ಹಿಗ್ಗುತ್ತಿರುವ ವೃತ್ತದಾಕಾರದಲ್ಲಿ, ಸುತ್ತುತ್ತ ಸುತ್ತುತ್ತ,
ಕೇಳಿಸದು ಡೇಗೆಗೆ ಡೇಗೆಗಾರನ ಕೂಗು;
ಕಳಚಿಕೊಳ್ಳುತ್ತಲಿದೆ ಅಂಗಾಂಗ, ಒಟ್ಟಾಗಿ ಹಿಡಿಯಲಾರದ ಕೇಂದ್ರ,
ಛೂಬಿಟ್ಟ ಹಾಗಿದೆ ಅನಾಯಕತೆಯನ್ನೇ ಇಡಿಯ ಲೋಕದ ತುಂಬ;
ರಕ್ತಮಂದ ಪ್ರವಾಹ ಕಟ್ಟೊಡೆದು ನುಗ್ಗಿದೆ
ಮುಗ್ಧತೆಯ ಉತ್ಸವ ಮುಳುಗಿ ತಳ ಸೇರಿದೆ,
ಉತ್ತಮರಿಗಿಲ್ಲ ದೃಢನಂಬಿಕೆ, ನಿಕೃಷ್ಟರಿಗೆ
ತೀವ್ರ ಭಾವೋನ್ಮಾದಪರತೆ.
ಯಾವುದೋ ದರ್‍ಶನಕ್ಕಿದು ಕಾಲ ಖಂಡಿತ,
ಪುನರಾವತಾರಕ್ಕೆ ಕಾಲ ಇದು ಖಂಡಿತ.
ಪುನರಾವತಾರ! ಪದದುಚ್ಚಾರ ಆಯಿತೋ
ಕಣ್ಣಕುಕ್ಕುತ್ತಿದೆ ಪುರಾಣಸ್ಮೃತಿಯಿಂದೆದ್ದ ಘೋರ ಬೃಹದಾಕಾರ,
ದೂರ ಮರುಭೂಮಿಯಲ್ಲೆಲ್ಲೊ ನರಶಿರವನ್ನು ಹೊತ್ತ ಸಿಂಹಶರೀರ;
ಶೂನ್ಯಕಾರುವ ನೋಟ, ಸೂರ್‍ಯನಂತೇ, ಕ್ರೂರ,
ಭಾರ ತೊಡೆಯೆತ್ತೆತ್ತಿ ನಿಧಾನ ಚಲಿಸುತ್ತಿದೆ,
ಕೆರಳಿರುವ ಮರುಭೂಮಿಹಕ್ಕಿಗಳ ನೆರಳುಗಳು ಅದರ ಸುತ್ತ.
ಕತ್ತಲಿಳಿಯುತ್ತಿದೆ ಮತ್ತೆ ಕೆಳಗೆ. ಈಗ
ಗೊತ್ತಾಗುತ್ತಿದೆ ನನಗೆ ತೂಗುತೊಟ್ಟಿಲದೊಂದು
ಇಪ್ಪತ್ತು ಶತಕಗಳ ಗಾಢನಿದ್ದೆಯ ಕಾಡಿ ದುಃಸಪ್ನ ಬಡಿಸಿದ್ದು.
ತನ್ನ ಜನನದ ಗಳಿಗೆ ಇನ್ನೇನು ಬಂತೆಂದು
ತೂಗಿ ಚಲಿಸುತ್ತಿದೆಯೊ ಹೇಗೆ ಈ ಘೋರಮೃಗ
ಬೆತ್ಲಹಮ್ಮಿನ ಕಡೆಗೆ?
*****
ಎರಡು ಸಾವಿರ ವರ್‍ಷಗಳಿಗೊಮ್ಮೆ ಯುಗ ಬದಲುತ್ತದೆ; ಹೊಸ ಅವತಾರದಿಂದ ಅದರ ಆರಂಭವಾಗುತ್ತದೆ ಎಂದು ಏಟ್ಸ್ ನಂಬಿದ್ದ. ಕ್ರಿಸ್ತ ಜನಿಸಿ ಎರಡು ಸಹಸ್ರ ವರ್‍ಷಗಳಾಗುತ್ತಿವೆ. ಯುಗಜೀವನ ತುಂಬ ಕಲುಷಿತವಾಗಿದೆ. ಆಗಲಿರುವ ಅವತಾರದ ಕಲ್ಪನೆ ಕವನದಲ್ಲಿ ಮೂಡಿದೆ.
ಪುರಾಣ ಸ್ಮೃತಿ: ಮನುಷ್ಯ ಜನಾಂಗಕ್ಕೆಲ್ಲ ಸಾಮಾನ್ಯವಾದ ಸ್ಮೃತಿ, ಪುರಾಣ ಐತಿಹ್ಯಗಳಲ್ಲಿ ಮತ್ತೆಮತ್ತೆ ಪುನರಾವರ್‍ತಿಸುವ ಪ್ರತಿಮೆಗಳ ಸಂಗ್ರಹ. ಇಲ್ಲಿ ಬರುವ ‘ನರಶಿರವನ್ನು ಹೊತ್ತ ಸಿಂಹಶರೀರ’ ಅಂಥ ಒಂದು ಪ್ರತಿಮೆ.
ಬೆತ್ಲೆಹೆಮ್ : ಕ್ರಿಸ್ತನ ಜನ್ಮಸ್ಥಳ.
ಮೂಲ: ವಿಲಿಯಂ ಬಟ್ಲರ್ ಏಟ್ಸ್