಈ ಲಡ್ಡಿಗೊಂದು ಇತಿಹಾಸವಿದೆ. ಇದನ್ನು ಜನರಿಗೆ ಪ್ರಸಾದವಾಗಿ ದಿನಾಂಕ ೦೨-೦೮-೧೭೧೫ರಂದು ಆರಂಭಿಸಿದ್ದು ಈಗ ೩೦೦ ವರ್ಷಗಳ ಇತಿಹಾಸವನ್ನು ಸಾರುವುದು.
ಪ್ರತಿನಿತ್ಯ ೬೫೦ ಜನರು ೩೦೦ ಜನ ಪರಿಣಿತ ಅಡಿಗೆ ಭಟ್ಟರೂ ಸೇರಿ ಸುಮಾರು ೩ ಲಕ್ಷ ಲಡ್ಡುಗಳನ್ನು ತಯಾರಿಸುವರು. ೨೦೧೪ನೇ ಸಾಲಿನಲ್ಲಿ ೯೦ ದಶಲಕ್ಷ ಲಡ್ಡು ಖರ್‍ಚಾಗಿದೆ.
ಬ್ರಹೋತ್ಸವದ ಕಾಲದಲ್ಲಿ ೧.೮ ದಶಲಕ್ಷ ಲಡ್ಡುಗಳು ಖರ್‍ಚಾಗುತ್ತವೆ.
ಒಂದು ಲಡ್ಡುವಿಗೆ ೨೫ ರೂಪಾಯಿಗಳಷ್ಟು ಖರ್‍ಚು ಬರಬರುವುದು. ಆದರೆ ದೇವಸ್ಥಾನದ ಕಮಿಟಿಯವರು ಭಕ್ತ ಜನರಿಗೆ ರೂಪಾಯಿ ೧೦ರಂತೇ ಎರಡು ಲಡ್ಡು ನೀಡುತ್ತಿರುವರು.
೨೦೧೫-೧೬ನೆಯ ಸಾಲಿನಲ್ಲಿ ಬರೀ ಲಡ್ಡು ಮಾರಾಟದಿಂದಲೇ ೨೦೦ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆಯಿದೆ.
*****