ಹೆರರ ನೋವಿಗೆ ಅಯ್ಯೊ ಎಂದು
ಮರುಗಿ ಸುಯ್ಯಲನಿಡಲು ಒಲವೆ?
ಹಿರಿಯ ಸುಖದಿರವೆನ್ನ ದೆನ್ನುವ
ಅರಿವು ಒಲಿದವಗಿರುವುದೆ?
ಜನುಮದೊಂದಿಗೆ ಜೊತೆಯ ಕೂಡಿ
ಕೊನೆಯವರೆಗೂ ಬೆನ್ನ ಬಿಡದ
ಜನುಮದುನ್ನತಿ ಕುಲದ ಹೆಮ್ಮೆಯ.
ಕಟ್ಟ ಕಳೆವುದೆ ಕರುಣೆಯು?
ಕೊಳದ ಕರೆ ಬಳಿ ಅಂದು ಮರುಗಿದೆ
ಸುಳಿದ ನೋವಿನ ಅಳುವ ಕೇಳಿ,
ಬೆಳೆದ ಇರುಳೊಳು ದನಿಯನರಸಿ
ಮನದೊಳಳುಕುತ ನಡೆದೆನು.
ಮುಗಿಲ ಬೆಳ್ಳಿಯ ಪೊರೆಯ ಹೊದೆದು
ಸೊಗಸುಕನಸನು ಕಾಣುವಂದದಿ
ನಗುವ ಚಂದ್ರನ ಬೆಳಕಿನೊಳಗೆ
ಕಂಡೆ ತಬ್ಬಲಿ ಮರಿಯನು.
ತಾಯಿ ಸತ್ತರು ಮೊಲೆಯ ಬಿಡದಾ
ನಾಯ ಮರಿಯ ಗೋಳ ಕಂಡೂ
ಮೈಯ ಮುಟ್ಟಲು ತಡೆದುದಂದು
ಜಾತಿ ಹೆಚ್ಚಿನ ಹೆಮ್ಮೆಯು.
ಕೊರೆವ ಚಳಿಯೊಳು ದಿಕ್ಕುಗಾಣದ
ಮರಿಯ ತೊರೆಯಲು ಮನವು ಬಹುದೇ?
ಕೊರಲೊಳಿಟ್ಟೆನು ಬಳ್ಳಿಕುಣಿಕೆಯ
ಮನೆಗೆ ನಡೆಸಿದೆ ಮೆಲ್ಲನೆ.
ಅಂದು ಮಕ್ಕಳ ಹರುಷ ಮೀರಿತು
ಮುಂದೆ ಕುಣಿದರು ಕೈಯ ತಟ್ಟಿ
ಕಂದನಂದದಿ ಅಂದು ಮೊದಲು
ಮರಿಯ ಸಾಕಿದೆವೆಲ್ಲರು.
ಹಾಲು ಅನ್ನವನುಣಿಸಿ ನಲಿದೆವು
ಮೇಲುತಿಂಡಿಗಳೆಲ್ಲವಿತ್ತೆವು
ಮೈಲಿಗೆಯ ಭಯದಿಂದ ಮೈಯನು
ಮುಟ್ಟಗೊಡಿಸೆವು ಆದರೂ.
ಮರಿಯು ನಮ್ಮ ಬಿಂಕವರಿತು
ಹೊರಗೆ ನಿಲುವುದು ಹೊಸಿಲ ದಾಟದು!
ಹಿರಿಯತನದ ಹೆಮ್ಮೆಗಡಲು
ಹರಿಯತೆಮ್ಮಯ ಮಧ್ಯದಿ.
ಆರು ತಿಂಗಳ ಕಳೆದೆವಿಂತು,
ಊರೆ ಮೆಚ್ಚಿದ ಮರಿಯನೊಂದು
ಇರುಳೊಳೊಯ್ದನು ಕಳ್ಳನದನು
ಮನೆಯ ಮಕ್ಕಳ ಮುದ್ದನು.
ಎದ್ದು ಹುಡುಗರು ನಾಯ ಕಾಣದೆ
ಬಿದ್ದು ಬೀಳುತಲೋಡಿಬಂದು
‘ಕದ್ದರೇನೋ? ಮರಿಯ ಕಾಣೆವು’
ಎಂದು ಕಂಬನಿಗರೆದರು.
ಕೇರಿ ಕೇರಿಗೆ ಜನರನಟ್ಟಿದೆ
ಊರ ಊರನು ತಿರುಗಿ ಕೇಳಿದೆ
ಆರ ಕಂಡರು ‘ಮರಿಯ ಕಾಣಿರ’
ಎಂದು ಹುಚ್ಚನ ತೆರದೊಳು.
