ಹೆದರಿಕೆಯೆನ್ನುವುದು ಗೆಲುವಿನ, ಯಶಸ್ಸಿನ, ಮಾನಸಿಕ ಶಾಂತಿಯ ಮತ್ತು ಸುಖ ಜೀವನದ ಶತ್ರು. ಹೆದರುವವನು ಏನನ್ನೂ ಸಾಧಿಸಲಾರ. ಶಾಂತಿಯಿಂದಿರಲಾರ. ಜೀವನದ ಯಾವ ಘಟ್ಟದಲ್ಲೂ ಮುನ್ನುಗ್ಗಲಾರ.
ಸುತ್ತಲಿನ ಆಘಾತಕರ ಪರಿಸರಗಳಿಗೆ, ಅನಿರೀಕ್ಷಿತ ಆಗು-ಹೋಗುಗಳಿಗೆ, ಭವಿಷ್ಯದಲ್ಲಿ ಕಾಣಿಸಬಹುದಾದ ನೋವಿಗೆ, ಮುಂದೆ ಬರಬಹುದಾದ ಕಷ್ಟ ನಷ್ಟಗಳಿಗೆ ಸಾಮಾನ್ಯ ಹಾಗೂ ಮೊತ್ತ ಮೊದಲ ಪ್ರತಿಕ್ರಿಯೆ ಹೆದರಿಕೆ.
ಹೆದರಿಕೆ ಅಂದರೆ ಏನು? ತನಗೇನಾದರೂ ಆಗುವುದೋ ತನ್ನ ಅಹಂಗೆ ಏನಾದರೂ ಧಕ್ಕೆಯಾಗುವುದೋ ಎನ್ನುವ ಕಲ್ಪಿತ ಭಯವೇ ಹೆದರಿಕೆ. ಹೆದರಿಕೆ ಸುತ್ತುವುದೇ ‘ತನ್ನ’ ಸುತ್ತ. ಅದೊಂದು ನಿಷೇಧಾತ್ಮಕ ಫೀಲಿಂಗ್-ಭಾವ. ಶುದ್ಧ ಕಾಲ್ಪನಿಕ ಮಾನಸಿಕ ಸ್ಥಿತಿ. ಹೆದರಿಕೆ ಎನ್ನುವುದು ದೈಹಿಕ ಅನುಭವ ಅಲ್ಲವಾದರೂ ಹೆದರಿಕೆ ಆದಾಗ ದೈಹಿಕವಾಗಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಹೆದರಿಕೆ ಎನ್ನುವ ಕಾಲ್ಪನಿಕ ಪರಿಕಲ್ಪನೆಯಿಂದ ಉಂಟಾಗುವ ಮಾನಸಿಕ ತುಮುಲ ನೇರ ಪ್ರಭಾವ ಬೀಳುವುದು ಹೃದಯದ ಮೇಲೆ. ಹೆದರಿಕೆಯ ಭಾವ ಆವರಿಸಿದ ಕೂಡಲೇ ಹೃದಯದ ಬಡಿತದ ವೇಗ ಜಾಸ್ತಿಯಾಗುತ್ತದೆ. ತಾಳ ತಪ್ಪುತ್ತದೆ. ಹೃದಯದೊಳಗೆ ನಗಾರಿ ಬಡಿದಂತಾಗುತ್ತದೆ. ಬೆವರೊಡೆಯುತ್ತದೆ. ಕೈ, ಕಾಲಿನ ಶಕ್ತಿ ಕುಂದುತ್ತದೆ, ನಡುಕ ಉಂಟಾಗುತ್ತದೆ. ಮನಸ್ಸು ಯೋಚಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ. ಗೊತ್ತಿರುವುದೆಲ್ಲ ಮರೆತು ಹೋಗುತ್ತದೆ. ಕೆಲವೊಮ್ಮೆ ಕಣ್ಣುಕತ್ತಲೆಯೂ ಬರುತ್ತದೆ. ಪರಿಸ್ಥಿತಿಯನ್ನು ಎದುರಿಸಲೇ ಸಾಧ್ಯವಾಗದಷ್ಟು ಕಂಗೆಡುವಂತೆ ಮಾಡುತ್ತದೆ.
