ಬೆಳ್ಳೂರು ಮೈಲಾರ ಶ್ರೀಕಂಠನಡಿದೆಗೆದು
ಸಾಲ್ಗುಮೀ ತಿರೆಯಲ್ಲಿ ಪಾಡಿದುದು ನೋಡಿದುದು
ಇಂದ್ರಸಭೆಯೋಳು ನಮ್ಮ ತಾಯ ಕೀರ್ತಿಯ ಹಾಡಿ
ಕನ್ನಡ ಧ್ವಜಕೀರ್ತಿಯಲ್ಲಿ ನರ್ತನ ಮಾಡಿ
ಸಾಹಿತ್ಯ ಸೊಬಗುಗಳನೆಲ್ಲರ್ಗೆ ತೋರುವೊಡೆ
ಎಲ್ಲರೊಳು ತಾ ಹೊಕ್ಕ ಹೃದಯದಲಿ ನಲಿದಾಡೆ.
ಪಂಪ ರನ್ನರ ಬಸವ ಲಕ್ಷ್ಮೀಶ ಹರಿಹರರ
ವರಕುಮಾರವ್ಯಾಸ ರಾಘವ ಪುರಂದರರ
ಕವಿಗಳಾಡುಂಬೊಲದಿ ಸರಸ ಗೋಷ್ಠಿಯೊಳೊಲಿದು
ಕನ್ನಡದ ಕರ್ಚಾಳುಗಳ ನಡೆಸಿ ತಾ ನಲಿದು
ಕನ್ನಡಾಂಬೆಯ ಪೆರ್ಮೆ ಕೂರಮೆಗಳ ನೆನೆನೆನೆದು
ನುಡಿವನದಕೋ ನಮ್ಮ ಶ್ರೀ ಕವೀಂದ್ರಂ ನಿಂದು.
ನಲಿನಲಿದು ಸಾಹಿತ್ಯದಧಿದೇವಿ ದರ್ಶನದಿ
ಒಲಿಸಿ ನಲ್ನುಡಿಯಿಂದ ತಾಯ ತೊಡೆಯಲಿ ಮುದದಿ
ಮಂಡಿಸುತಲೊರೆಸಿರ್ದ ತಾಯ್ಕೊರಗ ಮರೆಸಿರ್ದ
ವೆತೆಗಳಂ ತೊರೆಯಿಸುತ ಮತ್ತೊಮ್ಮೆ ನಗಿಸಿರ್ದ
ಕನ್ನಡದ ತಾಯ್ನೋಟಮನ್ನೊರೆದು ಸೊಗಸಿರ್ದ
ಬಿಜಗೆಯ್ಸಿ ದೇವಿಯಂ ಕೀರ್ತಿಯನ್ ಪಾಡಿದನ್.
ತನ್ನಂತೆ ತರುಣರಂ ಕಿರಿಯರಂ ಹಿರಿಯರಂ
ಕನ್ನಡದ ನುಡಿಸೇವೆಯಲಿ ನಡೆಸಿ ಅಣಿಯರಂ
ಧರ್ಮದಲಿ ಕರ್ಮದಲಿ ತ್ಯಾಗದಲಿ ಭೋಗದಲಿ
ತೋರಿಸಿದ ಕರ್ಣಾಟ ಕವಿತಿಲಕ ನಡೆಗಳಲಿ
ಅಗಲಿದ ಕಣ್ಣೀರ ಹೊಳೆಹರಿಸಿ ಮತಿ ಮರೆಸಿ
ನಮ್ಮೆಲ್ಲರೊಲವೊಯ್ದು ಮರೆಯಾದನತಿ ಸರಸಿ.
ಎಲ್ಲಿರಲಿ ಎಂತಿರಲಿ ಅವರ ನಡೆನುಡಿ ಮನವು
ಗಾಂಭೀರ್ಯ ರಸಜೀವ ನಗು ಹಾಸ್ಯ ಚೆಲುವೊಲವು
ಭೀಷ್ಮರಾ ಹಿರಿತನವ ತಳೆದು ತಾ ಹೂಳೆದಿಹರು.
ಸರ್ವರನು ನಡಯಿಸುತ ಮಾರ್ಗದಲಿ-ಮೆರೆದಿಹರು.
ಕರ್ಣಾಟ ಕಣ್ನೋಟ ತಣ್ನೋಟಮಂ ಕಂಡು
ಶ್ರೀಯೋಲಿಯೆ ಎಚ್ಚರಾದುದು ನಮಗೆ ಸವಿಯುಂಡು.
*****