[ರಕ್ತಾಕ್ಷಿ ಸಂ| ದ ಭಾದ್ರಪದ ಬ|೫ (೧೪-೯-೧೯೨೪)ಯಿಂದ ಆಶ್ವೀಜ ಶು।೧೧ (೮—೧೦-೧೯೨೪) ಯ ವರೆಗೆ ಮಹಾತ್ಮಾ ಗಾಂಧಿಯವರು ಧಿಲ್ಲಿಯಲ್ಲಿ ಮಾಡಿದ ೨೧ ದಿನಗಳ ಉಪವಾಸ]
ಮಂಜಿನೇಕಾಂತದಲಿ ಶ್ರೀಹರಿಯ ಹಂಬಲಿಸಿ,
ಹೃದಯ ಕ್ಷುಧಯನ್ನೂಡುತೊಡಲ ಹಸಿವಿಂದಂ,
ಮನದ ರಂಭೆಯ ಗೆದ್ದು ೧ಶುಕನಾತನನ್ನೊಲಿಸಿ,
ಭಕ್ತಿಗಂಗೆಯ ಭಾರತದ ತೃಷೆಗೆ ತಂದಂ ೪
೨ಉರುವೇಲೆಯರಳಿಯಡಿಯಲಿ ಚಿರಂ ಹಸಿದರೆದು,
ಮಾರನಂ ಮುರಿದು ಸಂಬುದ್ಧನೆಮಗಗ್ಗಂ
ನಿಬ್ಬಾಣಮೊಂದೆ, ೩ತಣ್ಹೆರಣ್ಯಮಂ ತರಿದು,
ತೋರ್ದನರಿಯಟ್ಟಂಗಿಕದ ಧಮ್ಮಮಗ್ಗಂ೪ ೮
ಕಟ್ಟಳಯೆ ಕುರುಡಿನಲಿ ಬೆಳಕಿನೊಡೆಯನ ಸೋಸು
ವೆಮ್ಮೆದೆಯ ಪರೆಯ ಹೆರೆದೆಮ್ಮೊಳಗೆ ನಿಸದಂ
ನೆಲಸಿರುವ ೫ಸ್ವಾರಾಜ್ಯವೆಮಗೆ ತೋರಿಸೆ ಯೇಸು
೬ಯೋರ್ದನಿನ ಬನದಿ ನಲವತ್ತು ದಿನ ಹಸಿದಂ ೧೨
ಅರಬರೆದೆಯರಬಿಂದ೮ ನೊಂದು, ನವಜೀವನವ
ನುಪವಾಸದಿಂದರಸಿ ೯ಹಿರೆಯ ಕಂದರಿಯಿಂ
ದೇವರಲ್ಲದೆ ದೇವರಿಲ್ಲೆಮ್ಮ ಕಾವನವ
ನೆಂಬ ಸತ್ಯದಿ ಕಂಡನದನರಬರೆರೆಯಂ. ೧೬
ಗುರುವೆ ಇಪ್ಪತ್ತೊಂದು ದಿನದುಪೋಷ್ಯವ ನೋಂತು
ಧಿಲ್ಲಿಯಿಂ ನೀ ಚೆಲ್ಲಿದೀ ಪ್ರೇಮ ಬೀಜಂ
ಭಾರತದ ಭಾಗ್ಯಲತೆಯಾಗಿ ಮಡಲಿಡದೆಂತು?
ಬೆಳಸದೆಂತಮರ ಸೌದರ್ಯನಿದು ಸಾಜಂ? ೨೦
*****
೧ ಪರಿಕ್ಷಿದ್ರಾಯನಿಗೆ ಶ್ರೀಮದ್ಭಾಗವತವನ್ನು ಹೇಳುವ ದ್ವಾರಾ ಶುಕಯೋಗಿ ಭಕ್ತಿಮಾರ್ಗವನ್ನು
ಬೋಧಿಸಿದನು
೨ ಬುದ್ದಗಯೆಯ ಸಮೀಪದಲ್ಲಿರುವ ವನ
೩ ತೃಷ್ಣೆ, ವಿಷಯ ಲಾಲಸೆ
೪ ಅರಿಯೋ ಅಟ್ಟಿಂಗಿಕೋ ಧಮ್ಮ ಮಗ್ಗೊ – The noble eightfold path.
೫ ಸ್ವರ್ಗದ ರಾಜ್ಯ
೬ ಝರೋಸಲೇಮಿನ ಬಳಿಯ ಒಂದು ಹೊಳೆ
೮ ಅರಬು=ಶುಷ್ಕತೆ, ಅಜ್ಞಾನ
೯ ಮಕ್ಕದ ಸಮೀಪದಲ್ಲಿರುವ ‘ಹಿರಾ’ ಎಂಬ ಗುಡ್ಡದ ಗುಹೆಯಲ್ಲಿ ಮಹಮ್ಮದನು ಧ್ಯಾನಿಸುತ್ತಿದ್ದನು