ಅಕ್ಕ ಮಹಾದೇವಿಯ ಹಾಡು

ಅಂಕ ಬಂಕಽದೆವನ| ಟೊಂಕಿನ ಮ್ಯಾಲ ಕೈಽಯಿಟ್ಟು |
ಡೊಂಕಽ ನಿಂತಾನ ಇವನ್ಯಾರ| ಕೋಲೆಣ್ಣ ಕೋಲ ||೧||

ಅವ ನನ್ನ ಅಽಣ್ಣನ| ಅವ ನನ್ನ ತಽಮ್ಮನ|
ಅವ ನನ್ನ ಊರ ಒಡಿಯಽನ| ಕೋ ||೨||

ಅವಽ ನನ್ನ ಊರ| ಒಡಿಯಽನ ನನ್ನ ಮಗಳ|
ಅವನಿಽಗಿ ನಿನಗ ಕೊಡತೀನ| ಕೋ ||೩||

ನೀವು ಜಯಽನರು| ನಾವು ನಿಗೊಂಽತರು|
ಕೊಟ್ಟರೊಲ್ಲೆೊಽನ ಜಯನರಿಗಿ| ಕೋ ||೪||

ಶಾಂವಿಽಗಿನಾಽಗತಾವ| ಸೈದಾನನಾಽಗತಾವ|
ಇಂದ್ಯಾನ ಇವರ ಮನಿಯಾಗ| ಕೋ ||೫||

ಇಂದ ಯಾನಽ ಇವರ| ಮನಿಯಾಗ ಹಡದವ್|
ಅವ್ವನೌವ್ಸತ್ತ ದಿನಗಳ| ಕೋ ||೬||

ಹೆಪ್ಪಽಳನಾಽಗತಾವ| ಶೆಂಡಿಽಗಿನಾಽಗತಾವ|
ಇಂದ್ಯಾನ ಇವರ ಮನಿಯಾಗ| ಕೋ ||೭||

ಇಂದ ಯಾನಽ ಇವರ| ಮನಿಯಾಗ ಹಡದವ್ನ|
ಅಪ್ಪನಪ ಸತ್ತ ದಿನಗೋಳ| ಕೋ ||೮||
* * *

ನನ್ನೂರ ಹಾಽದೀಲಿ| ನಿಬ್ಬಽಣ ಬರತಽದ|
ನೀ ಏರಿ ನೋಡ ನನ ಮಗಳ | ಕೋ ||೯||

ನಾ ಏರಿ ನೋಡಲಕ| ನನ್ನ ತವಽರಲ್ಲ|
ನೀ ಏರಿ ನೋಡ ಹಡದವ್ವಾ| ಕೋ ||೧೦||

ಎಣ್ಣಿಽಯ ಕೊಡೆಗೋಳು| ಬಣ್ಣದಲಿ ಬರೂತಾವ|
ಮಣ್ಣಗ ಬಿದ್ದು ಒಡಿಯಽಲಿ| ಕೋ ||೧೧||

ಮಣ್ಣಿನೊಳಽಗ ಬಿದ್ದು| ಒಡಿಯಽಲಿ ಈ ಊರ
ಹೆಣ್ಣ ಖೋಡೆಂದು ತಿರುಗಲೆ| ಕೋ ||೧೨||

ತುಪ್ಪಽದ ಕೊಡಗಽಳೂ| ಒಪ್ಪದಲಿ ಬರೂತಾವ|
ತಿಪ್ಸ್ಯಾಗ ಬಿದ್ದು ಒಡಿಯಲಿ। ಕೋ ||೧೩||

ತಿಪ್ಪಿಯಾಗಽ ಬಿದ್ದು| ಒಡಿಯಽಲಿ ಈ ಊರ|
ಮಿತ್ರಿ ಖೋಡೆಂದು ತಿರುಗಲೆ| ಕೋ ||೧೪||

ಛೆಜ್ಜಿಽಯ ಹೊಲದಾಗಽ| ಛೆಲ್ಲ್ಯಾಡೊ ನಿಽಬ್ಬಣ|
ಫಿಲ್ಲ್ಯಾ ಇಡಬರ ನನ ಮಗಳ| ಕೋ ||೧೫||

ಆ ಫಿಲ್ಲ್ಯಾ ನಾಽ ಒಲ್ಲ| ಈ ಫಿಲ್ಲ್ಯಾ ನಾಽ ಒಲ್ಲ!
ಕೊಟ್ಟರೊಲ್ಲೆಽನ ಜಯನರಿಗಿ| ಕೋ ||೧೬||

ಹೆತ್ತೀಯ ಹೊಲದಾಗ| ಒತ್ತ್ಯಾಡೊ ನಿಽಬ್ಬಣ|
ನತ್ತ ಇಡೆಬಾರ ನನ ಮಗಳ| ಕೋ ||೧೭||

