ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ-
ಬಾಳ್ವೆ ಸಂಗರರಂಗವೆಂಬುದಂ ಮರೆದು,
ಸಿಂಗರಂ ಗೆತ್ತು ಶಸ್ತ್ರಂಗಳಂ ಮುರಿದು
ವಿಧಿಗೆರೆದು ಕಡೆದೀವೆವಳಲ ಸಂಕಲೆಯಂ.
ಕಾದದೊಡೆ ಬಾಳೇಕೆ? ಕಾದೆನೆನೆ ನಿನ್ನ
ಸಂಧಿಪುದೊ? ಬಂಧಿಪುದೊ? ಬಗೆಯ ವಿಧಿಯದರಿಂ
ಬಿಳಿಯ ಪಳವಿಗೆಯಳವೆ? ಬಾಳನೆತ್ತುದರಿಂ
ಪಡೆವಳಂ ತಾನೆ, ಪಡೆ ತಾನೆ, ನಡೆ ಮುನ್ನ!
ಮಾರಾಂತ ವಿಧಿಗೀಯಲೇಂ ತನ್ನ ಬಿಲ್ಲಾ?
ತನ್ನಾಯುಧದಿ ತಾನೆ ಮಡಿವೆಯೇನಿಂತು?
ಹುಟ್ಟೊಡನೆ ತೊಟ್ಟ ತಾನೆಂಬಂಬನಾಂತು
ನಿನ್ನ ಹೆಸರಿಂ ಕೊರೆಯ ವಿಧಿಯೆದೆಯ ಕಲ್ಲಾ!
ನಿನ್ನವೆ ಜಯಾಜಯಂ? ಕಾದುವುದೆ ನಿನ್ನ-
ಕರೆಯಂಬ ಗುರಿಗೊಂಬ ವಿಧಿ ಕಾಂಬ ಮುನ್ನ!
*****