ಪ್ರತಿಯೊಬ್ಬರು ಬಾಳಿನಲ್ಲಿ ಸುಖವಾಗಿ ಬಾಳಬೇಕೆನ್ನುತ್ತಾರೆ. ಇದು ಮಾನವನ ಸಹಜ ಪ್ರವೃತ್ತಿ. ‘ಸುಖ’ ಎನ್ನುವ ಪದವೇ ಸದಾ ನಮಗೆ ಜೀವನದ ಹೊಯ್ದಾಟಗಳಿಗೆ ಕಾರಣವಾಗುತ್ತದೆ. ಈಗ ಪ್ರತಿಯೊಬ್ಬರಿಗೂ ಕೇಳಿದರೂ ಸುಖದ ಅರ್ಥ ಬೇರೆ ಬೇರೆಯಾಗಿ ಅರ್ಥೈಸುತ್ತಾರೆ. ಆರೋಗ್ಯವಾಗಿರುವುದೇ ಸುಖವೆಂದು ಕೆಲವರೆಂದರೆ, ಹಣ ಗಳಿಕೆ ಮಾಡಿ ಚಿಂತೆಯಿಂದ ದಿನನಿತ್ಯ ಬದುಕುವುದೇ ಸುಖ ಎನ್ನುತ್ತಾರೆ ಹಲವರು. ಮಕ್ಕಳು ಜ್ಞಾನಾರ್ಜನೆ ಮಾಡಿಕೊಂಡು ನೌಕರಿ ಮಾಡಿಕೊಂಡು ನೆಮ್ಮದಿಯಿಂದ ಇದ್ದರಾಯಿತು ಅದೇ ಸುಖ ಎನ್ನುತ್ತಾರೆ. ಹೀಗೆ ಸುಖದ ಅರ್ಥಗಳು ಕಾಲ ಕಾಲಕ್ಕೂ ಬದಲಾಗುತ್ತ ಸಾಗುತ್ತವೆ.
ಹಾಗಾದರೆ ಸುಖ ಯಾವುದು! ಸಿರಿವಂತರಾಗಿದ್ದರೆ ಅಥವಾ ಆರೋಗ್ಯದಿಂದ ಬಾಳಿದರೆ ಅಥವಾ ಮಕ್ಕಳು ಮೊಮ್ಮಕ್ಕಳ ನಡುವೆ ನಗುತ್ತ ಬಾಳುವುದೇ ಹಾಗಾಗದಿದ್ದರೆ ಒಂದು ದೊಡ್ಡ ಬಂಗ್ಲೆ ಕಟ್ಟಿಕೊಂಡು, ಕಾರು ಖರೀದಿಸಿ ಇನ್ನೇನೋ ಆಸೆಗಳಿಗೆ ತೃಪ್ತಿಪಡಿಸಿ ಬಾಳುವುದು ಸುಖವೇ! ಎಲ್ಲಕ್ಕು ಉತ್ತರ ‘ಇಲ್ಲ’ ಎಂಬುದೇ ತಿಳಿಯುತ್ತದೆ.
ಗೌತಮ ಬುದ್ಧರು ‘ಆಸೆಯೆ ದುಃಖಕ್ಕೆ ಕಾರಣ’ ಎಂದರು. ಅಂದರೆ ದಿನನಿತ್ಯ ಸಾವಿರಾರು ಆಸೆಗಳು ನಮ್ಮ ಕಲ್ಪನೆಯಲ್ಲಿ ಹುಟ್ಟುತ್ತವೆ. ಅಂಥ ಹುಟ್ಟಿಕೊಂಡ ಆಸೆಗಳಿಗೆ ಕಟ್ಟಿಕೊಡುತ್ತ ಸಾಗಿದರೆ ನಾವೆಂದೂ ಸುಖಿಗಳಾಗುವುದಿಲ್ಲ. ‘ಎಲ್ಲರ ಮನೆಯ ದೋಸೆ ತೂತು’ ಎಂಬಂತೆ ಎಲ್ಲರೂ ಒಂದಿಲ್ಲ ಒಂದು ತೊಂದರೆಗಳಿಗೆ ಸಿಲುಕಿ ಸುಖದಿಂದ ವಂಚಿತರಾಗಿದ್ದಾರೆ. ಈ ಲೋಕದಲ್ಲಿ ಬಾಳುವ ಯಾರೂ ಸುಖಿಗಳಲ್ಲ. ರಾಜ ಮಹಾರಾಜರಿಂದ ಜನಸಾಮಾನ್ಯನವರೆಗೂ ಏನೋ ಅತೃಪ್ತಿಗಳು ಕಾಡುತ್ತಿವೆ.
ಆ ಅತೃಪ್ತಿಗಳೇ ಸುಖದ ವೈರಿಗಳಾಗಿ ನಮ್ಮನ್ನು ನಿತ್ಯ ಶೋಕದ ಪ್ರಪಾತಕ್ಕೆ ತಳ್ಳುತ್ತಿವೆ. ಸುಖವೆಂಬುದೊಂದು ಮರಿಚೀಕೆಯಾಗಿದೆ. ನಾವು ಅದನ್ನು ಹಿಡಿಯಲು ಓಡುತ್ತಿರುವಾಗಲೆ ಅದೂ ನಮಗೆ ನಿಲುಕದೇ ಹಾಗೇ ದೂರ ಓಡುತ್ತದೆ. ಅಂತಲೇ ಅರಿಸ್ಟಾಟಲ್ ‘ಸುಖದ ಪ್ರಾಪ್ತಿಗೆ ವಸ್ತುಗಳು ಸಂಗ್ರಹಿಸಿದಷ್ಟು ದುಃಖವು ಅಧಿಕವಾಗುತ್ತದೆ’ ಎಂದರು.
ಆದ್ದರಿಂದ ಸಂತರು, ಶರಣರು ನೀನು ಸುಖಕ್ಕೆ ಅಪೇಕ್ಷೆ ಪಡದೇ ಜೀವನದಲ್ಲಿ ಬಂದುದೆಲ್ಲಕ್ಕೂ ನೆಮ್ಮದಿಯಿಂದ ಸ್ವೀಕರಿಸಿದರೆ ಅದೇ ಸುಖವೆಂದು ಅರಹುತ್ತಾರೆ. ಅದೇ ಸಾರ್ಥಕ ಮೈಲಿಗಲ್ಲಾಗುತ್ತದೆ.
*****