ಧ್ವನಿಸಿ ಬಯಲಾಗುತಿಹ ಸುರಗಾನದಂತೆ,
ಕನಸಿನಲಿ ಗೈದಿರುವಮೃತ ಪಾನದಂತೆ,
ವನಧಿಯಡಿಯಿಂದೆದ್ದಳಿವ ಫೇನದಂತೆ,
ಜನಿಸಿ ಬಾಲ್ಯಸ್ಮರಣೆ ಬೆಳಗಿಪುದು ಮನವಾ.
ಮುದಿತಂದೆ ಎಲುಬುಗೂಡಿನ ಬೆನ್ನನೇರಿ,
ತೊದಲುಲಿಯ ಚುರುಕಿಂದ ಚಪ್ಪರಿಸಿ ಚೀರಿ,
ಕುದುರೆಯಾಟವಗೈದ ನೆನಪೊಂದು ಬಾರಿ,
ಉದಿಸಲಿಂದೀವುದೀ ಎದೆಗೆ ಚಂದನವಾ.
ಮದುವೆಯಾಗುವ ಮುನ್ನ ನನ್ನಕ್ಕ ತನ್ನ
ಬದಿಯ ಗೆಳತಿಯರೊಡನೆ ಕೂಳಾಟವನ್ನ
ಒದವಿಸೆನಗಿತ್ತ ಹಪ್ಪಳ ಹುರಿಯ ಅನ್ನ
ಅದೆ ಕೊಡುವುದೀಗೆನಗೆ ಮಧುರ ಭೋಜನವಾ.
“ತಂಗಿ, ನೀ ಅಳಬೇಡ, ತರುವೆ ನಾನೊಂದು
ಉಂಗುರವ ಮುದ್ದಿಡುವ ವಜ್ರವನು” ಎಂದು,
ಮುಂಗಾರಿನಿರುಳಲ್ಲಿ ಮಿಂಚುಹುಳ ತಂದು
ಸಿಂಗರಿಸಿದುದೆ ಕೊಡುವುದಮೃತ ಸೇಚನವಾ.
ವೀರಕಚ್ಚೆಯ, ಕೂದಲಿನ ಮೀಸೆ ಧರಿಸಿ,
ಶ್ರೀರಾಮನೆಂದಾಡಿ “ಹಾ! ಪ್ರಾಣದರಿಸಿ!
ಬಾ! ರಮಣೆ!” ಎಂದು ನಾ ಕುಣಿದುದನು ಸ್ಮರಿಸಿ,
ಹಾರುವುದು ಬಗೆಯ ಗೈದಂಗ ನರ್‍ತನವಾ
ಬಣ್ಣ ಕಾಗದದ ಚೆಲು ಮಂಟಪವ ಮಾಡಿ,
ಮಣ್ಣಗೊಂಬೆಯ ದೇವರೆಂದು ಕೊಂಡಾಡಿ,
“ಅಣ್ಣನನ್ನು ಬದುಕಿಸಿಕೊಡೆ”ಂದು ವರಬೇಡಿ,
ಕಣ್ಣೀರ್ ಮಿಡಿದ ನೆನಹು ಮೀಪುದು ನಯನವಾ.
ಸಂದ ಬಾಲ್ಯವೆ ಬಾರೆ, ನಿನ್ನ ಬಿಡಲಾರೆ;
ಅಂದು ನಿನ್ನೊಡನಿದ್ದು, ಕಂಡು ಕಣ್ಣಾರೆ,
ಕಂದ ನಾನಾದಂತೆ, ಓ ಸುಖ ವಿಹಾರೆ!
ಇಂದಾದೆ ಹಾಡಿ ಬಾಲ್ಯದ ಚೌಪದನವಾ
*****
(ಕವಿಶಿಷ್ಯ)