ಹೆದರಿಕೆ ಎನ್ನುವುದು ನಮ್ಮ ದೈಹಿಕ ಶಕ್ತಿಯನ್ನೇ ಕುಗ್ಗಿಸುವ ಅನಾವಶ್ಯಕವಾಗಿ ಬೆಳೆಯಗೊಡುವ ನಿಷೇಧಾರ್‍ಥಕ (negative) ಭಾವನೆ.
ಅಮೆರಿಕಾದ ಕವಿ ಹಾಗೂ ತತ್ವಜ್ಞಾನಿ ರಾಲ್ಫ್ ವಾಲ್ಡೊ ಎಮರ್‌ನ್ ಒಂದು ಕಡೆ ಹೇಳುತ್ತಾನೆ`fear defeat more people than any other thing in this world’ ಈ ಜಗತ್ತಿನ ಹೆಚ್ಚಿನ ಜನರನ್ನು ಹೆದರಿಕೆ ಸೋಲಿಸಿರುವಷ್ಟು ಇನ್ಯಾವ ಸಂಗತಿಯೂ ಸೋಲಿಸಿರಲಿಕ್ಕಿಲ್ಲ.
ನೋವಿನ ಹೆದರಿಕೆ, ಸಾವಿನ ಹೆದರಿಕೆ, ಕಷ್ಟದ ಹೆದರಿಕೆ, ನಷ್ಟದ ಹೆದರಿಕೆ, ಸೋಲಿನ ಹೆದರಿಕೆ, ಪರೀಕ್ಷೆಯ ಹೆದರಿಕೆ, ಸ್ಪರ್‍ಧೆಯ ಹೆದರಿಕೆ, ಯಾರಾದರೂ ಏನಾದರೂ ಹೇಳುವರೋ ಎನ್ನುವ ಹೆದರಿಕೆ, ಅನಿರೀಕ್ಷಿತ ಆಗುಹೋಗುಗಳ ಹೆದರಿಕೆ ಹೀಗೆ ಒಂದಲ್ಲ ಒಂದು ಹೆದರಿಕೆ ಮನುಷ್ಯನನ್ನು ಯಾವಾಗಲೂ ಕಾಡುತ್ತಿರುತ್ತದೆ. ಈ ರೀತಿಯ ಹೆದರಿಕೆಗಳು ಅವಶ್ಯಕವೇ? ಯಾಕೆ ನಾವು ಜೀವನದ ಕರಾಳ ಸತ್ಯಗಳನ್ನು ಎದುರಿಸಲು ಹೆದರಬೇಕು? ಹೆದರಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಸಾಧ್ಯವೇ? ಏನನ್ನಾದರೂ ಎದುರಿಸುವ ಮನೋಸ್ಥೈರ್‍ಯ ಬೆಳೆಸಿಕೊಳ್ಳಬೇಕಲ್ಲದೇ ಹೆದರಿಕೆಯನ್ನು ಹುಟ್ಟುಹಾಕಲು ಬಿಟ್ಟು ಅದನ್ನು ಬೆಳೆಯಗೊಡುವುದರಿಂದ ಏನೂ ಪ್ರಯೋಜನವಿಲ್ಲ. ನಮ್ಮ ಹೆಚ್ಚಿನ ಸೋಲುಗಳಿಗೆ ಕಾರಣ ಹೆದರಿಕೆ.
ಹೆದರಿಕೆ ಯಾವಾಗ ಹೇಗೆ ಹುಟ್ಟುತ್ತದೆ?
