ವೃಷಭಾವತಿ ಒಮ್ಮೆ ಹರಿದು ಉಕ್ಕೇರಿ ನೆಲ ಜಲ ಹೊಲ
ಭೇದ ಭಾವವಿಲ್ಲದೇ ಉಣಿಸಿದ್ದಳು ಎಲ್ಲರನೂ ತಣಿಸಿದ್ದಳು
ಈಗೇಕೆ ವಿಷವಾದೆ ನಾನು ಎಂದು ಪರಿತಪಿಸುತ್ತಾಳೆ. ತನಗೆ ವಿಷ
ವೂಡಿದವರ ಕಾಣಲಾಗದೇ ಹಿಡಿಯಲಾಗದೇ ತಡೆಯಲಾಗದೇ ಹೀಗೆ
ತುಂಬಿ ಹರಿಯುತ್ತಿದ್ದ ನದಿಗೆ ವಿಷವಿಕ್ಕಿದವರ್‍ಯಾರು ಕಾಲವೆ?
ಕಾಳಜಿಯೆ? ಸ್ವಾರ್‍ಥವೇ? ಮತ್ಸರವೇ? ಅಥವಾ ಒಳಗಿನದೇ
ಏನೋ ತಾಪವೆ? ತೋಚುವುದಿಲ್ಲ ನನಗಂತೂ ಏನೂ
ಈಗಿಲ್ಲಿ ಮಿಂದವರೇ ಪಾಪಿಗಳು ಅವರ ತಲೆ ತುಂಬ ಹೇನು.
ಉರಿವ ಸೂರ್‍ಯನಿಗೂ ಇಲ್ಲ ಕರುಣೆ
ಆವಿಯಾಗಿಸಿ ಬಿಡುತ್ತಾನೆ ನನ್ನೆಲ್ಲ ಬವಣೆ
ಸುರಿಸುವುದೂ ಇಲ್ಲ ನನ್ನೆದೆಯ ಜಲವ ನನಗೆ
ಮಳೆಯಾಗಿಸಿ ಕೊಂಡೊಯ್ಯುತ್ತಾನೆ ಇನ್ನೊಬ್ಬರ ಮನೆಗೆ
ಕಚ್ಚುವಂತಾದುದೇಕೆ ನಾನು ವಿಷ ಸರ್ಪದಂತೆ
ಕೇಳಿ ಭಾರತದ ಎಲ್ಲ ಕಾರ್‍ಖಾನೆಗಳ ತೆಗೆಸಿ ಅವರ
ಲೆಕ್ಕ ಪತ್ರದ ಕಂತೆ. ಅವರಿಗೆ ಬೇಕಿತ್ತೆ ಹೇಳಿ
ಹರಿವ ಜೀವದಾಯಿನಿಯಲ್ಲಿ ಅವರ ಕೊಳಕು ಜಲಕೇಳಿ
ಅಂದಿನೊಬ್ಬ ಪ್ರಿಯಕರ ಬಂದು ಕೇಳುತ್ತಾನೆ ಮತ್ತೆ ಮತ್ತೆ
ವೃಷಭಾವತಿ ಹರಿಯಲಾರೆಯ ನೀನು ಹಿಂದಿನಂತೆ
ಹರಿವ ಬಯಕೆ ನನಗಿದೆ ಗೆಳೆಯ ಹರಿದೇನು ನಾನು
ತುಂಬಿ ಸುರಿದೇನು ನಾನು ಸೋಸಿಬಿಡು ಈ ಕೊಳೆಯ
ಪಿಸು ಮಾತಿನಲಿ ಉಸುರುತ್ತೇನೆ ನಾನು
ದಿನ ದಿನದ ಧಾರೆಯಲಿ ಕಾಯುತ್ತೇನೆ ಅವನಿಗಾಗಿ
ಮತ್ತೊಮ್ಮೆ ಅಮೃತವಾಗಿ ಹರಿವ ಬಯಕೆ ಅದ್ಯಮವಾಗಿ
ಎತ್ತಿಕೋ ಗೆಳೆಯಾ ಹಿಡಿದಪ್ಪಿಕೋ ಹೀಗೆ, ಒಳಗಿನ ಕಲ್ಮಶ
ಒಳಗೇ ಉಳಿದು ತಿಳಿನೀರು ಬರುವ ಹಾಗೆ ಮತ್ತೊಮ್ಮೆ
ನನ್ನೆದೆಯ ಅಲೆಗಳಲಿ ಈ ಜೋಣ ಹೀಗೆ ಮತ್ತೆಂದೂ
ಒಳಸರಿಯದ ಹಾಗೆ ನೆಲಮುಗಿಲ ನಡುವಣ ಪ್ರಕೃತಿಯ ಹಾಗೆ
ತಡೆದು ನಿಲ್ಲಿಸು ಆ ಕಾರ್‍ಖಾನೆಗಳ ಕೊಳಕು ಧಾರೆ
ಹರಿಯ ಬಿಡು ಅವುಗಳನ್ನು ಆ ಸಮುದ್ರದ ಮೇರೆ
ಆ ದೈತ್ಯನಾದರೋ ಎಲ್ಲವನು ನುಂಗಿ ನೀರು ಕುಡಿದಾನು
ಹಬ್ಬಿಕೊಳ್ಳಲಿ ನಮಗೆ ನಮ್ಮ ನೆಲದಡಿಯ ಬಾನು
*****
-ಕರ್ಮವೀರ ದೀಪಾವಳಿ ವಿಶೇಷಾಂಕ