ಮುಟ್ಟಿ ನೋಡುವೆನು ಕಾಂಚನಗಂಗೆ, ಎಂದೊಮ್ಮೆ
ಹೂಡುವದು ಗಾಳಿದೇರಿನಲಿ ಲಗ್ಗೆಯ; ಚಂದ್ರ
ಲೋಕವನು ಸೇರಬೇಕೆಂದು ಜ್ಯೋತಿಃಸಾಂದ್ರ
ಆಕಾಶ ಬಾಣಗಳನೇರಿ ಬಯಲಲಿ ಚಿಮ್ಮಿ
ನುಗ್ಗುವದು; ದುರ್‍ಬೀನುಗಳ ಚಾಚಿ ನಕ್ಷತ್ರ
ಚಕ್ರಪಸರವ ಕಣ್ಣು ತಾಗೆ ಕಾಣುವೆನೆಂದು
ನನ್ನ ಜೀವದ ನಯನ-ತೆರೆ ತಕ್ಕೆ ಬಿದ್ದಂತು
ಸಾಗರಕೆ-ತುತ್ತಲಿದೆ ಆ ವಿರಾಟ ಕ್ಷೇತ್ರ.
ನಿನ್ನ ದರ್‍ಶನ ಪೂರ್‍ಣ: ಕೂಸು ಕಣ್ಣೆರೆದಂತೆ,
ಮೊಗ್ಗೆಯೆಲರಿಗೆ ಅಲರಿದಂತೆ, ಚಿಪ್ಪಿನ ಸ್ವಾತಿ
ಹನಿಯೆ ಮುತ್ತಾದಂತೆ, ಬಸಿರಹೂವಲಿ ನಿಂತ
ನೀರೆ ಪಿಂಡಾಕಾರ ಬೆಳೆದ ಪದ್ಮಿನಿ ಜಾತಿ.
ಚಣಚಣಕು ಪರಿಪೂರ್‍ಣ ನೀನು ತಣಿದೇ ದಣಿವೆ;
ನನಗೆ ಪೂರ್‍ಣತೆಯೆಂದೊ, ನಾನು ದಣಿದೇ ತಣಿವೆ.
*****