ಹುಟ್ಟಿನಿಂದಲೇ ಹೆದರಿಕೆ ಇರುವುದಿಲ್ಲ. ಚಿಕ್ಕ ಮಕ್ಕಳಲ್ಲಿ ಹೆದರಿಕೆಯ ಭಾವನೆಯೇ ಇರುವುದಿಲ್ಲ. ಬೆಂಕಿ ಮುಟ್ಟಿದರೆ ಸುಡುವುದೆನ್ನುವ, ಬಿದ್ದರೆ ಗಾಯವಾಗುವುದೆನ್ನುವ, ಹುಲಿಯ ಹತ್ತಿರ ಹೋದರೆ ತಿನ್ನುವುದೆನ್ನುವ, ತುಂಟತನ ಮಾಡಿದರೆ ಹೊಡೆಯುವರೆನ್ನುವ ಯಾವ ಹೆದರಿಕೆಯೂ ಅವರಿಗಿರುವುದಿಲ್ಲ. ಹಾಗಾಗಿ ಮಕ್ಕಳಿಗೆ ಏನೂ ಮಾಡಲು ಭಯವಿಲ್ಲ. ಸದಾ ತಿಳಿಯದೆ ಪುಟಿಯುವ ಉತ್ಸಾಹ ಮಕ್ಕಳಲ್ಲಿರುತ್ತದೆ. ಮುಂದೆ ಅವರು ಮಾಡುವ ತಪ್ಪುಗಳಿಗೆ ಹಿರಿಯರು ಹೊಡೆಯುವಾಗ, ಗದರಿಸುವಾಗ, ಪುನೊಮ್ಮೆ ಆ ತಪ್ಪುಗಳನ್ನು ಮಾಡಿದರೆ ಹೊಡೆಯುವರೆನ್ನುವ ಹೆದರಿಕೆ ಹುಟ್ಟಿಕೊಳ್ಳುತ್ತದೆ. ಬೆಳೆದಂತೆ ಮಾಡುವ ತಪ್ಪುಗಳು, ತುಂಬಿಕೊಳ್ಳುವ ದೌರ್‍ಬಲ್ಯಗಳು ಹೆದರಿಕೆಯ ಹುಟ್ಟಿಗೆ ಕಾರಣವಾಗುತ್ತದೆ.
ಮಗು ಊಟ ಮಾಡದಿದ್ದರೆ, ಮಲಗದಿದ್ದರೆ ನಾವು ಗುಮ್ಮ ಬರುತ್ತಾನೆ ಎಂದು ಹೆದರಿಸುತ್ತೇವೆ. ಗುಮ್ಮನ ಹೆದರಿಕೆಗೆ ಮಗು ಊಟ ಮಾಡುತ್ತದೆ, ಕಣ್ಣು ಮುಚ್ಚಿ ಮಲಗುತ್ತದೆ. ಗುಮ್ಮ ಎಂದರೆ ಏನು ಎನ್ನುವ ಪ್ರಶ್ನೆ ಅದರ ಮನಸ್ಸಿನಲ್ಲಿ ಇರುವುದಿಲ್ಲ. ಬರೇ ಹೆದರಿಕೆಯಷ್ಟೇ ಉಳಿದು ಬಿಡುತ್ತದೆ. ಏನಾದರೂ ಉಪದ್ರವ ಮಾಡಿದರೆ, ಸರಿಯಾಗಿ ಓದದಿದ್ದರೆ ಅಪ್ಪನಿಗೆ ಹೇಳುತ್ತೇನೆ ಎಂದು ಹೆದರಿಸಿ ಅಪ್ಪ ಅಂದರೆ ಹೆದರಿಕೆ ಹುಟ್ಟಿಸುತ್ತೇವೆ. ಮಕ್ಕಳ ಮನದಲ್ಲಿ ಹೆದರಿಕೆ ಎನ್ನುವ ಭಾವವನ್ನು ಹುಟ್ಟು ಹಾಕಲು ಇದಕ್ಕಿಂತ ಹೆಚ್ಚಿನ ಕಾರಣ ಬೇಕೇ? ಆ ಹೆದರಿಕೆಯ ಭಾವ ಮಕ್ಕಳ ಮನದಲ್ಲಿ ಬೇರೂರಿ ನಿಲ್ಲುತ್ತದೆ. ಅದಕ್ಕಿಂತ ಹೇಗೆ ಸರಿಯಾಗಿ ಊಟ ಮಾಡಿದರೆ ದೃಢಕಾಯನಾಗಿ ಬೆಳೆಯಬಹುದು, ಯಾವ ಆಟವನ್ನಾದರೂ ಆಡಬಹುದು ಎನ್ನುವುದಕ್ಕೆ ಉದಾಹರಣೆಗಳನ್ನು ಕೊಡುತ್ತಾ ಊಟ ಮಾಡಿಸಿದರೆ ಉತ್ತಮವಲ್ಲವೇ? ನಿದ್ದೆಗಾಗಿ ಮಕ್ಕಳ ಮನಸ್ಸಿಗೆ ಮುದ ನೀಡುವಂತಹ ಕಥೆಗಳನ್ನು ಹೇಳಿದರೆ ಮಕ್ಕಳು ಆರಾಮವಾಗಿ ನಿದ್ದೆ ಮಾಡುತ್ತಾರೆ. ಮಕ್ಕಳ ಮನದಲ್ಲಿ ಹೆದರಿಕೆಯ ಭಾವವನ್ನು ಹುಟ್ಟು ಹಾಕುವುದಕ್ಕಿಂತ ಧೈರ್‍ಯ ತುಂಬುವ, ಆತ್ಮವಿಶ್ವಾಸ ತುಂಬುವ ಭಾವನೆಗಳನ್ನು ತುಂಬಿದರೆ ಮಕ್ಕಳು ಹೆದರಿಕೆಯನ್ನು ಮೆಟ್ಟಿ ಬದುಕಲು ಕಲಿಯಬಹುದು. ಮಕ್ಕಳ ಮನದಲ್ಲಿ ಹೆದರಿಕೆ ಎನ್ನುವ ದೌರ್‍ಬಲ್ಯವನ್ನು ಹುಟ್ಟು ಹಾಕುವಂತಹ ಭಾವನೆಗಳನ್ನು ತುಂಬಲೇ ಬಾರದು.
ಚಿಕ್ಕಂದಿನಿಂದಲೇ ಮಕ್ಕಳಿಗೆ ಕಲಿಸುವ ನೀತಿಪಾಠ- ದೇವರಿಗೆ ಹೆದರಬೇಕು, ಹಿರಿಯರಿಗೆ, ಗುರುಗಳಿಗೆ ಹೆದರಬೇಕು ಎಂದು ತಪ್ಪು ಮಾಡಿದರೆ ದೇವರು ಶಿಕ್ಷಿಸುತ್ತಾರೆ, ಗುರು-ಹಿರಿಯರು ಶಿಕ್ಷಿಸುತ್ತಾರೆ ಎನ್ನುವ ಭಯವನ್ನು ಮಕ್ಕಳಲ್ಲಿ ಹಿರಿಯರೇ ಹುಟ್ಟು ಹಾಕುತ್ತಾರೆ. ಇದರಿಂದ ಮಕ್ಕಳು ದೇವರಿಗೆ ಹೆದರುವುದಲ್ಲ, ಗುರುಹಿರಿಯರಿಗೆ ಹೆದರುವುದಲ್ಲ ಶಿಕ್ಷೆಗೆ ಹೆದರುತ್ತಾರೆ. ಶಿಕ್ಷೆಯ ಹೆದರಿಕೆಯನ್ನು ಹುಟ್ಟಿಸುವುದಕ್ಕಿಂತ ದೇವರ, ಗುರು-ಹಿರಿಯರ ಮೇಲೆ ಭಕ್ತಿ, ಗೌರವದ ಭಾವ ಹುಟ್ಟಿಸಿ, ಯಾವುದು ತಪ್ಪು ಯಾವುದು ಸರಿ ಎನ್ನುವ ಅರಿವನ್ನು ಉಂಟು ಮಾಡಿದರೆ, ಅವರವರ ಮನಃಸಾಕ್ಷಿಗೆ ಸರಿಯಾಗಿ ನಡೆಯುವಂತೆ ಹೇಳಿಕೊಟ್ಟರೆ ಹೆದರಿಕೆಯ ಭಾವನೆಗಳು ಹುಟ್ಟುವುದು ಸಾಧ್ಯವಿಲ್ಲ.
