“ಎಲ್ಲಿಂದ ಬರುತಿಯೆ? ನೀರನ್ನು ತರುತಿಯೆ?
ಒಳ್ಳೇದಾಗಿರುತೀಯೆ, ನೀನು?
ಎಲ್ಲಿಗೆ ಹೋಗುವೆ? ನೀರನ್ನು ಸಾಗುವೆ?
ಕಡೆಗೆ ಏನಾಗುವ, ನೀನು?”
“ಬೆಟ್ಟದಾ ಹೊಡೆಯಲ್ಲಿ ಹುಟ್ಟಿದ ಹನಿಯಾಗಿ;
ತೊಟ್ಟಾದೆ ತಟುಕಾದೆ, ನಾನು.
ಬೆಟ್ಟಾದೆ, ಬೆರಳಾದೆ, ತೋಳಾದ, ತೊಡೆಯಾದೆ,
ಪುಟ್ಟ ತೋಡಾದೆನು ನಾನು.
“ಮಲೆಮರಗಳ ಮರೆಯಲ್ಲಿ ಮಲಗಿದೆನು;
ಮಳೆ ಬಿದಿರೆಲೆಯಿಂದ ಬಂದಾ
ಬೆಳಕಿಗೆ ಎಚ್ಚೆತ್ತು ಹೊರಬಂದೆ ಹರಿದಾಡಿ,
ನಲಿದಾಡಿ ಸಂತೋಷದಿಂದಾ.
“ಆಡುತ್ತ, ಸುತ್ತಲು ನೋಡುತ್ತ, ತೊರೆಯನ್ನು
ಕೂಡುತ್ತ, ಓಡುತ್ತ ಬಂದೆ;
ದೂಡುತ್ತ ಕಲ್ಲನ್ನು, ಮಾಡುತ್ತ ಗುಲ್ಲನು,
ಹಾಡುತ್ತ, ನೀಡುತ್ತ ಬಂದೆ.
“ಭಾರಿ ಎತ್ತರದಿಂದ ಹಾರಿದೆ ಹೆಸರಾಯ್ತು;
‘ನೀರಿನ ಜೋರಿನ ಜೋಗು’;
ಊರಿನ ಜನರನ್ನು ಕಿವುಡು ಮಾಡಿತು ನನ್ನ
ಭೋರನೆ ಕೂಗುವ ಕೂಗು.”
*****
(ಕವಿಶಿಷ್ಯ)