ಬಿಳಿಹಳದಿ ತೆಳುವಾದ ಮಕಮಲ್ಲಿನುಡಿಗೆ
ಜುಳುಜುಳು ಕಳಕಳದೊಯ್ಯಾರ ನಡಿಗೆ
ಸವಿದೆರೆ ತಿಳಿನಗೆ ತೇಲುನೋಟ ಮುಗಿಲನೆಡೆಗೆ
ನೋವರಿಯದೇಕಾಂತದಾನಂದ ತೀರದಲಿ
ಸಂತೋಷಸಾಗರಲೀನ ಪ್ರಶಾಂತ ಕಾನನ
ಸಾವಿರದ ಸೆಲೆಯುಕ್ಕಿ ಹೊಳೆಯಾಗಿ ಹರಿದಿದೆ ಹರೆಯ
ನೆಲ-ಮುಗಿಲು ಮರ ತೆಮರು ಹುಲ್ಲು-ಹೊದರುಗಳನ್ನೆಲ್ಲ ತುಂಬಿತುಳುಕಿ
ಉಕ್ಕಿ ಹೊಮ್ಮಿದೆ ಪ್ರೇಮಸುಧೆಯ ಚೆಂಬೊನ್ನ ಚೆಲುವು
ಕಣಕಣದ ತುಟಿಗೂ ಬಂಗಾರಚುಂಬನ
ಕಂಡಕಂಡಲ್ಲೇಲ್ಲಾ ಕಡವರವ ಕಂಡರಸಿದಂತಿದೆ
ಚಿನ್ನಕನಸೇ ಮೂರ್ತಿಮಂತಾಗಿ ನಿಂತ ಹೊನ್ನ ಹುಡುಗೀ ಜೊನ್ನ ಬೆಡಗೀ
ನಿನ್ನ ಪಾದವ ಮುತ್ತಿಟ್ಟ ನಿರಿನಿರಿ ಸೀರೆಯನೇರಿ
ಹೂವರಳಿ ಕರೆವ ತನುಲತೆಯನೆಲ್ಲೆಡೆಯಪ್ಪಿ
ಒತ್ತಿ ಮುತ್ತಿಟ್ಟು ಸ್ವರ್ಣಪುಲಕವಾಂತಿದೆ ಹೊಂಬೆಳಕು
ಕೊರಳು ಬೆರಳು ಕೆನ್ನೆ ಕದಪು ತೊಂಡೆತುಟಿ ನೀಳ ನಾಸಿಕ
ಕೂದಲೆಳೆಯೆಳೆ ಮುಡಿಮಾಲೆಗಳಲೆಲ್ಲ ದುಂಬಿಯಾಡಿ
ರಸಸ್ರೋತದಲೋಲಾಡಿ ಆ ಬೆಳಕಿನಪ್ಪುಗೆಯಂತೆ
ಮತ್ತೇರಿ ತೇಲಿಹೋಗುವೆ
*****