ಸುಳ್ಳು ಹೇಳುವುದು ಒಂದು ದೌರ್‍ಬಲ್ಯ, ಸುಳ್ಳಿನ ಸುತ್ತ ಯಾವಾಗ ಸಿಕ್ಕಿಬೀಳುತ್ತೇವೋ ಎನ್ನುವ ಹೆದರಿಕೆ ಸುತ್ತಿಕೊಂಡಿರುತ್ತದೆ. ಸತ್ಯವನ್ನೇ ಹೇಳುವ ದೃಢ ನಿಶ್ಚಯ ಮಾಡಿಕೊಂಡರೆ ಅಲ್ಲಿ ಹೆದರಿಕೆಗೆ ಅವಕಾಶವೇ ಇಲ್ಲ. ದೌರ್‍ಬಲ್ಯಗಳು ಹೆಚ್ಚಾಗಿದ್ದರೆ ಹೆದರಿಕೆಗಳೂ ಹೆಚ್ಚಾಗಿರುತ್ತವೆ. ದೌರ್‍ಬಲ್ಯಗಳನ್ನು ಗೆಲ್ಲುತ್ತಾ ಬಂದರೆ ಹೆದರಿಕೆಗೆ ಸ್ಥಾನವಿರುವುದಿಲ್ಲ. ಸರಿಯಾಗಿ ಓದಿ ಪರೀಕ್ಷೆಗೆ ಹೋದರೆ ಪರೀಕ್ಷೆಯ ಹೆದರಿಕೆ ಯಾಕೆ? ಸರಿಯಾದ ಸಾಧನೆ ಮಾಡಿದರೆ ಸೋಲಿನ ಹೆದರಿಕೆ ಯಾಕೆ? ಪ್ರತಿಯೊಂದು ಸೋಲೂ ಗೆಲುವಿನ ಕಡೆಗೆ ಸೋಪಾನಗಳು ಎನ್ನುವ ಅರಿವಿದ್ದರೆ ಸ್ಪರ್‍ಧೆಯ ಹೆದರಿಕೆ ಯಾಕೆ? ಮಾಡುವ ಕೆಲಸಗಳು ಮನಃಸಾಕ್ಷಿಗೆ ಒಪ್ಪುವಂತಹದಾಗಿದ್ದರೆ ಯಾರು ಏನನ್ನುವರೋ ಎನ್ನುವ ಹೆದರಿಕೆ ಯಾಕೆ? ಹುಟ್ಟಿನಷ್ಟೇ ಸಾವೂ ಸಹಜ ಎನ್ನುವುದನ್ನು ತಿಳಿದುಕೊಂಡರೆ ಸಾವಿನ ಹೆದರಿಕೆ ಯಾಕೆ? ಮಾಡುವ ಕೆಲಸಗಳಿಂದ ಮನಸ್ಸಿಗೆ ಹಿಂಸೆಯಾಗದಿದ್ದರೆ, ಬೇರೆಯವರ ಅಭಿಪ್ರಾಯಗಳಿಗೆ ತಲೆಕೆಡಿಸಿಕೊಳ್ಳುವುದು ಯಾಕೆ?
ಹೆದರಿಕೆಯನ್ನು ಜಯಿಸಲು ಮೊದಲ ಹೆಜ್ಜೆ ಹೆದರಿಕೆಯನ್ನು ಒಪ್ಪಿ ಸ್ವೀಕರಿಸುವುದು. ಯಾವುದರಿಂದ ಹೆದರಿಕೆಯಾಗುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳುವ ಪ್ರಯತ್ನ ಮಾಡಿದಾಗ ಹೆದರಿಕೆಯ ಮೂಲ ಕಾರಣಗಳನ್ನು ವಿಶ್ಲೇಷಿಸುವುದು ಸುಲಭವಾಗುತ್ತದೆ. ವಿಶ್ಲೇಷಿಸುತ್ತ ಹೋದ ಹಾಗೆ ಹೆದರಿಕೆ ಕಾರಣವಿಲ್ಲದ್ದು, ಅರ್‍ಥವಿಲ್ಲದ್ದು ಎನ್ನುವ ಅರಿವಾಗುತ್ತದೆ. ಯಾವುದಕ್ಕೆ ಹೆದರುತ್ತೇವೋ ಅದನ್ನು ಪದೇ ಪದೇ ಯೋಚಿಸಿದಾಗ ಆ ಹೆದರಿಕೆಯಿಂದ ಹೊರಬರುವುದು ಸುಲಭವಾಗುತ್ತದೆ. ಉದಾಹರಣೆಗೆ ಕೆಲವರಿಗೆ ಕತ್ತಲೆಯೆಂದರೆ ಹೆದರಿಕೆ, ಕತ್ತಲಾದ ನಂತರ ಮನೆಯಿಂದ ಹೊರಕ್ಕೆ ಕಾಲಿಡಲೇ ಹೆದರುತ್ತಾರೆ. ನಾಲ್ಕು ದಿನ ತಪ್ಪದೇ ಕತ್ತಲೆಯಲ್ಲೇ ಹೊರಗೆ ಹೋಗಿ ಬ೦ದರೆ ಐದನೇ ದಿನ ಹೆದರಿಕೆ ಮಾಯವಾಗಿರುವುದು ಗಮನಕ್ಕೆ ಬರುತ್ತದೆ. ಯಾವುದರ ಹೆದರಿಕೆ ಇದೆಯೋ ಅದನ್ನು ಪದೇ ಪದೇ ಮಾಡಿದಾಗ ಆ ಹೆದರಿಕೆಯಿಂದ ಹೊರ ಬರುವುದು ಸುಲಭ ಎನ್ನುವುದರ ಅನುಭವ ಎಲ್ಲರಿಗೂ ಒಂದಲ್ಲ ಒಂದು ಮೊದಲ ಸಲ ಆಗೇ ಆಗಿರುತ್ತದೆ. ಉದಾಹರಣೆಗೆ ಕಳ್ಳನಿಗೆ ಮೊದಲ ಸಲ ಕಳ್ಳತನ ಮಾಡುವಾಗ ಹೆದರಿಕೆಯಾದರೂ ಪದೇ ಪದೇ ಅದನ್ನೇ ಮಾಡಿದಾಗ ಅಲ್ಲಿ ಹೆದರಿಕೆಯ ಭಾವನೆಯೇ ಇರುವುದಿಲ್ಲ. ಕೊಲೆಗಡುಕನಿಗೂ ಹಾಗೇ.
ಹೆದರಿಕೆ ಎನ್ನುವ ಮಾನಸಿಕ ದೌರ್‍ಬಲ್ಯವನ್ನು ಧೈರ್‍ಯವೆನ್ನುವ ಟಾನಿಕ್‌ನಿಂದ ಅಳಿಸುವುದು ಸಾಧ್ಯ. ಇದರಿಂದಾಗಿಯೇ ತೇನ್‌ಸಿಂಗ್ ಮತ್ತು ಹಿಲೇರಿ ಹಿಮಾಲಯ ಶಿಖರವನ್ನೇರುವುದು, ಕೊಲಂಬಸ್ ಸಮುದ್ರ ಸುತ್ತಿ ಭಾರತಕ್ಕೆ ಬರುವುದು, ಸಾಮಾನ್ಯ ಯೋಧನೊಬ್ಬ ಹಿಟ್ಲರ್‌ನೆಂದು ಲೋಕ ಪ್ರಸಿದ್ಧನಾಗುವುದು, ಮೋಹನದಾಸ ಕರಮಚಂದ ಮಹಾತ್ಮಾಗಾಂಧಿಯಾಗುವುದು, ಲಕ್ಷ್ಮೀಬಾಯಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಯಾಗುವುದು, ಓಬವ್ವ ಒನಕೆ ಓಬವ್ವಳಾಗುವುದು ಸಾಧ್ಯವಾಗಿದೆ. ಇಂತಹ ಹಲವಾರು ಚಾರಿತ್ರಿಕ ಉದಾಹರಣೆಗಳನ್ನು ಕೊಡಬಹುದು. ಈಗಲೂ ನಮ್ಮ ಸುತ್ತು ಮುತ್ತಲೂ ಹೆದರಿಕೆಯನ್ನು ಜಯಿಸಿದಂತವರು ಬಹಳಷ್ಟು ಜನರಿದ್ದಾರೆ. ಸಾಮಾನ್ಯರನೇಕರು ಅಸಾಮಾನ್ಯರಾಗಿರುವುದು ಹೆದರಿಕೆಯನ್ನು ಜಯಿಸಿರುವುದರಿಂದಲೇ ಎನ್ನುವುದಕ್ಕೆ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ನಮ್ಮ ಸುತ್ತಲೂ ಇವೆ. ಅವರೆಲ್ಲ ಸುತ್ತಲಿನ ಪರಿಸರಗಳಿಗೆ, ಅಡೆ-ತಡೆಗಳಿಗೆ, ಜನರಿಗೆ ಹೆದರಿದ್ದರೆ ಯಾವುದೇ ಮಹತ್ಕಾರ್‍ಯಗಳನ್ನು ಮಾಡಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ.
