ಜೀವನದೀ ಮಧುಮಾಸಂ
ಬತ್ತುತ ಬಂತು,
ಮನಸಿನ ಮಧುರವಿಕಾಸಂ
ನನೆಯೊಳೆ ಸಂತು;
ಮುಸುರಿದ ಮಕರಂದಪಾನ
ಮೊದವದೆದೆಯ ಭ್ರಮರಗಾನ
ಮೆಚ್ಚರಲೆಂತು? ೭
ಮನೆಗೆಯ್ದಕ್ಕರೆಯ ಪಿಕಂ
ಪಾರಿದುದೆಲ್ಲಿ?
ಗೂಡುಗೊಂಡ ಹಿಂಡು ಶುಕಂ
ಕಾಣಿಸವಿಲ್ಲಿ!
ಅಳಲ ಕಣಜವಿನ್ನು ಸಾಗೆ,
ಹಗಲುದ್ದಕೆ ಮರುಗೆ ಗೂಗೆ,
ಚೀರ್ವುದು ಹಲ್ಲಿ ೧೪
ನಡುಚೈತ್ರದಿ ಮಸಗೆ ಗ್ರೀಷ್ಮ,
ಬೇಯದೆ ಮನಸು?
ಮಗಚದೆ ಮೃಗಜಲದೊಳೂಷ್ಮ
ಕಡಸಿದ ಕನಸು?
೧ಪಾತೆಯೆಲರ ೨ಪಾತಿಯಿಲ್ಲ,
ತರಗೆಲೆಗಳ ೩ಬಟ್ಟೆಯೊಲ್ಲ
ಡೇವುದೊ ನೆನಸು? ೨೧
ತೆರೆಯಿಲ್ಲದ ಕಡಲೊಳಿಲ್ಲಿ
ದಾವ ದಾವರಂ?
ಮರಳಿಲ್ಲದ ಮರುವೊಳಲ್ಲಿ೪
ಕಾವ ಕಾವರಂ!
ಮುಗಿಲಲಿ ರವಿಶಶಿಯ ಕೀಸೆ
ಸಿಡಿವ ಕಿಡಿಯೊ ಕೆಲಮೆ ಸೂಸೆ
ಸೀವ ಸೀವರಂ? ೨೮
ಬೇಗೆ ಮಸುಕಲಿಂತು ಶಾನೆ
ದೂರವೆ ವೃಷ್ಟಿ?
ತಂಬನಿಗಿಂಬಾಗೆ ತಾನೆ
ಮೊಳೆಯದೆ ಸೃಷ್ಟಿ ?
ಹಸುರು ಹಗಲು ಹೊರಳೆ, ಹೊಂಚು
ಹಾಕದೆ ನೂರಾರು ಮಿಂಚು
ಹುಳಗಳ ದೃಷ್ಟಿ? ೩೫
ಒಮ್ಮೆ ಮುಗಿಯಲದೆ ವಸಂತ
ವಿನ್ನಹುದಳವ?
ಒಮ್ಮೆ ಮುಗಿದ ತನುವನಂತ
ರಂ ನಮಗೊಳವೆ?
ಸುಗ್ಗಿ ಮುಗಿದೆ ಮಳೆಯಲ್ಲವೆ?
ತನು ಮುಗಿದಡೆ ಕೆಳೆಯಿಲ್ಲವೆ?-
ಕೆಳೆಗೇನಳಿನೆ? ೪೨
****
೧ ಪಾತರಗಿತ್ತಿ
೨ ಪಾತಿ=ದೋಣಿ
೩ ದಾರಿ
೪ ಅಲ್ಲಿ=ಆಕಾಶದಲ್ಲಿ