ಕಿರಿಯತನವು ಕಳೆದುದನ್ನು
ಮರೆತು ನಡೆವುದೆಷ್ಟು ಹುಚ್ಚು!
ಹರೆಯದೊಡನೆ ನಿಲುವುದೆಂತು
ಕಿರಿಯತನದ ಮುಗ್ಧತೆ?
* * *
ಹಗಲು ಹಣ್ಣು ತಿರುಗುತಿತ್ತು,
ಹೊಗೆಯ ಬಂಡಿಯೋಡುತಿತ್ತು,
ಮನದಿ, ಹಿಂದೆ ಬಿಟ್ಟುದರದು
ನೆನಪು ಬೇಯುತಿದ್ದಿತು.
ಕಳೆದ ಸುಖವ, ತಬ್ಬುವಳಲ,
ಒಳಗೆ ಕುಳಿತು ನೆನೆಯುತಿದ್ದೆ-
ಹೆಗಲ ಜಗ್ಗು ತೊದೆದರಾರೊ!
ಹಗಲ ಕನಸು ಚೆದರಿತು.
ಹಿಂದೆ ನೋಡೆ – ನಗುವ ಕಣ್ಣ
ಕಂದನೆಂದು! ತುಂಟತನದ
ಬೆಳಕ ಹೊಳೆಸಿ, ಕಣ್ಣ ನೆಟ್ಟ
ಚೆಲುವನೆಂತು ಮರೆವೆನು!
“ಬೇಡ ಕಂದ, ಹೊರಗಿನವರ
ಕಾಡಲುಂಟೆ? ಬೇಡ ಬಿಡೆಲೊ”
ಎಂದು ತಡೆವ ತಾಯ ನುಡಿಯ
ಕಂದನಂದು ಕೇಳದು.
ಅದರ ತುಂಟತನವ ಕಂಡು
ಮುದವನಾಂತೆನಂದು ನಾನು.-
ಹುಡುಗನೊದೆಗೆ ಅರ್‍ಥವುಂಟೆ?
ನುಡಿಗೆ ಕೊಂಡಿ ಇರುವುದೆ?
* * *
ಎಳೆಯನಂತೆ ಹೆಗಲ ಜಗ್ಗಿ
ಕೆಳೆಯನೊಡನೆ ಸೆಣಸಲಿಲ್ಲ;
ದಿಟ್ಟತನದಿ ನಗುವ ಕಣ್ಣ
ನೆಟ್ಟು ಜರೆಯಲಿಲ್ಲವು.
ಹರೆಯತನಕೆ ಬೆಳೆದುದನ್ನು
ಮರೆತು ನುಡಿದೆನೊಂದು ನುಡಿಯ.
ಆದರದಕೆ ಕೊಂಡಿಯಿತ್ತು,
ಎದೆಯ ಚುಚ್ಚಿ ಕೊರೆಯಿತು.
‘ಯುವಕ’ನೆನ್ನುವರಿವು, ಅಯ್ಯೊ,
ಅವನ ತೆರದೊಳೆನಗೆ ಇತ್ತೆ?
ಆದರೀಗ ಅದರ ತಿಳಿವು
ಎದೆಯನೆಂತು ಇರಿವುದು!
* * *
ಕಿರಿಯತನವು ಕಳೆದುದನ್ನು
ಮರೆತು ನಡೆವುದೆಷ್ಟು ಹುಚ್ಚು!
ಆದರೆಷ್ಟು ನೋವು: ಬಾಲ್ಯ
ಹೋದುದೆಂದು ತಿಳಿಯಲು!
*****