ಹೆದರಿಕೆ ಎನ್ನುವುದು ನಮ್ಮೊಳಗೆ ನಾವೇ ತುಂಬಿಸಿಕೊಳ್ಳುವ ನಿಷೇಧಾತ್ಮಕ ಭಾವನೆಯಾಗಿರುವುದರಿಂದ ಸ್ವಲ್ಪ ಪ್ರಯತ್ನದಿಂದ ಅದನ್ನು ಜಯಿಸುವುದು ಸಾಧ್ಯ. ಹೆದರಿಕೆಯ ಬಗ್ಗೆ ವಿಪರೀತ ಯೋಚಿಸಿ ಕಂಗೆಡುವ ಅಗತ್ಯವಿಲ್ಲ. ಯೋಚಿಸಿದಷ್ಟೂ ಹೆದರಿಕೆಯ ತೀವ್ರತೆ ಹೆಚ್ಚಾಗುತ್ತದೆ. ಏನಾಗಬೇಕೋ ಅದೆಲ್ಲಾ ಆಗಿಯೇ ಆಗುತ್ತದೆ ಅದನ್ನು ತಡೆಯುವುದು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಂಡಾಗ ಹೆದರಿಕೆಯನ್ನು ಜಯಿಸುವುದು ಸುಲಭ ಸಾಧ್ಯವಾಗುತ್ತದೆ. ಆಗ ಯಾವ ನೋವು, ಕಷ್ಟ, ನಷ್ಟಗಳೂ ನಮ್ಮನ್ನು ಕಂಗೆಡಿಸುವುದಿಲ್ಲ.
ಆತ್ಮವಿಶ್ವಾಸವನ್ನು ಗಟ್ಟಿಯಾಗಿಸಿಕೊಂಡು, ತನ್ನಲ್ಲಿ ನಂಬುಗೆಯಿಟ್ಟು, ತನ್ನ ಮನಃಸಾಕ್ಷಿಗೆ ಸರಿಯಾಗಿ ನಡೆದರೆ ಹೆದರಿಕೆ ಹತ್ತಿರ ಸುಳಿಯದು. ಕಷ್ಟ, ನಷ್ಟ; ಸೋಲು, ಗೆಲುವು; ಹುಟ್ಟು, ಸಾವು ಇವೆಲ್ಲ ಜೀವನದ ರೀತಿಯೇ ಆಗಿರುವಾಗ ಅವುಗಳಿಗೆ ಹೆದರಿ, ನಾವು ಜೀವಿಸಬೇಕಾಗಿರುವ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಹೆದರಿಕೆಯನ್ನು ಜಯಿಸಿಕೊಂಡು ಜೀವಿಸಲು ಕಲಿತಾಗ ಮನುಷ್ಯ ಸಾಧಕನಾಗುತ್ತಾನೆ. ವಿಜಯಿಯಾಗುತ್ತಾನೆ.
ಮಾಡುವ ಕೆಲಸ ಸರಿ ಎನ್ನುವ ಆತ್ಮವಿಶ್ವಾಸವಿದ್ದರೆ ಯಾರಿಗೂ ಯಾವುದಕ್ಕೂ ಹೆದರುವ ಅವಶ್ಯಕತೆಯೇ ಇಲ್ಲ. ಹೆದರಿಕೆ ನಮ್ಮನ್ನು ಸೋಲಿಸುವುದಲ್ಲದೆ ಮತ್ತೇನೂ ಮಾಡುವುದಿಲ್ಲ. ಮತ್ತೇಕೆ ಹೆದರಬೇಕು?
*****
(ಸ್ನೇಹ ಸಂದೇಶ)