ಅವಳು
ದೋಸೆಹಿಟ್ಟು
ತಿರುವಿ
ಬೋಸಿಗೆ ತುಂಬಿಟ್ಟು
ಇದ್ದಂಗೇ ಇರಬೇಕು
ಎಂದೆಚ್ಚರಿಕೆ ಕೊಟ್ಟು
ನೆಮ್ಮದಿಯಲಿ ಮಲಗಿ
ಏಳುವಾಗಾಗಲೇ…
ದೋಸೆಹಿಟ್ಟು
ಒಳಗೇ ಹುಡುಗಿ ಸೊಕ್ಕಿ
ಬೋಸಿ ಮೀರಿ ಉಕ್ಕುಕ್ಕಿ
ಹರಿಹರಿದು
ಹೊಸಿಲು ದಾಟಿ
ಶುಭ್ರ ಬಿಳಿಯ ನದಿಯಾಗಿ
ಚಿಮ್ಮುತ್ತಾ, ನೆಗೆಯುತ್ತಾ
ಹಾರುತ್ತಾ ಕುಣಿಯುತ್ತಾ
ಊರೆಲ್ಲಾ ಹರಿದಿತ್ತು
ಬಿಳಿನಗೆ ನಗುತ್ತಾ.
ಅಕ್ಕಿ ನೆನಸದೇ
ಉದ್ದು ನೆನಸದೇ
ಮತ್ತೆ ರುಬ್ಬದೇ
ಬಿಟ್ಟಿ ಸಿಕ್ಕ
ಕೊಕ್ಕರೆ ಬಿಳಿ
ದೋಸೆಹಿಟ್ಟು
ಊರವರೆಲ್ಲಾ ಬಾಚಿ
ಎರದದ್ದೇ ಎರೆದದ್ದು
ದೋಸೆರಾಶಿ
ಎಣಿಸಿದಷ್ಟೂ ತಪ್ಪುವ ಮಗ್ಗಿ
ಊರ ತುಂಬೆಲ್ಲಾ
ದೋಸೆ ಸುಗ್ಗಿ.
ಬೆರಗೋ ಭ್ರಮೆಯೋ
ನೆಮ್ಮದಿಯೋ ಸಂಭ್ರಮವೋ
ಆತಂಕವೋ ಅನಿಶ್ಚಿತತೆಯೋ
ಇತಿಹಾಸಕ್ಕೆ ದಾಖಲಿಸಲಿಲ್ಲ
ಊರ ಮಂದಿ
ಕಥೆಯಾದದ್ದೆಲ್ಲಾ
ಅವಳ ಪುಟ್ಟ ಬೋಸಿಯ
ದೋಸೆಹಿಟ್ಟು
ದೊಡ್ಡ ನದಿಯಾಗಿ
ಹರಿದಿದ್ದಷ್ಟೇ!
*****