ರಾಗ ಭೈರವೀ-ತ್ರಿತಾಲ
(‘ಪತಿತೋದ್ಧಾರಿಣಿ ಗಂಗೇ’ ಎಂಬ ಬಂಗಾಳೀ ಹಾಡಿನಂತೆ)
ಜಯ ಜಯ ತೌಳವ ತಾಯ ||ಪಲ್ಲ||
ಮಣಿವೆ ತಂದೆತಾಯಂದಿರ ತಾಯೇ,
ಭುವನದಿ ತ್ರಿದಿವಚ್ಛಾಯೇ ||ಅನು||
ಭಾರ್ಗವನಂದು ಬಿಸುಡೆ ಕೊಡಲಿಯ ನೀ ಕಡಲೊಡೆದೆಡೆಯಿಂ ಮೂಡಿ,
ಭಾರತಮಾತೆ ತೊಡೆಯೊಳೊಡಗೂಡಿಸೆ, ಸಹ್ಯವೀಣೆಯಂ ತೀಡಿ-
ದೆಸೆದೆಸೆ ರವಿಶಶಿ ಕಿರಣದ ಮಳೆಕುಳಿರಿನ ಮಿಸುಸೇಸೆಯ ಸೂಸೆ-
ನವನವ ರಿತುಗಾನವನವತರಿಸುವೆ, ಗಗನವನಧಿಯೋಲೈಸೆ ||೧||
ಸಾತಿಯಪುತರ ತವರ್ಮನೆ, 1ಸಾತರ ತೆಂಕಣ ನೆಲೆಮನೆಯ ಲೂಪರಾ
ಕೆಳಮನೆ, ಪಾಂಡ್ಯರ ಮೇಲ್ಮನೆ, ನೆರೆಯರಮನೆ ಕನ್ನಾಡಿನ ಭೂಪರಾ;
ಭೈರವ ಬಂಗರ ಚೌಟರಜಿಲ ಸಾವಂತರ ಮನೆಮನೆಯಿಂಬೇ,
ತುಳುವರ ತಾಯ್ಮನೆಯುಳಿದರ ಕಾಯ್ಮನೆ – ನೀನೆಮ್ಮಯ ಮನೆಯಂಬೇ ||೨||
ದೇಗುಲಗಳೊ ಧರ್ಮದ ಬಾಗಿಲಗಳೊ? ಪುಣ್ಯಘಟಂ ತಟಿನೀತಟಂ!
ಬಸದಿಗಳೋ ಕನಸೇ ಕಲ್ಲಾದುವೋ? ನೆಲಬಿರಿದೆದ್ದರೆ ಗೊಮ್ಮಟಂ?
ನಿನ್ನ ಪುಲಕವೇ ಪಸುರಿದಂತೆ ಪಸರಿಸಿದೀ ಸಸ್ಯದ ಚೆಲುವೇಂ!
ಜೀವನಸಾಮವನಾಡುನ ಪಾಡುವ ಖಗಮೃಗಪತಂಗದೊಲನೇಂ ||೩||
ಹಿಂದು ಜೈನ ಮಸ್ಲೀಮ ಕೈಸ್ತ್ರರಾವೊಂದೇ ಬಾಂಧವರೆಮ್ಮಾ
ತಂದೆ ದೇವರೊಬ್ಬನೆ, ನೀನೊಬ್ಬಳೆ ನಮ್ಮೆಲ್ಲರ ತಾಯಮ್ಮಾ!
ಎಂದಿನವಳೊ ನೀನಿಂದಿನವರೆ ನಾವಾದೊಡೆಮ್ಮನಕ್ಕರೆಯಿಂ
ನಿನ್ನೆದೆ ತೊಟ್ಟಿಲೊಳಿಟ್ಟು ಸಾಕುತಿಹೆ, ಸರಸಿಯಂತೆ ತಾವರೆಯೆಂ ||೪||
ಧನ್ಯನೆನಿತೊ ನಾ ನಿನ್ನಯ ಬಸುರಿಂದುಸುರಿಸಲೀ ಹೂವನ್ನ!
ಕೆಸರೊಳುದುರಲೀಯದೆ, ನಿನ್ನಡಿಗರ್ಪಿಸಿಕೊಳು ಸೌಸವವನ್ನ!
ಬೇಡುವೆನವ್ವಾ, ಬೀಳ್ಕೊಡುವಂದೆನ್ನನೆತ್ತಿದಂಕದಿ ನಿನ್ನ,
‘ಮರಳಿ ಬಾರ, ಕಂದಾ, ನನ್ನುದರದಿ’ ಎಂದು ತಬ್ಬಿ ಹರಸೆನ್ನ! ||೫||
*****
೧ ಸಾತವಾಹನರು