ಮೂರುದಿನಗಳು ಹುಡುಕಿ ಕೊನೆಗೆ
ಊರ ಮುಂದಿನ ಮನೆಯ ಹೊರಗೆ
ಏರುಬಿಸಿಲೊಳು ಕುರುಬನೆಡೆಯೊಳು
ಕಂಡೆ ಮಲಗಿದ ಕುನ್ನಿಯ.
ಹರುಷ ಮೀರಿತು ಬಾಲವಾಡಿಸಿ
ಗುರುತ ಹಿಡಿಯುತ ನೆಗೆಯೆ ನಾಯಿ
ಕುರುಬಗೌಡನ ಗದರಿ ಕೇಳಿದೆ
‘ಕದ್ದೆ ಯೇತಕೊ ಮರಿಯನು?’
ನಡುಗಿ ಕೈಗಳ ಮುಗಿದು ನಿಂತು
ನುಡಿದನೀ ಪರಿ ಕುರುಬಗೌಡನು
‘ಒಡೆಯ, ಮರಿಯನು ಕದಿಯಲಿಲ್ಲವು
ಹಿಂದೆ ಬಂದಿತು ಕರೆಯದೆ.
‘ಅಂದು ಊರೊಳಗಿರುಳು ತಂಗಿ
ಮುಂದೆ ಪಯಣವ ಬೆಳೆಸಲೆಂದು
ಮಂದಿ ಮಲಗಿದ ಹೊತ್ತಿನಲ್ಲಿ
ನಿಮ್ಮ ಜಗಲಿಗೆ ಬಂದೆನು.
‘ಮರಿಯು ಬಗುಳುತ ಅಡ್ಡಗಟ್ಟಲು
ತೆರೆದು ಬುತ್ತಿಯ ರೊಟ್ಟಿಯಿಟ್ಟೆನು
ಹರುಷದಿಂದಲಿ ತಲೆಯ ತಟ್ಟಿ
ಮೈಯ ತಡಹಿದೆ ನಾಯಿಯ.
‘ಚಳಿಗೆ ನಡುಗಲು ಮರುಕದಿಂದ
ಕೆಳಗೆ ಕಂಬಳಿಹಾಸಿ ಜೊತೆಯೊಳು
ಚೆಲುವು ಮರಿಗೂ ತಾಣವಿತ್ತೆನು
ಒಲುಮೆ ಬೆಸೆಯಿತು ಇಬ್ಬರ.
‘ಮೂಡ ಬೆಳಗಲು ಹೊರಟೆನಂದು
ಓಡಿ ಹಿಂದೆಯೆ ಬರಲು ಮರಿಯು
ಕೂಡಲಪ್ಪುತ ಮುತ್ತನಿಟ್ಟು
ಕರೆದು ತಂದೆನು ಊರಿಗೆ.
‘ಬಂಧುಬಳಗಗಳಿಲ್ಲವೆನಗೆ
ಕಂದನೀ ಮರಿ-ಕಳೆಯಲಾರೆ’
ಎಂದ. ಗೌಡನ ಕಣ್ಣು ಹನಿತುದು
ಮರಿಯ ಹಗ್ಗವ ಹಿಡಿಯಲು.
ಹಗ್ಗವೆಳೆದೆನು; ಕುನ್ನಿ ಬಾರದು
ಸಗ್ಗದೆನ್ನಯ ಸವಿಯ ನುಡಿಗೆ.
ಹಗ್ಗ ಸಡಿಲಿಸಿ ಬಿಟ್ಟೆನದನು
ಕುರುಬ ತಬ್ಬಿದ ಸೊಣಗನ!
ವರುಷ ನೂರರ ಕರುಣೆ ಬಿಗಿವುದೆ
ಕುರುಬನಿರುಳೊಳು ಬಿಗಿದ ಕಟ್ಟ!
ಮರಿಯ ನಡತೆಗೆ ಕೋಪಗೊಳ್ವುದೆ?
ಕರುಣೆ ಒಲುಮೆಗೆ ಸಾಟಿಯೆ?
ಒಲಿದರಿರವಿನ ಬಗೆಗಳೆರಡೆ?
ಒಲುಮೆಗಡ್ಡಲೆ ಕುಲದ ಹೆಮ್ಮೆ?
ಒಲುಮೆಬೆಸುಗೆಯ ಸುಖದ ಸವಿಯನು
ತಿಳಿಯದೇ ಬಡಜಂತುವು!
ಕಣ್ಣ ನೀರೊಳು ತೊಳೆದೆನಂದು
ಜನ್ಮ ದುನ್ನತಿ ಹೆಮ್ಮೆ ಕೊಳೆಯ-
ನನ್ನ ಒಲುಮೆಗೆ ಅಡ್ಡ ಬಂದ
ಕರುಣೆ ಹಾಯದ ಬಿಂಕವ.
*****