ಆ ನತ್ತ ನಾಽ ಒಲ್ಲ| ಈ ನತ್ತ ನಾಽ ಒಲ್ಲ|
ಕೊಟ್ಟರೊಲ್ಲೆಽನ ಜಯನರಿಗಿ| ಕೋ ||೧೮||
* * *

ಊದೆಸ್ತ ಬಾರಸ್ತ| ಸೋಬಾನ ಹಾಡುಽತ|
ಬಂದನ ಮುದಮಗ ಅಗಸಿಽಗಿ| ಕೋ ||೧೯||

ಆಗಸಿಽಯ ತೆರಿಽ ನನ್ನ| ಬಗಸುಳ್ಳ ತಳಽವಾರಾ|
ಬೊಗಸಿ ತುಂಬಡಕಿ ಬಿಳಿ ಎಲಿಯ| ಕೋ ||೨೦||

ಊದಸ್ತ ಬಾಽರಸ್ತ| ಸೋಬಾನ ಹಾಽಡುತ
ಬಂದನ ಮದುಮಽಗ ಬಾಗಿಲಿಗಿ| ಕೋ ||೨೧||

ಬಾಗಿಲದಾಗಿಽನ ಕುದುರಿ| ಕಾಲಮ್ಯಾಲಾಽಗಲಿ|
ಮದುಮಗ ಕಾಳಿಂಗ ಮಡಿಯಽಲಿ| ಕೋ ||೨೨||
* * *

ನಮ್ಮೌವ್ವಾ ಕಟ್ಟ್ಯಾಳ| ಎಳ್ಳ ಹೆಚ್ಚಿಽದ ರೊಟ್ಟಿ|
ಕೂಡುಂಬುನು ಬಾರ ನನ ಮಗಳ| ಕೋ ||೨೩||

ನೀವು ಜೈಯಽನರು| ನಾವು ನಿಂಗೊಂಽತಽರು|
ನಿಮ್ಮಲ್ಲಿ ನಾವು ಉಣಬರದ| ಕೋ ||೨೪||

ಪಟ್ಟೋಳಿ ಸೀಽರ್ಹೆರಿದು| ಬುತ್ತಿಽಯ ಕಽಟ್ಟಿದ|
ನೀರ ಕಂಡಲ್ಲಿ ಇಳಿದುಣ್ಣ| ಕೋ ||೨೫||

ಇವೂ ಬುತ್ತಿಽಗಳು| ನೀವು ಮುಟ್ಟಿರತೀರಿ|
ನಾ ಉಣುದಿಲ್ಲ ಹೆಡೆದವ್ವ| ಕೋ ||೨೬||

ಹಿಟ್ಟ ಅಕ್ಕೀಯ ತಗೋ| ಬ್ಯಾಳಿ ಬೆಲ್ಲಽವ ತಗೋ|
ಮಾಡಿಕೊಂಡುಣ್ಣ ನಿನ್ನಡಿಗಿ| ಕೋ ||೨೭||

ಹಿಟ್ಟಕ್ಕಿ ತಗೊಂಽಡಾಳ ಬ್ಯಾಳಿ ಬೆಲ್ಲ ತಗೊಂಡಾಳ|
ಹ್ವಾದಾಳ ಸಂಗಯನ ಗುಡಿಯಾಗ| ಕೋ ||೨೮||

ಎಡಕಾದರ ಸುಳಽವಿಲ್| ಬಲಕಾದರ ಸುಳಽವಿಲ್ಲ|
ಎಲ್ಲ್ಯಾದರಕಿಯ ಸುಳವಿಲ್| ಲಕೋ ||೨೯ ||
*****

ಹೆಣ್ಣುಮಕ್ಕಳು ಈ ಹಾಡಿಗೆ `ಜೈನರ ಹಾಡು’ ಎಂದು ಎನ್ನುತ್ತಾರೆ. ಆದರೆ ಇದರ ಕಥೆಯು ಆಕ್ಕಮಹಾದೇವಿಯ ಕಥೆಯೊಡನೆ ಬಹಳವಾಗಿ ಹೋಲುತ್ತಿರುವುದರಿಂದ ನಾವು ಇದಕ್ಕೆ ಮೇಲ್ಕಂಡ ಹೆಸರನ್ನು ಕೊಟ್ಟಿದ್ದೇವೆ. ನಮ್ಮ ಊಹೆಯು ಬಹಳ ಮಟ್ಟಿಗೆ ಸರಿಯಾಗಿದೆಯೆಂದು ತೋರುತ್ತದೆ. ಹಾಗಿದ್ದುದಾದರೆ ಈ ಹಾಡಿಗೆ ಐತಿಹಾಸಿಕ ಮಹತ್ವವು ಅತಿಶಯವಾಗಿ ಉಂಟು.

ಮಗಳು ಮತ್ತು ತಾಯಿ ಇವರಿಬ್ಬರ ಸಂವಾದವಿದು. ತಾಯಿಯ ತವರವರು ಜೈನರು. ಕೊಟ್ಟ ಮನೆ ಲಿಂಗವಂತರದು. ತಾಯಿಯು ತನ್ನ ಸೋದರನಿಗೆ ಮಗಳನ್ನು ಕೊಡಲೆಳಸುತ್ತಾಳೆ. ಆದಕ್ಕೆ ಅವಳು ಒಪ್ಪುವುದಿಲ್ಲ. ತಾಯಿಯ ಸೋದರನು ತನ್ನೂರ ಒಡೆಯನೆಂದು ಹೇಳಲಾಗಿದೆ (೧-೪). ಮಗಳ ಒಪ್ಪಿಗೆ ಇಲ್ಲದಿದ್ದರೂ ಮನೆಯಲ್ಲಿ ಲಗ್ನದ ಸಾಹಿತ್ಯಕ್ಕೆ ಆರಂಭವಾಗುತ್ತದೆ. ಅದನ್ನೆಲ್ಲ ಅವಳು ತಿರಸ್ಕರಿಸುತ್ತಲೇ ಇರುತ್ತಾಳೆ(೫-೮). ಲಗ್ನದ ಸಂಭ್ರಮಕ್ಕೆಂದು ವರನ ಊರಿನಿಂದ ನಿಬ್ಬಣವು ಹೊರಡುತ್ತದೆ. ಇತ್ತ ತಾಯಿಯು ಉಬ್ಬಿನಿಂದ ಮಗಳನ್ನು ಶೃಂಗರಿಸಲೆಳಸುತ್ತಾಳೆ. ಅದಕ್ಕೆ ಅವಳೊಪ್ಪುವುದಿಲ್ಲ(೯-೧೮). ಕೊನೆಗೆ ವರನು ವೈಭವದಿಂದ ಮನೆಯ ಬಾಗಿಲಿಗೆ ಬಂದಾಗ ಕನ್ನೆಯು ಶಪಿಸುತ್ತಾಳೆ (೧೯-೨೨). ಅಂತೂ ಒತ್ತಾಯದಿಂದ ಅವಳ ಮದುವೆ ಮುಗಿಯವುದೆಂದು ತೋರುತ್ತದೆ. ಹಾಡಿನಲ್ಲಿ ಈ ಮಾತಿನ ಬಗೆಗೆ ಏನೂ ಉಲ್ಲೇಖವಿಲ್ಲ. ನಂತರ ತಾಯಿಯ ತವರುಮನೆಯಿಂದ ಬಂದ ಬುತ್ತಿಯ ಊಟದ ಸಲುವಾಗಿ ತಾಯಿಮಕ್ಕಳಲ್ಲಿ ವಾಗ್ವಾದವಾಗುತ್ತದೆ. ಮಗಳನ್ನು ಗಂಡನ ಮನೆಗೆ ಕಳಿಸುವಾಗ ಬುತ್ತಿಗೆ ಬದಲು ಹಿಟ್ಟು, ಅಕ್ಕಿ ಮುಂತಾದ ಒಣ ಜೀನನುಗಳನ್ನು ಕಟ್ಟಿಕೊಡುತ್ತಾರೆ. ಕನ್ನೆಯು ಆ ಸಾಹಿತ್ಯ ವನ್ನೆಲ್ಲ ತೆಗೆದುಕೊಂಡು ಒಂದು ದೇವಾಲಯದಲ್ಲಿ ಹೋದವಳು ಅಲ್ಲಿಯೇ ಮಟ್ಟಮರೆಯಾಗಿಬಿಡುತ್ತಾಳೆ. ಇದೆರ ಮುಂದೆ ಅವಳ ಸಮಾಚಾರವೇ ಯಾರಿಗೂ ಗೊತ್ತಾಗುವುದಿಲ್ಲ (೨೩-೨೯).

ಛಂದಸ್ಸು:- ತ್ರಿಪದಿಗೆ ಸಮೀಪವಾಗಿದೆ.

ಶಬ್ದ ಪ್ರಯೋಗಗಳು:- ಅಂಕಬಂಕ=ಸೊಟ್ಟ ಪಟ್ಟ. ಡೊಂಕ=ವಕ್ರ. ಸೈದಾನ=ಸವಿಜೀನಸು. ಸತ್ತದಿನ=ಉತ್ತರಕ್ರಿಯೆ. ನಿಬ್ಬಣ=ಲಗ್ನಕ್ಕೆ ಬಂದ ಬೀಗರ ಗುಂಪು. ಬಣ್ಣದಲ್ಲಿ=ಒಪ್ಪಿನಿಂದ. ಖೋಡಿ=ಕೆಟ್ಟ (ಅವಲಕ್ಷಣ). ಛೆಜ್ಜಿ=ಸಜ್ಜೆಯ ಬೆಳೆ. ಛೆಲ್ಯಾಡು=ಹೊರಚೆಲ್ಲು. ಒತ್ತಾಡು=ತಾಕಲಾಡು. ಸೋಬಾನ=ಶೋಭನ. ಬಗಸುಳ್ಳ=ಬಲವುಳ್ಳ (ಗಟ್ಟಿಗನಾದ). ತಳವಾರ=ಅಗಸೆಯ ಕಾವಲುಗಾರ. ಕಾಲಮ್ಯಾಲಾಗಲಿ=ಸಾಯಲಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆ ಸುರಿಯಲಿ ಹೊಳೆ ಹರಿಯಲಿ
Next post ರಾಘವೇಂದ್ರ ಗದಗ್‌ಕರ್

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…