ಒಂದರಳೆ ಮರದಲ್ಲಿ
ಸಂಜೆಯಾಗಿರುವಲ್ಲಿ
ಒಂದೊಂದೆ ಮರಳುವವು ಸಾಲುಗೊಂಡು :
ಒಂದೊಂದೆ ಮರಳುವವು
ಗಿಳಿಯೆಲ್ಲ ತೆರಳುವವು
ಗೂಡುಗೊಂಡಿಹ ಮರವನಿದಿರುಗೊಂಡು.
ಸಂಧ್ಯೆಯಿಂದೀಚೆಗೆನೆ
ಸ್ಮರನೆಚ್ಚ ಶರಗಳೆನೆ
ತಾಗುತಿದೆ ಗಿಳಿಹಿಂಡು ಬಂದು ಮರಕೆ.
ಕೊಂಬೆಮೇಲೆಳೆಮರಿಯು
ನಂಬಿ ತಾಯಿಯನರಿಯು-
ತಿರೆ ಮಿಡಿಯಿತೆನ್ನೆದೆಯು ದೀನ ಸ್ವರಕೆ.
ಮರ, ಸ್ಮರನ ಬೀಡೆಂದು-
ಗಿಳಿಗಾವಲಿಹುದೆಂದು-
ಗಳಹುತಿದ್ದನು ಹಳೆಯ ದಿನದ ಕವಿಯು :
ಅಂದಿನಾ ಬಾಳಿನಾ
ಇಂದಿನಾ ಹಾಳಿನಾ
ಗತಿ ಬೇರೆ ಶ್ರುತಿ ಬೇರೆ,-ಕಹಿಯು ಸವಿಯು,
ನೂರಾರು ಗಿಳಿಯ ಮನೆ-
ಯೊಳಗೊಂಡ ಮರದ ಕೊನೆ-
ಯೆಲೆಗಳಲಿ ತೂರಾಡಿ ಚೀರಾಡುತ
ಒಂದು ಗಿಳಿಯಿನ್ನೊಂದ-
ನಲ್ಲಿ ಭೀ ಥೂ ಎಂದು,
ತನ್ನದಿದು ತನಗೆಂದು ಹೋರಾಡುತ
ಬರೆ, ಕೇಳಿ ಚೀರ್‍ದನಿಯ,
ನೋಡಿಲ್ಲಿ! ಹೂಗಣೆಯ
ಹಬ್ಬ ವಿಹುದೆನಬಹುದೆ ಕಣ್ಣು ಮುಚ್ಚಿ?
ಒಂದು ಗಿಳಿಯಿನ್ನೊಂದ-
ನೆದುರಿಸಲು ಕಡುನೊಂದು
ಕದನವೆಸಗುತ ಕೂಕ್ಕೆ ಚುಚ್ಚಿ ಚುಚ್ಚಿ?
ಒಂದೊಂದು ಗಿಳಿಗೊಂದು
ಮನೆಯಿಹುದು ಇದ್ದರೂ
ಗಿಳಿಯ ಗೊಂದಣನಿಂತು ಹಾರ್‍ವುದೇಕೆ?
ಬೇರೊಂದು ಗಿಳಿಯ ಮನೆ-
ಯನ್ನು ಸೇರುತ ಕಲಹ-
ವೆಸಗಿ ತಿಳಿವಿಲ್ಲದಲೆ ಸಾರ್‍ವುದೇಕೆ?
ಎಲ್ಲರಿಗೆ ಸವಿಗನಸು,
ಎಲ್ಲರಿಗೆ ಸವಿತಿನಸು,
ಎಲ್ಲರಿಗದೆಲ್ಲವನು ಕೊಡುವಳಿಳೆಯು.
ಕಲ್ಲೆದೆಯವರು ಕೆಲರು
ಮೆಲ್ಲುವರದೆಲ್ಲವನು
ಇಲ್ಲಿಹುದು ನೋಡು ಅನ್ಯಾಯದೆಳೆಯು!
ಬಳಿಗೆ ಸುಳಿವಳು ರಾತ್ರಿ
ಇವಳೆ ಎಲ್ಲರ ಧಾತ್ರಿ!
ತಲೆಗೊಂದು ಮಂಚವನು ಮಲಗಲಿತ್ತು
ಹಗಲೆಲ್ಲ ಹಿರಿ ವಯಣ,
ಮುಗಿಲುದ್ದ ಕುಡ್ಯಾಣ-
ಕಣಿಗೊಳಿಸುವಳು ಗಿಳಿಯ, ಕ್ರಾಂತಿವೆತ್ತು.
*****