ಇದೆಂತಹ ಗಡಿಗಳು
ಎಂತಹ ವಿಭಾಜಕ ರೇಖೆಗಳು
ಕಾವೇರಿಯ ತಟದಲಿ
ಕುಂಟಾಬಿಲ್ಲೆ ಆಡುತ್ತಾ ಎಲ್ಲರೊಂದಿಗೆ
ಕೂಡಿ ಬೆಳೆದವಳು ನಾನು
ಇಲ್ಲಿ ಮುಹಾಜಿರಳಾಗಿರುವೆ.
ಅಲ್ಲಿ ಮಾಮರಗಳ ಹತ್ತಿ
ಮರಕೋತಿ ಆಡಿದ್ದವಳು
ಆ ನದಿ, ಬೆಟ್ಟ, ಗಿಳಿ, ಕೋಗಿಲೆ
ಹಿಂಡು ಹಿಂಡು ಗೆಳತಿಯರನು
ಅಲ್ಲಿಯೇ ಬಿಟ್ಟು ಬಂದಿರುವೆ,
ಅಲ್ಲಿ ಕಾವೇರಿಯ ತಟದಲ್ಲಿಯೇ.
ನೋಟು ಬುಕ್ಕಿನ ಪುಟಗಳ ಮಧ್ಯೆ
ಅಂದು ಬಚ್ಚಿಟ್ಟ ಆ ನವಿಲುಗರಿಯಿದೆ
ಚಾಚಾನ ಪುಟ್ಟ ಮಗಳೀಗ
ಬೆಳೆದು ದೊಡ್ಡವಳಾಗಿರಬೇಕು
ಮರ್‍ಯಾದೆಯ ದುಪಟ್ಟಾ
ತಲೆ ಮೇಲೆ ಹೊದೆಯುತ್ತಿರಬೇಕು.
ಅಲಿಂದ ಬಿಟ್ಟು ಬರುವಾಗ
ಅವಳಿನ್ನೂ ಪುಟ್ಟ ಮಗು
ತೊಟ್ಟಿಲ್ಲಲಿ ಒಂದೇ ಸಮ ಅಳುತ್ತಿದ್ದಳು.
ಅಮ್ಮನ ಜಹಾಜಿನಾಕಾರದ ಪಾನ್‌ದಾನ್‌೧
ಸುಂದರ ಉಗಾಲ್ದಾನ್೨
ಅಪ್ಪನ ಸುರಾಯಿಯಾಕಾರದ
ಕುಸುರಿ ಕೆತ್ತನೆಯ ಮುರಾದಾಬಾದಿ ಹುಕ್ಕಾ
ಎಲ್ಲ ಅಲ್ಲಿಯೇ ಬಿಟ್ಟು ಬಂದಿರುವೆ.
ಆ ಪಡಸಾಲೆ ನನಗಿನ್ನೂ ನೆನಪಿದೆ
ಮುಂದಿರುವ ಛಪ್ಪರದಲ್ಲಿಯೇ ಬಿಟ್ಟು ಬಂದಿದ್ದೆ
ನನ್ನ ಪುಟ್ಟ ಪುಟ್ಟ ಚಪ್ಪಲಿಗಳು
ಒಮ್ಮೆಲೇ ಏನಾಯಿತೋ ಗೊತ್ತಿಲ್ಲ
ದೇಶ ವಿಭಜನೆಯಾಗುತ್ತದೆಯೆಂದರು.
ಅಪ್ಪ ದಡದಡ್ಡನೇ ರೈಲು ಹತ್ತಿಸಿದ್ದರು
ನನ್ನೊಡನೆ ಆಡುತ್ತಿದ್ದ ಗೆಳತಿಯರ
ಕೈ ಕೊಸರಿ ಅಪ್ಪನ ಕೈ ಹಿಡಿದಿದ್ದೆ.
ರೈಲಿನ ಡಬ್ಬ ಹಿಡಿದು ಅಳುತ್ತಿದ್ದ
ಅಜ್ಜಿಯನು ಅಲ್ಲಿಯೇ ಬಿಟ್ಟು ಬಂದಿದ್ದೆ
ಅಮ್ಮಿ, ಅಬ್ಬಾ, ಭಯ್ಯಾನೊಂದಿಗೆ
ಕರಾಚಿಯ ರೈಲು ಹತ್ತಿದ್ದೆ.
ಅಲ್ಲಿಂದ ಯಾರಾದರೂ ಬಂದರೆ ಸಾಕು
ನನ್ನ ಹಳೆಯ ನೆನಪಿನ ಬುತ್ತಿ ಬಿಚ್ಚಿಕೊಳ್ಳುವೆ
ಕಾವೇರಿಯ ತಟದ ಆ ಮನೆ ಕಿಟಕಿಯಲಿ
ಬಿಟ್ಟು ಬಂದಿರುವ ನನ್ನ ಪುಟ್ಟಗೊಂಬೆ
ಅಮ್ಮನ ಪಾನದಾನ, ಅಪ್ಪನ ಹುಕ್ಕಾ
ನೋಟುಬುಕ್ಕಿನಲ್ಲಿನ ನವಿಲುಗರಿ
ಗೆಳತಿಯರ ದಂಡು, ಅವರ ಮದುವೆ
ಮಕ್ಕಳು, ಇತರೇ ಕುಶಲ ವಿಚಾರಿಸುವೆ.
ಮೊಹರಂ ಬಂದಿತೆಂದರೆ ಸಾಕು
ನನ್ನೂರು ಮದುಮನೆಯಂತೆ ಕಂಗೊಳಿಸುತ್ತಿತ್ತು
ಪಶ್ಚಿಮ ಘಟ್ಟದಿಂದ ಹರಿಯುವ
ಪ್ರತಿಯೊಂದು ನದಿಯೂ ನನಗೆ
ವಜು ಮಾಡು ಬಾ ಎಂದು ಕರೆಯುತ್ತಿದ್ದವು
ಚಿನಾಬ್ ನದಿಯ ನೀರನ್ನು ಮುಟ್ಟದಿರು
ನೀನು ಮುಹಾಜಿರಳು ಎಂದಾಗ
ನೋವಿನಿಂದ ಮನಸು ಮಿಡಿಯುತ್ತಿತ್ತು
ಗಾಲಿಬ್, ಇಕ್ಬಾಲ್, ಸೂರ್, ಕಬೀರ,
ಸಂತ ಶರಣರ ಗ್ರಂಥಗಳೆಲ್ಲ
ಅಲ್ಲಿಯೇ ಬಿಟ್ಟು ಬಂದಿರುವೆ
ನನ್ನ ಜೀವವೆಲ್ಲ ಅಲ್ಲಿಯೇ ಇದೆ
ದೇಹ ಮಾತ್ರ ಇಲ್ಲಿದೆ ಸುಮ್ಮನೆ
ಮನಸಿಗೆಂತಹ ಗಡಿಗಳು
ಎಂತಹ ವಿಭಾಜಕ ರೇಖೆಗಳು?
*****
೧ ಎಲೆ ಅಡಿಕೆ ಇಡುವ ಪುಟ್ಟ ಪೆಟ್ಟಿಗೆ
೨ ಉಗುಳುವ ಪೀಕದಾನಿ